ಸಾಮಾನ್ಯವಾಗಿ ಪ್ರೀತಿಸಿದ ಹುಡುಗಿ ಕೈ ಕೊಟ್ಟರೆ ಹುಡುಗರು ಏನು ಮಾಡುತ್ತಾರೆ? ಒಂದೋ ಗಡ್ಡ ಬಿಟ್ಟು ದೇವದಾಸ್ ಥರ ಅಲೆಯುತ್ತಾರೆ. ಇಲ್ಲವಾದರೆ ನೋವನ್ನು ಸಹಿಸಿಕೊಂಡು ಮೌನಿಯಾಗಿರುತ್ತಾರೆ. ಆದರೆ 'ಜಾಜಿಮಲ್ಲಿಗೆ'ಯಲ್ಲಿ ನಾಯಕ ಮಾತ್ರ ಸುಮ್ಮನಿರುವುದಿಲ್ಲ. ಪ್ರೀತಿಸಿ ಕೈ ಕೊಟ್ಟ ಹುಡುಗಿಗೆ ತಕ್ಕ ಪಾಠ ಕಲಿಸಬೇಕೆಂದು ಕೋರ್ಟ್‌ಗೆ ಹೋಗುತ್ತಾನೆ. ಅಲ್ಲಿ ವಾದಿಸುತ್ತಾನೆ. 'ಕೊಲೆ ಮಾಡಿವದವರಿಗೆ ಮರಣದಂಡನೆ ಶಿಕ್ಷೆ ಕೊಡುತ್ತೀರಿ. ಆದರೆ ಪ್ರೀತಿಸಿ ಕೈ ಕೊಟ್ಟವಳಿಗೆ ಯಾವ ಶಿಕ್ಷೆ ವಿಧಿಸುತ್ತೀರಿ?' ಎಂದು ನ್ಯಾಯಾಲಯವನ್ನು ಪ್ರಶ್ನಿಸುತ್ತಾನೆ.
ಈ ವಾರ ಬಿಡುಗಡೆಯಾದ 'ಜಾಜಿಮಲ್ಲಿಗೆ' ಚಿತ್ರ ಇಂತಹ ಒಂದು ವಿಶಿಷ್ಟ ಕಥೆಯನ್ನು ಒಳಗೊಂಡಿದೆ. ಈ ಹಿಂದೆ ಅನೇಕ ಪ್ರೇಮಕಥೆಗಳು ಬಂದಿದ್ದರೂ ಪ್ರೀತಿಸಿದ ಹುಡುಗಿಯ ವಿರುದ್ಧ ನಾಯಕ ದಾವೆ ಹೂಡುವ ಚಿತ್ರ ಬಂದಿರಲಿಲ್ಲ. ತಮಿಳಿನ 'ದೇವತೈ ಕಂಡೇನ್' ಚಿತ್ರದ ರೀಮೇಕಾದರೂ ನಿರ್ದೇಶಕ ಅನಂತರಾಜು ಚಿತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ.
ಶ್ರೀಮಂತ ಕುಟುಂಬದ ಹುಡುಗಿ ಹಾಗೂ ಟೀ ಮಾರುವ ಹುಡುಗನ ನಡುವೆ ಪ್ರೇಮಾಂಕುರವಾದರೆ ಆಗುವ ಕೆಲವು ಅವಾಂತರಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಟೀ ಮಾರುವ ಪಾತ್ರಕ್ಕೆ ಅಜಯ್ ಒಗ್ಗಿಕೊಂಡಿದ್ದಾರೆ.
MOKSHENDRA
ಹಿಂದಿನ 'ತಾಜ್‌ಮಹಲ್' ಚಿತ್ರಕ್ಕಿಂತ ಈ ಚಿತ್ರದಲ್ಲಿ ಅವರ ಅಭಿನಯ, ಬಾಡಿ ಲಾಂಗ್ವೇಜ್ ಎಲ್ಲವೂ ಸುಧಾರಿಸಿದೆ. ಹಾಡು, ಫೈಟ್ ಎಲ್ಲ ವಿಭಾಗದಲ್ಲೂ ಅಜಯ್ ಉತ್ತಮ ಸ್ಕೋರ್ ಮಾಡಿದ್ದಾರೆ.
ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಹಾಸ್ಯ. ನಿರ್ದೇಶಕ ಅನಂತರಾಜು ಹಾಸ್ಯ ಪಾತ್ರಗಳನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ನಾಗಶೇಖರ್, ಬುಲೆಟ್ ಪ್ರಕಾಶ್ ಹಾಗೂ ಕೋಮಲ್ ಅವರ ಹಾಸ್ಯ ವರ್ಕ್ ಔಟ್ ಆಗಿದೆ. ಅದರಲ್ಲೂ ಕೋಮಲ್ ಅವರ ಒಂದೊಂದು ಡೈಲಾಗ್ ಕೂಡಾ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಗೌರಿ ಮುಂಜಾಲ್ ಅವರ ನಟನೆಗೆ ಇಲ್ಲಿ ಪ್ರಾಮುಖ್ಯತೆ ಇದೆ. ಕೊಟ್ಟ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಕೋಕಿಲಾ ಅವರ ಸಂಗೀತದ ಬಗ್ಗೆ ಹೆಚ್ಚು ಮಾತನಾಡುವಾಗಿಲ್ಲ.
ಅಂತೂ ಗಾಂಧಿನಗರಿಯಲ್ಲಿ ಮೋಹಕ 'ಜಾಜಿಮಲ್ಲಿಗೆ'ಯಂತೂ ಅರಳಿದೆ. ಸಣ್ಣಪುಟ್ಟ ಹುಳುಕುಗಳಿದ್ದರೂ, 'ಜಾಜಿಮಲ್ಲಿಗೆ'ಯ ಪರಿಮಳಕ್ಕೆ ಯಾವುದೇ ಅಡ್ಡಿಯಂತೂ ಆಗಿಲ್ಲ. ಆದರೆ ಪರಿಮಳ ಎಷ್ಟು ದಿನ ಬಾಳಿಕೆ ಬರುತ್ತದೆ ಎಂಬುದಕ್ಕೆ ಪ್ರೇಕ್ಷಕ ಮಹಾಶಯ ಈ ಸುವಾಸನೆ ಕುಡಿಯಲು ಹೊರಟರೆ ಗೊತ್ತಾದೀತು.