ಆತ ಹಳ್ಳಿಯ ಬಸ್ಸೊಂದರ ಕ್ಲೀನರ್. ಅದೇ ಬಸ್ಸಿನಲ್ಲಿ ದಿನ ಹಳ್ಳಿಯ ಸಾಹುಕಾರನ ಮಗಳು ಬರುತ್ತಾಳೆ. ಆಕೆಗೆ ಈತನೆಂದರೆ ಇಷ್ಟ. ಈತ ಬೇಡವೆಂದರೂ ಲವ್ ಮಾಡುತ್ತಾಳೆ. ಕೊನೆಗೆ ಈತನೂ ಒಂದು ಕೈ ನೋಡೇ ಬಿಡೋಣವೆಂದು ಪ್ರೀತಿಸುತ್ತಾನೆ. ಆ ಮೇಲೆ ಹುಡುಗಿ ಅಪ್ಪ ಹಾಗೂ ಈತನ ಮಧ್ಯೆ ಡಿಶುಂ ಡಿಶುಂ.. ಇದ್ಯಾವುದೋ ಹಳೆಯ ಚಿತ್ರದ ಕಥೆಯನ್ನು ಮತ್ಯಾಕೆ ಹೇಳುತ್ತಿದ್ದಾರೆ ಎಂದು ಆಶ್ಚರ್ಯಪಡಬೇಡಿ.
ಈ ವಾರ ಬಿಡುಗಡೆಯಾದ ತಾಕತ್ ಚಿತ್ರ ಇದೇ ಕಥೆಯನ್ನು ಹೊಂದಿದೆ.ಹುಡುಗನೊಬ್ಬ ಹಳ್ಳಿಯ ಸಾಹುಕಾರನ ಮಗಳನ್ನು ಪ್ರೀತಿಸಿ ಕೊನೆಗೆ ತನ್ನ ಪ್ರೀತಿಗೋಸ್ಕರ ಸಾಹುಕಾರನ ವಿರುದ್ಧವೇ ತೊಡೆತಟ್ಟಿ ನಿಲ್ಲುವ ಕಥೆಗಳು ಈ ಹಿಂದೆ ಬೇಜಾನ್ ಬಂದು ಹೋಗಿವೆ. ಆದರೆ ನಿರ್ದೇಶಕ ರಮೇಶ್ ಮಾತ್ರ ಮತ್ತೆ ಅಂತಹುದೇ ಕಥೆಯನ್ನು ಮಾಡಿದ್ದಾರೆ. ಉತ್ತಮ ಕಥೆಯಿಲ್ಲದೇ ಕೇವಲ ಅದ್ದೂರಿತನ, ಫೈಟ್‌ನಿಂದಲೇ ಚಿತ್ರವನ್ನು ಗೆಲ್ಲಿಸಬಹುದು ಎಂದು ಚಿತ್ರ ಮಾಡಿದರೆ ಅದು ತಾಕತ್ ಆಗುತ್ತದೆ.
ದುನಿಯಾದ ಶಿವಲಿಂಗುವನ್ನು ಮತ್ತೆ ತಾಕತ್‌ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಅದೇ ಟಿಪಿಕಲ್ ಹಳ್ಳಿ ಹುಡುಗ, ಡೈಲಾಗ್ ಡೆಲಿವರಿ ಸ್ಟೈಲ್ ಎಲ್ಲವೂ ದುನಿಯಾ ಚಿತ್ರದಿಂದ ಕಾಪಿ ಮಾಡಿದಂತಿದೆ. ಇದರಿಂದ ಸಹಜವಾಗಿಯೇ ಮತ್ತೆ ಅದನ್ನು ಜೀರ್ಣಿಸಿಕೊಳ್ಳುವುದು ದುನಿಯಾ ನೋಡಿದ ಪ್ರೇಕ್ಷಕನಿಗೆ ಕಷ್ಟ.
ವಿಜಯ್ ಎಂದರೆ ಫೈಟ್ ಇದ್ದೆ ಇರುತ್ತದೆ. ಅಂತೆಯೇ ಇಲ್ಲೂ ಇದೆ. ಆದರೆ ಫೈಟ್ ವಿಷಯದಲ್ಲಿ ನಿರ್ದೇಶಕರು ಯಾಕೋ ಅಪ್‌ಡೇಟ್ ಆಗಿಲ್ಲವೆಂದರೆ ಅವರು ಬೇಸರ ಮಾಡಿಕೊಳ್ಳಬಾರದು. ಕೆಲವು ಕಡೆ ಡ್ಯೂಪ್ ಹಾಗೂ ರೋಪ್ ಸಹಾಯದಿಂದ ಫೈಟ್ ಮಾಡಿರುವುದು ಗೊತ್ತಾಗುತ್ತದೆ. ಇಂತಹ ಫೈಟ್‌ಗಳನ್ನು ಕನ್ನಡದ ಪ್ರೇಕ್ಷಕ ಸುಮಾರು 20 ವರ್ಷಗಳ ಹಿಂದೆಯೇ ನೋಡಿದ್ದಾನೆ. ಆದರೂ ಅದನ್ನು ಮತ್ತೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ.
ಚಿತ್ರದಲ್ಲಿ ರಂಗಾಯಣ ರಘು ಮಿಂಚಿದ್ದಾರೆ. ಅವರ ಡೈಲಾಗ್ ಡೆಲಿವರಿ, ಮ್ಯಾನರಿಸಂ ಎಲ್ಲವೂ ಸೂಪರ್. ಉಳಿದಂತೆ ಶೋಭರಾಜ್ ಮಿಂಚಿದ್ದಾರೆ. ಗುರುಕಿರಣ್ ಅವರ ಸಂಗೀತದ ಬಗ್ಗೆ ಮಾತನಾಡುವಾಗಿಲ್ಲ. ಶುಭ ಪೂಂಜಾ ಇಲ್ಲಿ ನಿರ್ದೇಶಕರ ಕೂಸು. ಹೇಳಿದಂತೆ ಮಾಡಿದ್ದಾರೆ. ಒಟ್ಟಾಗಿ ತಾಕತ್ ನೋಡಬೇಕಾದರೆ ಪ್ರೇಕ್ಷಕನಿಗೆ ಸ್ವಲ್ಪ ತಾಕತ್ ಬೇಕು.