ಬಹುನಿರೀಕ್ಷೆಯ ಮನಸಾರೆ ಹೊರಬಂದಿದೆ. ಕನ್ನಡ ಚಿತ್ರರಂಗದಲ್ಲಿ ಭೋರ್ಗರೆದು ಇತಿಹಾಸ ಬರೆದ ಮುಂಗಾರು ಮಳೆಯಂತಹ ಸಿನಿಮಾ ಕೊಟ್ಟು ಗಾಳಿಪಟದ ನಂತರ ದೀರ್ಘ ಕಾಲ ಕಳೆದು ಮತ್ತೆ ಮನಸಾರೆಯೊಂದಿಗೆ ಮನಸಾರೆ ಗಾಂಧಿನಗರಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ ಭಟ್ಟರು. ಐಂದ್ರಿತಾ ಕಣ್ಮಿಂಚು, ಸತ್ಯ ಹೆಗಡೆಯ ಬಿಸಿಲಿ ತಂಪು, ಕಾಯ್ಕಿಣಿ- ಮನೋಮೂರ್ತಿ ಜೋಡಿಯ ಇಂಪು ಎಲ್ಲವೂ ಸೇರಿ 'ಮನಸಾರೆ' ಮನಸಾರೆ ಇಷ್ಟವಾಗುತ್ತದೆ.
ಮನಸಾರೆ ಚಿತ್ರದ ಮೊದಲ ಅರ್ಧ ಭಾಗವು ವೀಕ್ಷಕರನ್ನು ಮ್ಯಾಜಿಕ್‌ನಂತೆ ನೋಡಿಸಿಕೊಂಡು ಹೋದರೂ, ಇನ್ನುಳಿದ ಅರ್ಧಭಾಗ ಮಾತ್ರ ಸ್ವಲ್ಪ ಉದ್ದವಾಯಿತೇನೋ ಅನಿಸುತ್ತದೆ. ಸ್ವಲ್ಪ ಹೇಳಿದ್ದನ್ನೆ ಹೇಳುತ್ತಿರುವಂತೆ ಸಂಶಯ ಮೂಡುವ ಮುನ್ನವೇ ಚಿತ್ರ ಗತಿ ಪಡೆಯುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಸುಖಾಂತ್ಯವಾಗಿ ಸುಖಾಸೀನರಾದ ಪ್ರೇಕ್ಷಕರು ಹೊಸ ಉಲ್ಲಾಂಸದಿಂದ ಹೊರ ಬರುವಂತಾಗುತ್ತದೆ.
ಈ ಚಿತ್ರವು ಹುಚ್ಚರ ಕಥೆಯಾದರೂ ಅದು ಎಂದೂ, ಎಲ್ಲೂ ಚಿತ್ರ ನೋಡುಗರ ಮನಸ್ಸಿಗೆ ಅದೊಂದು ಹುಚ್ಚರ ಚಿತ್ರವೆಂದು ಅನಿಸುವುದಿಲ್ಲ. ನಾಯಕ ಮನು (ದಿಗಂತ್) ಸ್ವಲ್ಪ ಬೇಜವಾಬ್ದಾರಿಯ, ಪಟಪಟನೆ ಮಾತನಾಡುತ್ತಲೇ ಇರುವಾತ. ಹಾಗಾಗಿ ಆಸ್ಪತ್ರೆಯಲ್ಲಿ ತಪ್ಪಾಗಿ ತಿಳಿಯಲ್ಪಟ್ಟು ಬೇಜವಾಬ್ದಾರಿಯಿಂದ ಆತ ಹುಚ್ಚನೆಂದು ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ. ತಾನು ಹುಚ್ಚನಲ್ಲ ಎಂದು ಪರಿಪರಿಯಾಗಿ ಪ್ರದರ್ಶಿಸಿದರೂ, ಮನು ಸೋಲುತ್ತಾನೆ. ಇದೇ ಸಂದರ್ಭ ಆತನ ಮನಸ್ಸು ಮನಸಾರೆ ಕದಿಯಲ್ಪಡುವುದು ಅದೇ ಹುಚ್ಚಾಸ್ಪತ್ರೆಗೆ ಸೇರಿದ್ದ ಒಬ್ಬ ಹುಡುಗಿ ದೇವಿಕಾ (ಐಂದ್ರಿತಾ)ಳಿಂದ. ಮೊದಲು ಆಸ್ಪತ್ರೆಯಿಂದ ತಪ್ಪಿಸಲು ಪ್ರಯತ್ನಿಸಿದರೂ, ಅಲ್ಲಿಂದ ತಪ್ಪಿಸಿಕೊಂಡು ಹೋಗುವ ಆವಕಾಶ ಸಿಕ್ಕಿದರೂ, ಮನು ದೇವಿಕಾಳ ಸೆಳೆತದಿಂದ ಆಕೆಗಾಗಿ ಅಲ್ಲೇ ಇರುತ್ತಾನೆ.
MOKSHA
ಇಲ್ಲಿನ ಚಿತ್ರೀಕರಣದಲ್ಲಿ ಹುಚ್ಚಾಸ್ಪತ್ರೆಯ ದೃಶ್ಯಗಳಾವುದು ಕೂಡಾ ಹುಚ್ಚಾಸ್ಪತ್ರೆಯಂತೆ ಕಾಣುವುದಿಲ್ಲ. ಯಾವುದೋ ಮಾರ್ಡನ್ ಕಾಲೇಜಿನ ಹಾಸ್ಟೆಲಿನಲ್ಲಿರುವಂತೆ ಕಾಣುತ್ತದೆ. ಹಾಗಾಗಿ ಕಥೆಗೆ ಬೇಕಾದ ನೈಜತೆಯನ್ನು ತೋರಿಸುವಲ್ಲಿ ನಿರ್ದೇಶಕರು ಎಡವಿದ್ದಾರೋ ಎಂಬ ಸಂಶಯವೂ ಮೂಡುತ್ತದೆ.
ಯಾರನ್ನೂ ಮೋಡಿ ಮಾಡಬಲ್ಲ ಚೆಂದದ ಮೊಗವಿದ್ದರೂ ನಟನೆಯಲ್ಲಿ ಸುಮಾರಾಗಷ್ಟೇ ಇದ್ದ ದಿಗಂತ್ ಈವರೆಗಿನ ಚಿತ್ರಗಳಿಗಿಂತ ಉತ್ತಮ ನಟನಾ ಸಾಮರ್ಥ್ಯವನ್ನೇ ತೋರಿಸಿದ್ದಾರೆ. ಮುಂಗಾರು ಮಳೆಯಲ್ಲಿ ಗಣೇಶ್ ಅವರ ಡೈಲಾಗ್ ಡೆಲಿವರಿ ಇದ್ದಂತೆ ದಿಗಂತ್‌ಗೆ ಇಲ್ಲಿ ಓತಪ್ರೋತವಾಗಿ ಹರಿವ ಮಾತುಗಳ ತೋರಣವೇ ಇದೆ. ಐಂದ್ರಿತಾ ಬಗ್ಗೆ ಎರಡು ಮಾತೇ ಇಲ್ಲ. ಇಡೀ ಪ್ರೇಕ್ಷಕ ಸಮೂಹವನ್ನು ಸಿನಿಮಾದುದ್ದಕ್ಕೂ ತನ್ನ ಕಣ್ಣಂಚಿನ ಸಂಚಲ್ಲೇ ಸೆಳೆದುಬಿಡಬಲ್ಲ ಮಾಯೆ ಸೃಷ್ಟಿಸಿದ್ದಾರೆ.
ಮನೋಮೂರ್ತಿ ಅವರ ಸಂಗೀತ ಚಿತ್ರದ ಮತ್ತೊಂದು ಹೈಲೈಟ್. ಈಗಾಗಲೇ ಮನಸಾರೆ ಹಾಡುಗಳು ಸಾಕಷ್ಟು ಜನಪ್ರಿಯವಾಗಿದೆ ಕೂಡಾ. ಎಲ್ಲೋ 'ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...' ಹಾಡು ಮತ್ತೊಂದು 'ಅನಿಸುತಿದೆ ಯಾಕೋ ಇಂದು...' ಅಂತ ಪ್ರೇಕ್ಷಕರಿಗೆ ಅನಿಸಿದರೆ ತಪ್ಪಲ್ಲ. 'ನಾ ನಗುವ ಮೊದಲೇನೇ...', 'ಕಣ್ಣ ಹನಿ...' ಹಾಡುಗಳು ಮನಗೆಲ್ಲುತ್ತವೆ. ಚಿತ್ರಕ್ಕೆ ಸಾಹಿತ್ಯ ನೀಡಿದ ಜಯಂತ ಕಾಯ್ಕಿಣಿಯವರಿಗೂ ಇದರ ಪಾಲು ಸಲ್ಲುತ್ತದೆ.
ಚಿತ್ರದಲ್ಲಿ ಹಾಸ್ಯವು ಅಲ್ಲಲ್ಲಿ ಗುಡುಗು ಮಿಂಚುಗಳಂತೆ ಆರ್ಭಟಿಸುವುದು ಸಿನಿಮಾಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಬೋಳು ಬಿಸಿಲು ಗುಡ್ಡಗಳನ್ನು ಕಣ್ಣಿಗೆ ತಂಪೆನಿಸುವಂತೆ ಅದ್ಭುತವಾಗಿ ಸೆರೆಹಿಡಿದ ಸತ್ಯ ಹೆಗಡೆ ಕ್ಯಾಮರಾ ಕೆಲಸಕ್ಕೂ ಚಪ್ಪಾಳೆ ತಟ್ಟಲೇಬೇಕು.
ಒಟ್ಟಾರೆ ಮನಸಾರೆ ಪ್ರೀತಿಯ ಹುಚ್ಚಿನ ಹಾಸ್ಯದ ಕಥೆಯೂ ಹೌದು. ಹುಬ್ಬಳ್ಳಿ- ಧಾರವಾಡ ಕನ್ನಡ ಚಿತ್ರದಲ್ಲಿ ಮೇಳೈಸುತ್ತದೆ. ಸಂಪೂರ್ಣ ಕುಟುಂಬ ಸಮೇತರಾಗಿ ಬಂದು ನೋಡಿ ಹೋಗಬಹುದುದಾದ ಚಿತ್ರವಿದು. ಸದ್ಯ ಒಂದೊಂದಾಗಿ ಬಂದ ಹಲವು ಒಂದೇ ತರಹದ ಚಿತ್ರಗಳಿಗಿಂತ ಸ್ವಲ್ಪ ಡಿಫರೆಂಟಾದ ತಾಜಾತನ ಮೂಡಿಸುವ ಚಿತ್ರವಿದು.