ಜೋಶ್‌ನಲ್ಲಿ ಜೋಶ್ ಇದೆ
ರವಿಪ್ರಕಾಶ್ ರೈ ಸಾಮಾನ್ಯವಾಗಿ ಕಾಲೇಜು ಹುಡುಗರ ಚಿತ್ರವೆಂದರೆ ಅಲ್ಲಿ ತುಂಟತನ, ಭವಿಷ್ಯದ ಬಗ್ಗೆ ಬೇಜವಾಬ್ದಾರಿ ಇರುತ್ತದೆ ಎಂದುಕೊಳ್ಳುತ್ತೇವೆ. ಆದರೆ ಈ ವಾರ ಬಿಡುಗಡೆಯಾದ ಜೋಶ್ ಚಿತ್ರದ ಬಗ್ಗೆ ಇದೇ ಅಭಿಪ್ರಾಯವನ್ನು ಇಟ್ಟುಕೊಂಡು ಹೋದರೆ ನಿಮ್ಮ ಅಭಿಪ್ರಾಯ ತಲೆಕೆಳಗಾಗುತ್ತದೆ.ಇಲ್ಲಿ ತುಂಟತನವಿದೆ. ಆದರೆ ವಯಸ್ಸಿನ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳದೇ ಬೇಕಾಬಿಟ್ಟಿಯಾಗಿ ವರ್ತಿಸಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವ ವಿದ್ಯಾರ್ಥಿಗಳಿಗೆ ಕಿವಿಮಾತಿದೆ. ಅಂತಹ ವಿದ್ಯಾರ್ಥಿಗಳು ಈ ಚಿತ್ರವನ್ನೊಮ್ಮೆ ನೋಡಬೇಕು. ಇಲ್ಲಿ ನಿರ್ದೇಶಕ ಶಿವಮಣಿಯ ಪ್ರಯತ್ನವನ್ನು ಮೆಚ್ಚಲೇಬೇಕು.ಈವರೆಗೆ ಆಕ್ಷನ್ ಚಿತ್ರಗಳನ್ನು ನಿರ್ದೇಶಿಸಿದ್ದ ಶಿವಮಣಿ ಈ ಚಿತ್ರವನ್ನು ಇಷ್ಟು ಸೊಗಸಾಗಿ ಮಾಡಿದ ಅವರ ಪ್ರಯತ್ನ ಹಾಗೂ ಧೈರ್ಯವನ್ನು ಜೈ ಅನ್ನಲೇಬೇಕು. ಹೊಸ ಹುಡುಗರನ್ನು ಅವರು ತಯಾರಿಸಿದ ಪರಿ ನಿಜಕ್ಕೂ ಗ್ರೇಟ್. ಪ್ರೌಢಶಾಲೆಯಿಂದ ಕಾಲೇಜುವರೆಗೆ ವಿದ್ಯಾರ್ಥಿ ಜೀವನದಲ್ಲಿ ನಡೆಯುವ ಘಟನೆಯನ್ನು ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ. ರಾಕೇಶ್ ಹಾಗೂ ಅಲೋಕ್ ಭವಿಷ್ಯದಲ್ಲಿ ಉತ್ತಮ ನಾಯಕರಾಗುವ ಎಲ್ಲ ಲಕ್ಷಣಗಳಿವೆ. ಉಳಿದಂತೆ ನಾಯಕಿ ಪೂರ್ಣ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ಇಲ್ಲಿ ಡಿಐ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಚಿತ್ರದಲ್ಲಿ ಫ್ರೆಶ್‌ನೆಸ್ ಎದ್ದು ಕಾಣುತ್ತದೆ. ಚಿತ್ರದ ಹಾಡುಗಳು ಹಿತ ನೀಡುವ ಜೊತೆಗೆ ಸಂತೋಷ್ ರೈ ಪಾತಾಜೆ ಅವರ ಕ್ಯಾಮರಾ ಕೈ ಚಳಕ ಕೂಡಾ ಮುದ ನೀಡುತ್ತದೆ. ಹೊಸ ಹುಡುಗರನ್ನು ನಂಬಿಕೊಂಡು ಕಾಸು ಸುರಿದ ನಿರ್ಮಾಪಕ ಎಸ್.ವಿ.ಬಾಬು ಅವರ ಧೈರ್ಯ ದೊಡ್ಡದು.ಚಿತ್ರದಲ್ಲಿನ ಸಣ್ಣಪುಟ್ಟ ಕೊರತೆಗಳನ್ನು ಬದಿಗಿಟ್ಟು ನೋಡಿದರೆ ಇದೊಂದು ಉತ್ತಮ ಚಿತ್ರ. ಅರಾಮವಾಗಿ ನೋಡಿ ಬರಬಹುದು. ಕೊಟ್ಟ ದುಡ್ಡಿಗಂತು ಮೋಸವಾಗದು.