ಲವ್ ಗುರು ಧಾರಾಳವಾಗಿ ನೋಡಿ
ಲವ್ ಗುರು ಚಿತ್ರ ಎಲ್ಲ ಚಿತ್ರಗಳಂತೆಯೇ ಸಾಮಾನ್ಯ ಲವ್ ಸ್ಟೋರಿ ಇರಬಹುದು. ಆದರೆ ಚಿತ್ರವನ್ನು ತೆರೆಗೆ ತಂದ ಹೊಸತನದಲ್ಲೇ ಲವ್‌ಗುರು ತಾಜಾ ಆಗಿ ಮನಗೆಲ್ಲುತ್ತದೆ.ನಿರ್ದೇಶಕ ಪ್ರಶಾಂತ್ ಬಾಲಿವುಡ್ಡಿನಲ್ಲೂ ಸ್ವಲ್ಪ ತರಬೇತಿ ಪಡೆದು ಬಂದಿದ್ದಾರೆ. ಆ ತರಬೇತಿ ಫಲ ಇಲ್ಲಿ ಕಾಣುತ್ತದೆ. ಹೀಗಾಗಿ ಚಿತ್ರದಲ್ಲಿ ಒಂದು ಮಧುರ ಸ್ಪರ್ಷವಿದೆ. ಹಾಡುಗಳನ್ನು ತೆರೆಗೆ ತಂದ ರೀತಿಯಲ್ಲೂ ವಿಶೇಷತೆಯಿದೆ. ಹೊಸತನವಿದೆ. ಅಲ್ಲದೆ ಚಿತ್ರದ ಎಲ್ಲ ಪಾತ್ರಗಳೂ ಹೊಸತನದಲ್ಲೇ ಮಿಂದಿವೆ. ಜೋಶ್ವಾ ಶ್ರೀಧರ್ ತಮ್ಮ ತಮಿಳಿನ ಕಾದಲ್ ಚಿತ್ರದ ನಂತರ ಮಧುರ ಸಂಗೀತವನ್ನು ಲವ್‌ಗುರುವಿಗೆ ಕಾಣಿಕೆಯಾಗಿ ನೀಡಿದ್ದಾರೆ. ಚಿತ್ರದ ಪ್ರಮುಖ ಹೈಲೈಟ್ ಕೂಡಾ ಸಂಗೀತವೇ.ಚಿತ್ರ ಸಂಪೂರ್ಣ ಕಾರ್ಪೋರೇಟ್ ಸಂಸ್ಕೃತಿಯ ತಳಹದಿಯಲ್ಲೇ ರೂಪುಗೊಂಡಿದೆ. ಇಂದಿನ ಯುವ ಪೀಳಿಗೆ ಕಾರ್ಪೋರೇಟ್ ವಲಯದಲ್ಲಿ ವರ್ತಿಸುವಂತೆಯೇ ಚಿತ್ರದ ಪ್ರಮುಖ ಪಾತ್ರಗಳು ವರ್ತಿಸುತ್ತವೆ.ಸಂದಿಗ್ಧತೆ, ಒತ್ತಡದ ಯಾತನೆ, ಸಂತಸದ ಉತ್ಸಾಹದ ಚಿಲುಮೆ, ವಿಚಿತ್ರ ಮ್ಯಾನರಿಸಂ ಎಲ್ಲವೂ ಪಕ್ಕಾ ಕಾರ್ಪೋರೇಟ್ ಯುಗದ್ದೇ. ಕಲರ್‌ಫುಲ್ ವಿಶುವಲ್ ಸಪೋರ್ಟ್ ಚಿತ್ರದ ಕಥೆಗೆ ತುಂಬ ಪುಷ್ಟಿ ನೀಡುತ್ತದೆ.ಆದರೂ ಚಿತ್ರದ ಕ್ಲೈಮ್ಯಾಕ್ಸ್ ಗೊಂದಲಕಾರಿಯಾಗಿದೆ. ನಿರ್ದೇಶಕ ಪ್ರಶಾಂತ್ ಚಿತ್ರದ ದ್ವಿತೀಯಾರ್ಧದಲ್ಲಿ ಇನ್ನೂ ಚೆನ್ನಾಗಿ ಕೆಲಸ ಮಾಡುತ್ತಿದ್ದರೆ ಹೆಚ್ಚಿನ ತೂಕ ಸಿಗುತ್ತಿತ್ತು. ಇದು ಯಾಕೆ ಹೀಗನಿಸುತ್ತದೆಯೆಂದರೆ ಚಿತ್ರದ ಮೊದಲರ್ಧ ತುಂಬ ಚೆನ್ನಾಗಿದೆ. ಹಾಗಾಗಿ ದ್ವಿತೀಯಾರ್ಧ ಸಡನ್ ಕೆಳಗಿಳಿದಂತೆ ಹಾಗೂ ಎಳೆದಂತೆ ಅನಿಸುತ್ತದೆ. ಆದರೂ, ಚಿತ್ರಕಥೆಯ ಗಂಭೀರತೆಗೆ ಈ ಪುಟ್ಟ ತೊಡಕು ಅಡ್ಡಿ ಬರುವುದಿಲ್ಲ. ಹಾಗೂ ತರುಣ್ ಪಾತ್ರ ತನ್ನ ಕುತೂಹಲವನ್ನು ಕೊನೆಯವರೆಗೂ ಉಳಿಸುತ್ತದೆ.ಕಥೆ ಆರಂಭವಾಗುವುದು ಸಾಫ್ಟ್‌ವೇರ್ ಕಂಪನಿಯಲ್ಲಿ. ಮಹತ್ವಾಕಾಂಕ್ಷಿ, ಆತ್ಮವಿಶ್ವಾಸಿ ಹುಡುಗಿ ಖುಷಿ (ರಾಧಿಕಾ ಪಂಡಿತ್) ಹಾಗೂ ಸಾಧಾರಣ ಕೆಳಮಟ್ಟದ ಪ್ರೊಫೈಲ್ ಹೊಂದಿರುವ ಪ್ರಥಮ್ (ತರುಣ್) ಸಾಫ್ಟ್‌ವೇರ್ ಕಂಪನಿಗೆ ಕೆಲಸಕ್ಕೆ ಸೇರುತ್ತಾರೆ. ಇಬ್ಬರಲ್ಲೂ ಪ್ರೇಮಾಂಕುರವಾಗುತ್ತದೆ. ಆದರೆ ಇಬ್ಬರೂ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುವುದಿಲ್ಲ. ಪ್ರಥಮ್ ಹಲವು ಬಾರಿ ಖುಷಿಯಲ್ಲಿ ತನ್ನ ಪ್ರೇಮ ನಿವೇದನೆ ಮಾಡಬೇಕೆಂದು ಅಂದುಕೊಳ್ಳುತ್ತಾನಾದರೂ ಪ್ರತಿ ಬಾರಿಯೂ ಅದೊಂದು ದೊಡ್ಡ ಜೋಕಾಗಿ ಕೊನೆಗೊಳ್ಳುತ್ತದೆ. ಖುಷಿಗೂ ಪ್ರಥಮ್ ಬಗ್ಗೆ ಸ್ವಲ್ಪ ಗೊಂದಲಗಳಾಗುತ್ತದೆ. ಇದೇ ಸಂದರ್ಭ ಖುಷಿಯ ಬಾಸ್ ಅಭಿ (ದಿಲೀಪ್ ರಾಜ್) ಖುಷಿಯನ್ನು ಮದುವೆಯಾಗಬಯುಸುತ್ತಾನೆ. ಪರಿಸ್ಥಿತಿಯ ಒತ್ತಡ ಖುಷಿಯನ್ನು ಅಭಿಯೊಂದಿಗೆ ಮದುವೆಯಾಗಲು ಒಪ್ಪುವಂತೆ ಮಾಡುತ್ತದೆ. ಆದರೆ ಪ್ರೇಮ ನಿವೇದಿಸಿಕೊಳ್ಳಲಾಗದ ಪ್ರಥಮ್ ಗೊಂದಲದ ಗೂಡಾಗುತ್ತಾನೆ. ಮುಂದೆ ಏನಾಗುತ್ತದೆ ಎಂಬುದಕ್ಕೆ ಚಿತ್ರ ನೋಡಲೇಬೇಕು.ಕಲಾವಿದರ ಪೈಕಿ ರಾಧಿಕಾ ಪಂಡಿತ್ ತನ್ನ ಮೋಹಕ ಅದ್ಭುತ ನಟನೆಯಿಂದ ಇಡೀ ಚಿತ್ರದಲ್ಲಿ ಗಮನ ಸೆಳೆಯುತ್ತಾರೆ. ಕೇಂದ್ರಬಿಂದುವಾಗಿ ಮೇಳೈಸುತ್ತಾರೆ. ಆಕೆ ತನ್ನ ಭಾವಪೂರ್ಣ ಅಭಿನಯದಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. ಹಲವು ವರ್ಷಗಳಿಂದ ಅಭಿನಯದಲ್ಲಿ ಪಕ್ವವಾಗಿರುವ ದಿಲೀಪ್ ತಮ್ಮ ಪಾತ್ರಕ್ಕೆ ನ್ಯಾಯವೊದಗಿಸಿದ್ದಾರೆ. ತರುಣ್ ಮಟ್ಟಿಗೆ ಇದು ಚಿತ್ರರಂಗದಲ್ಲಿ ದೊಡ್ಡ ಬ್ರೇಕ್. ತರುಣ್ ಮತ್ತೊಮ್ಮೆ ತಾವೊಬ್ಬ ಉತ್ತಮ ನಟ ಎಂಬುದನ್ನು ಈ ಚಿತ್ರದ ಮೂಲಕ ಸಾಧಿಸಿ ತೋರಿಸಿದ್ದಾರೆ.ಚಿತ್ರದ ತಾಂತ್ರಿಕತೆ ಸೂಪರ್ಬ್. ಅದರಲ್ಲೂ ಮುಖ್ಯವಾಗಿ ಜೋಶ್ವಾ ಶ್ರೀಧರ್ ಸಂಗೀತ ಚಿತ್ರದ ನಂತರವೂ ಅದೇ ಲಹರಿಯಲ್ಲಿ ಕೊಂಡೊಯ್ಯುತ್ತದೆ. ಯಾರ ಕೂಡ ನಿನ್ನ ಹಾಗೆ... ತಂಗಾಳಿ ತಂದೆಯಾ... ಹಾಡುಗಳನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ಕ್ಯಾಮರಾ ಕೈಚಳಕ ಅದ್ಭುತವಾಗಿ ಮೂಡಿಬಂದಿದೆ. ಒಟ್ಟಾರೆ ಲವ್ ಗುರು ಧಾರಾಳವಾಗಿ ನೋಡಬಹುದು. ಚಿತ್ರದ ಕಥೆ ಹಳೆಯದೇ ಆಗಿದ್ದರೂ ಚಿತ್ರದಲ್ಲಿರುವ ಹೊಸತನ ನಿಮ್ಮಲ್ಲೂ ಹೊಸತನ ಮೂಡಿಸುತ್ತದೆ ಎಂದರೆ ಆಶ್ಚರ್ಯವಿಲ್ಲ.