ಚಿತ್ರ ವಿಮರ್ಶೆ: ದೇವ್ರು ತಾರಾಗಣ: ವಿಜಯ್, ಪ್ರಜ್ಞಾ ನಿರ್ದೇಶಕ: ಕೋಕಿಲಾ ಸಾಧು
ಒಬ್ಬನನ್ನು ಕೊಂದು ಮತ್ತೊಬ್ಬ ಬದುಕುತ್ತಾನೆ ಅವನನ್ನೂ ಮುಗಿಸಲು ಆ ದೇವರಿರುತ್ತಾನೆ. ಇದೇ ಎಳೆಯೊಂದಿಗೆ ರೌಡಿಸಂ ಹಾಗೂ ರಾಜಕೀಯ ಒಟ್ಟಾಗಿ ಕಲೆಸಿದರೆ ಪ್ರೇಕ್ಷಕನ ಮುಂದೆ ಬರುವುದು ದೇವ್ರು.
ಈ ಚಿತ್ರ ಮೂಲತಃ ತಮಿಳಿನ ತಲೈ ನಗರಂ ಚಿತ್ರದ ರಿಮೇಕು. ಒಬ್ಬನನ್ನು ಕೊಂದ ಎಂಬ ಕಾರಣಕ್ಕೆ ಅವನ ಕಡೆಯವರು ಇನ್ನೊಬ್ಬನನ್ನ ಕೊಲ್ಲುವುದು, ರಕ್ತದೋಕುಳಿ, ದೊಂಬಿ, ದರ್ಬಾರು, ನಡುವೆ ನುಸುಳುವ ಹಾಡುಗಳು ದೇವ್ರು ಚಿತ್ರದ ಹೈಲೈಟ್ಸ್.
ಚಿತ್ರದಲ್ಲಿ ವಿಜಿ ಕೇಶ ರಹಿತರಾಗಿ ಸಖತ್ ಸ್ಮಾರ್ಟ್ ಆಗಿ ಕಾಣಿಸುತ್ತಾರೆ. ಮೈ ನವಿರೇಳಿಸುವ ಹೊಡಪೆಟ್ಟುಗಳು ಸೂಪರ್. ಕೋಕಿಲಾ ಸಾಧು ತಮ್ಮ ನಿರ್ದೇಶನದ ಜವಾಬ್ದಾರಿಯನ್ನು ಸೊಗಸಾಗಿ ಮುಗಿಸಿದ್ದಾರೆ. ಸಣ್ಣ ಎಳೆಯ ಕಥೆಯನ್ನು ಎರಡುವರೆ ಗಂಟೆ ಪ್ರೇಕ್ಷಕನ ನೆಮ್ಮದಿ ಹಾಳು ಮಾಡದೆ ಎಳೆದಿದ್ದಾರೆ ಅಂದರೆ ಸಾಧು ಈಸ್ ಗ್ರೇಟ್. ಹಾಸ್ಯ ದೃಶ್ಯಗಳಲ್ಲೂ ಸಾಧುವಿನ ಕೈ ಚಳಕ ಚೆನ್ನಾಗಿ ಮೂಡಿಬಂದಿದೆ.
ವಿಜಯ್ ನಟನೆ, ನಾಟ್ಯ ಎಲ್ಲವೂ ವಿಶೇಷವಾಗಿದೆ. ಆದರೆ ನಾಯಕಿ ಪ್ರಜ್ಞಾ ಮಾತ್ರ ನಟನೆ ಹಾಗೂ ನೃತ್ಯ ಎರಡರಲ್ಲೂ ಪಳಗಬೇಕು. ಶೋಭ್ ರಾಜ್, ರವಿಕಾಳೆ, ಯತಿರಾಜ್, ಆಶಿಷ್ ವಿದ್ಯಾರ್ಥಿ ಇವರುಗಳೆಲ್ಲ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಇನ್ನೊಂದು ವಿಶೇಷವೆಂದರೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬಣ್ಣಹಚ್ಚಿದ್ದು. ರಾಕ್ ಲೈನ್ ವೇಂಕಟೇಶ್ ಪೊಲೀಸ್ ಪಾತ್ರದಲ್ಲಿ ಅದ್ಬುತವಾಗಿ ನಟಿಸಿದ್ದಾರೆ. ಭವಿಷ್ಯದಲ್ಲಿ ಕನ್ನಡಕ್ಕೆ ಉತ್ತಮ ಪೋಷಕ ನಟನಾಗಬಲ್ಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.