ಇತ್ತೀಚೆಗಿನ ಸದಭಿರುಚಿಯ ಚಿತ್ರಕ್ಕೆ ತಾಜಾ ಉದಾಹರಣೆ ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಮಳೆಯೂ ಬರಲಿ ಮಂಜೂ ಇರಲಿ ಚಿತ್ರ. ಮಧ್ಯಮ ವರ್ಗದ ಜನ ಈ ಚಿತ್ರವನ್ನು ಮೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಈ ಬಂಧನದಲ್ಲಿ ಹೋದ ನಷ್ಟವನ್ನು ಇಲ್ಲಿ ನಾಜೂಕಿನಿಂದ ತುಂಬಿದ್ದಾರೆ ವಿಜಯಲಕ್ಷ್ಮಿ ಸಿಂಗ್.
ಅಪ್ಪ-ಮಗಳ ಸ್ನೇಹ, ಹುಡುಗ-ಹುಡುಗಿ ಮಧ್ಯೆ ನಡೆಯುವ ಪ್ರೀತಿ, ತಳಮಳ ಎಲ್ಲವೂ ಇಲ್ಲಿದೆ. ಚಿತ್ರದ ತುಂಬಾ ಕಣ್ಣಿಗೆ ಹಾಯೆನಿಸುವ ತಂಪು ದೃಶ್ಯಗಳಿವೆ. ಆದರೆ ಕೆಲವೊಂದು ಸಣ್ಣಪುಟ್ಟ ತಪ್ಪುಗಳನ್ನು ಹೊರತುಪಡಿಸಿದರೆ ಉಳಿದಂತೆ ಚಿತ್ರ ಚೆನ್ನಾಗಿದೆಯೆಂದೇ ಹೇಳಬಹುದು. ಇದಕ್ಕೆ ಮೂಲ ಕಾರಣ ಚಿತ್ರಕಥೆ. ಚಿತ್ರದ ಕತೆ ನಿಧಾನವಾಗಿ ಸಾಗಿದರೂ, ಪ್ರೇಕ್ಷಕರಿಗೆ ಬೋರ್ ಎನಿಸುವುದಿಲ್ಲ. ಆದರೆ, ಶರಣ್ ಮತ್ತು ಸಾಧುಕೋಕಿಲಾ ಅವರ ಕಾಮಿಡಿ ಯಾಕೋ ವರ್ಕೌಟಾಗಿಲ್ಲ.
MOKSHA
ಅಭಿನಯದ ಬಗ್ಗೆ ಹೇಳಬೇಕಾದರೆ ಕಿಟ್ಟಿ ಅಭಿನಯದಲ್ಲಿ ಸಾಕಷ್ಟು ಪಳಗಿದ್ದಾರೆ. ಸಿಡುಕು ಮೋರೆ ಪಾತ್ರ ಅವರಿಗೆ ಚೆನ್ನಾಗಿ ಒಪ್ಪುತ್ತದೆ. ಹೃದಯದಲ್ಲೇ ಇಟ್ಟುಕೊಂಡಿದ್ದ ಪ್ರೀತಿಯನ್ನು ಕೊನೆಯಲ್ಲಿ ಹೇಳುವಾಗ ಅವರ ತಲ್ಲೀನತೆ ಚೆನ್ನಾಗಿ ಮೂಡಿ ಬಂದಿದೆ. ನಾಯಕಿ ಪಾರ್ವತಿ ಮೆನನ್ ಬಗ್ಗೆ ಎರಡು ಮಾತಿಲ್ಲ. ಮಿಲನದಂತೆ ಇಲ್ಲಿಯೂ ತಮ್ಮ ಅಭಿನಯದ ಮೂಲಕ ಚಿತ್ರದ ತೂಕ ಹೆಚ್ಚಿಸಿದ್ದಾರೆ. ಎರಡನೇ ನಾಯಕಿಯಾಗಿ ಕೊನೆಯಲ್ಲಿ ಬರುವ ಹರಿಪ್ರಿಯಾ ಗ್ಲಾಮರ್ ನಟಿ ಎನ್ನುವುದನ್ನು ಇಲ್ಲಿ ತೋರಿಸಿದ್ದಾರೆ. ಆದರೆ, ಮನೋಮೂರ್ತಿ ಸಂಗೀತವೇ ಎಂಬುದು ಅನುಮಾನ ಮೂಡಿಸುತ್ತದೆ.
ಅಂದಹಾಗೆ ಇದು ರೀಮೇಕ್ ಅಲ್ಲ. ಆದರೆ ಚಿತ್ರ ನೋಡುವಾಗ 90ರ ದಶಕದ ಹಿಂದಿಯ ಚಿತ್ರ ಕಣ್ಣಮುಂದೆ ಹಾದುಹೋಗುತ್ತದೆ. ಹಾಗಾಗಿ ಈ ಮಳೆಗಾಲದಲ್ಲಿ ಈ ಮಳೆಯ ರುಚಿಯನ್ನೂ ನೋಡಬಹುದು. ತಂಪಿನಲ್ಲಿ ಮೀಯಬಹುದು.