ಬಹು ನಿರೀಕ್ಷೆಯ ಕಿರಣ್ ಬೇಡಿ ಚಿತ್ರ ಬಿಡುಗಡೆಯಾಗಿದೆ. ಮಾಲಾಶ್ರೀ ಅಭಿಮಾನಿಗಳಿಗೆ ಈ ಚಿತ್ರ ಹೇಳಿ ಮಾಡಿಸಿದಂತಿದೆ. ಮಾಲಾಶ್ರೀಯ ಒಂದೊಂದು ಫೈಟ್‌ಗಳನ್ನು ನೋಡುತ್ತಿದ್ದರೆ ಮೈ ಜುಮ್ಮೆನಿಸುತ್ತದೆ. ಆ ಮಟ್ಟಿಗೆ ಅವರು ಇಲ್ಲಿ ಸಾಹಸ ಮಾಡಿದ್ದಾರೆ. ಆದರೆ ಚಿತ್ರಕಥೆಗೆ ಬಗ್ಗೆ ಗಮನ ಹರಿಸಿದರೆ ಕಳೆದ ವಾರವಷ್ಟೇ ಬಿಡುಗಡೆಯಾದ ವೀರಮದಕರಿಯ ಕಥೆಗೂ ಇಲ್ಲಿನ ಕಥೆಗೂ ಸಾಮ್ಯತೆ ಇದೆ.
ನಿರ್ದೇಶಕ ಓಂ ಪ್ರಕಾಶ್ ರಾವ್ ತೆಲುಗಿನ ವಿಕ್ರಮಾರ್ಕುಡು ಚಿತ್ರದ ಪ್ರೇರಣೆಗೊಳಗಾಗಿದೆ. ಇಲ್ಲೂ ಅಷ್ಟೇ ಮಾಲಾಶ್ರೀ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ಒಂದರಲ್ಲಿ ಕಿರಣ್ಬೇಡಿಯಾದರೆ ಮತ್ತೊಂದರಲ್ಲಿ ಬಳ್ಳಾರಿ ಭಾಗ್ಯಲಕ್ಷ್ಮೀಯಾಗಿ ದುಷ್ಟರನ್ನು ಚೆಂಡಾಡುತ್ತಾರೆ.
ಮಾಲಾಶ್ರೀ ಈ ವಯಸ್ಸಿನಲ್ಲೂ ಮತ್ಯಾವ ನಾಯಕಿಯೂ ಮಾಡದಂತಹ ಸಾಹಸ ಮಾಡಿದ್ದಾರೆ. ತಮ್ಮ ನಟನೆಯಲ್ಲಿ ಫ್ರೆಶ್ನೆಸ್ ಉಳಿಸಿಕೊಂಡಿದ್ದಾರೆ. ಮಾಲಾಶ್ರೀ ಮೇಲೆ ಅವರ ಅಭಿಮಾನಿಗಳು ಇಟ್ಟ ಪ್ರೀತಿಗೆ ಮೋಸವಾಗದಂತೆ ನಟಿಸಿದ್ದಾರೆ. ಚಿತ್ರದಲ್ಲಿ ಐದಾರು ಫೈಟ್‌ಗಳಿವೆ. ಆದರೆ ಪ್ರತಿ ಫೈಟ್‌ಗಳು 15 ನಿಮಿಷಕ್ಕೂ ಹೆಚ್ಚಿವೆ.
ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಚಕಚಕನೇ ಓಡುವ ಎಡಿಟಿಂಗ್. ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ಚಿತ್ರದಲ್ಲಿ ಬರುವ ಹಂಸಲೇಖಾ ಅವರ ಸಂಗೀತ ಮುದ ನೀಡುತ್ತದೆ. ಉಳಿದಂತೆ ಮಾಲಾಶ್ರೀ ತಂದೆಯ ಪಾತ್ರದಲ್ಲಿ ನಟಿಸಿದ ಶ್ರೀನಿವಾಸ್ ಮೂರ್ತಿ ತಮ್ಮ ಭಾವನಾತ್ಮಕ ಅಭಿನಯದಿಂದ ಗಮನ ಸೆಳೆಯುತ್ತಾರೆ. ಉಳಿದಂತೆ ಕಾಮಿಡಿ ವಿಲನ್ ಆಗಿ ರಂಗಾಯಣ ರಘು ಗಮನ ಸೆಳೆಯುತ್ತಾರೆ. ಉಳಿದಂತೆ ವಿಲನ್ ಪಾತ್ರದಲ್ಲಿ ಆಶೀಶ್ ವಿದ್ಯಾರ್ಥಿ ಅಬ್ಬರಿಸುತ್ತಾರೆ. ಈ ವಯಸ್ಸಿನಲ್ಲೂ ಮಾಲಾಶ್ರೀಯ ಫೈಟಿಂಗ್ ನೋಡಲಾದರೂ ಒಮ್ಮೆ ಚಿತ್ರ ನೋಡಲೇಬೇಕು.