ರಜನಿ ಚಿತ್ರದಲ್ಲಿ ಥ್ರಿಲ್ಲರ್ ಮಂಜು ನಿರ್ದೇಶನ ಮಾಡಿದ್ದರೆ, ನಿರ್ದೇಶಕನಾಗಿ ಹೆಸರು ಪಡೆದಿದ್ದ ಉಪೇಂದ್ರ ಈ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದಾರೆ. ಉಪೇಂದ್ರ ರಜನಿ ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸುತ್ತಿದ್ದಾರೆ ಎನ್ನುವುದಕ್ಕಿಂತ ಸೂಪರ್ ಹಿಟ್ ತೆಲುಗು ಕೃಷ್ಣ ಚಿತ್ರವನ್ನು ಯಥಾವತ್ತು ಭಟ್ಟಿ ಇಳಿಸಿದ್ದಾರೆ ಎನ್ನುವುದು ಸೂಕ್ತ. ತೆಲುಗಿನ ಕೃಷ್ಣ ಚಿತ್ರದಲ್ಲಿ ನಾಯಕ ರವಿತೇಜ ಯಾವ ರೀತಿ ಮ್ಯಾನರಿಸಂಗಳನ್ನು ಮಾಡಿದ್ದರೋ ಅದೇ ರೀತಿ ಉಪೇಂದ್ರ ರಜನಿಯಲ್ಲೂ ಮಾಡಿದ್ದಾರೆ.
ಆಕ್ಷನ್‌ಗೆ ಪ್ರಸಿದ್ದಿಯಾಗಿರುವ ಥ್ರಿಲ್ಲರ್ ಮಂಜು ಇಲ್ಲಿ ಆಕ್ಷನ್ ಜೊತೆಗೆ ಕಾಮಿಡಿಯನ್ನು ನೀಡಿದ್ದಾರೆ. ರಂಗಾಯಣ ರಘು ರಾಮಾಯಣ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ಇವರೊಂದಿಗೆ ದೊಡ್ಡಣ್ಣ ಹಾಗೂ ಸಾಧುಕೋಕಿಲಾ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್‌ಸಿ ಓದಿ ಸ್ನೇಹಿತನಿಗಾಗಿ ಉದ್ಯೋಗ ತ್ಯಾಗ ಮಾಡುವ ನಾಯಕ ರಜನಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾನೆ. ಇದಕ್ಕೆ ಆಕೆಯ ಅಣ್ಣ ಒಪ್ಪುವುದಿಲ್ಲ. ಒಂದಿಷ್ಟು ವಿಲನ್‌ಗಳ ಕಾಟ. ಎಲ್ಲರನ್ನೂ ಒಪ್ಪಿಸಿ ನಾಯಕಿಯನ್ನು ಹೇಗೆ ನಾಯಕ ಮದುವೆಯಾಗುತ್ತಾನೆ ಎಂಬುದೇ ರಜನಿ ಚಿತ್ರದ ಒನ್‌ಲೈನ್ ಸ್ಟೋರಿ.
ಇತ್ತೀಚೆಗೆ ಥಿಯೇಟರ್‌ಗೆ ಜನ ಬರುತ್ತಿಲ್ಲ ಎನ್ನುವ ಆರೋಪವಿರುವ ವೇಳೆಯಲ್ಲಿ ರಜನಿ ಚಿತ್ರ ರಸಿಕರಿಗೆ ಥಿಯೇಟರ್‌ಗೆ ಬರುವಂತೆ ಮಾಡುತ್ತದೆ ಎನ್ನುವುದು ಚಿತ್ರ ನೋಡಿದವರ ಅನಿಸಿಕೆ. ಆರತಿ ಛಾಬ್ರಿಯಾ ಅಭಿನಯಕ್ಕಿಂತ ಅವರ ಚಂದವೇ ಹೆಚ್ಚು ಮೇಳೈಸುತ್ತದೆ. ಹಂಸಲೇಖಾ ಹಾಡುಗಳು ಇಷ್ಟವಾಗುತ್ತವೆ. ರಾಮಮೂರ್ತಿ ಡೈಲಾಗುಗಳು ಚಿತ್ರಮಂದಿರದಿಂದ ಹೊರ ಬಂದರೂ ಹಿಂದೆಯೇ ಬರುವಂತೆ ಭಾಸವಾಗುತ್ತದೆ. ಈ ಚಿತ್ರದ ಮೂಲಕ ಉಪೇಂದ್ರ ಸಂಭಾವನೆ ಹೆಚ್ಚು ಮಾಡಿದರೂ ತಪ್ಪಲ್ಲ. ಅಂತೂ ಸೋಲಿನ ಸುಳಿಯಲ್ಲೇ ಇದ್ದ ಉಪೇಂದ್ರರನ್ನು ಕಾಪಾಡಲು ರಿಮೇಕ್ ಸಿನಿಮಾನೇ ಬರಬೇಕಾಯಿತು ಎಂಬುದು ಮಾತ್ರ ಸುಳ್ಳಲ್ಲ.