ನಾಯಕನಿಗೆ ನಟನಾಗಬೇಕೆಂಬ ಹಂಬಲದಲ್ಲಿ ಹಲವರಿಂದ ದಂತಭಗ್ನಕ್ಕೆ ಒಳಗಾಗಿ, ಮುಖಭಂಗ ಅನುಭವಿಸುವ ಚಿತ್ರ ಕಲಾಕಾರ್. ನಾಯಕನಾಗಬೇಕಾದರೆ ಹತ್ತಾರು ವರ್ಷ ದುಡಿಯಬೇಕು. ಅದಕ್ಕೆ ಪ್ರತಿಭೆ ಜೊತೆಗೆ ಅದೃಷ್ಟವೂ ಮುಖ್ಯ ಎಂಬ ಚಿತ್ರರಂಗದ ಪಂಡಿತರ ಮಾತಿಗೆ ಈ ಚಿತ್ರ ಕನ್ನಡಿಯಾಗಿದೆ.
ನಾಯಕನಾಗಬೇಕೆಂಬ ಕನಸು ಫಲಿಸದೇ ಹೋದಾಗ ಪರಿತಪಿಸುವ ನಾಯಕನಾಗಿ ಹರೀಶ್ ರಾಜ್ ಗಮನ ಸೆಳೆದಿದ್ದಾರೆ. ಡೈಲಾಗ್ ಹೇಳುವಾಗ ಒದ್ದಾಡುವ ಪರಿ, ತಂದೆ ಮನೆಯಿಂದ ಹೊರ ಅಟ್ಟಿದಾಗ ಕಾಸಿಲ್ಲದೆ ಬಾಡಿಗೆ ಮನೆಯಲ್ಲಿರಲು ಹುಡುಗಿ ವೇಷದಲ್ಲಿ ಮನೆ ಸೇರುವ ಪರಿ ಬೊಂಬಾಟ್ ಆಗಿದೆ. ನಾಯಕನಾಗಿ ಮಾತ್ರವಲ್ಲ ಮೊದಲ ನಿರ್ದೇಶನದಲ್ಲಿಯೇ ಸೈ ಎನಿಸಿಕೊಂಡಿದ್ದಾರೆ.
ಸುಮನ್ ರಂಗನಾಥ್ ಈ ವಯಸ್ಸಿನಲ್ಲಿಯೂ ಹಾಟ್ ಗರ್ಲ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪೂಜಾ ಗಾಂಧಿ ಸೋದರಿ ರಾಧಿಕಾ ಗಾಂಧಿ ಅಭಿನಯದಲ್ಲಿ ಇನ್ನೂ ಪಳಗಬೇಕು. ನಿರ್ದೇಶಕನ ಪಾತ್ರಕ್ಕೆ ದ್ವಾರಕೀಶ್ ಜೀವ ತುಂಬಿದ್ದಾರೆ. ಕಿಶೋರಿ ಬಲ್ಲಾಳ್, ಸುಧಾ ನರಸಿಂಹರಾಜು, ಅವಿನಾಶ್ ಬಗ್ಗೆ ಎರಡು ಮಾತಿಲ್ಲ.
NRB
ಚಿತ್ರವನ್ನು ಸೆರೆಹಿಡಿದ ಎಸ್. ರಾಮಚಂದ್ರ ಅವರಿಗೆ ಭೇಷ್ ಅನ್ನಲೇಬೇಕು. ಗಿರಿಧರ್ ದೀವಾನ್ ಅವರ ಸಂಗೀತ ಉತ್ತಮವಾಗಿ ಮೂಡಿಬಂದಿದೆ. ಸಂಭಾಷಣೆಯಲ್ಲಿ ಕೆಲವೊಂದು ಇಷ್ಟವಾಗುತ್ತದೆ. ಒಟ್ಟಿನಲ್ಲಿ ಹರೀಶ್ ರಾಜ್ ಇನ್ನಷ್ಟು ನಿರ್ದೇಶನದಲ್ಲಿ ಪಳಗಿಸಿಕೊಂಡರೆ ಇನ್ನು ಉತ್ತಮ ಚಿತ್ರವನ್ನು ತರಬಹುದು.