ಪುನೀತ್ ಇಮೇಜಿಗೆ ತಕ್ಕುದಾಗಿದೆ 'ರಾಮ್' ಚಿತ್ರ. ಕುಟುಂಬ ಸಮೇತರಾಗಿ ಬರುವವರಿಗೆ, ಮಾಸ್ ಪ್ರೇಕ್ಷಕರಿಗೆ, ಮನರಂಜನೆ ಬಯಸುವವರಿಗೆ 'ರಾಮ್' ಚಿತ್ರ ಹಿಡಿಸುತ್ತದೆ ಎಂಬುದು ಮಾತ್ರ ಸುಳ್ಳಲ್ಲ. ಈ ಚಿತ್ರದ ಮೂಲ, ತೆಲುಗಿನ 'ರೆಡ್' ಚಿತ್ರ. ಮೂಲ ಚಿತ್ರವನ್ನು ಚಾಚೂತಪ್ಪದೇ ಭಟ್ಟಿಇಳಿಸಿದ್ದಾರೆ ನಿರ್ದೇಶಕ ಮಾದೇಶ. ಒಟ್ಟಾರೆ, ಮನರಂಜನೆಯೇ ಚಿತ್ರದ ಹೈಲೈಟ್.
ನಾಯಕ, ಪ್ರೀತಿಸಿದವರನ್ನು ಒಂದುಗೂಡಿಸುತ್ತಾನೆ. ಬೇರ್ಪಟ್ಟ ಸಹೋದರರನ್ನು ಒಟ್ಟುಗೂಡಿಸುತ್ತಾನೆ. ಇದರ ನಡುವೆಯೇ ಸಿಗುವ ಹುಡುಗಿಯನ್ನು ಪ್ರೀತಿಸುತ್ತಾನೆ. ಇವಿಷ್ಟೇ ಚಿತ್ರದ ಎಳೆ. ಚಿತ್ರದಲ್ಲಿ ತುಂಬಾ ಮನರಂಜನೆಯೇ ತುಂಬಿ ತುಳುಕಿದ ಪರಿಣಾಮ ಎಲ್ಲಿಯೂ ಪ್ರೇಕ್ಷಕನಿಗೆ ಬೇಸರವೆನಿಸುವುದಿಲ್ಲ.
ರಂಗಾಯಣ ರಘು, ಸಾಧುಕೋಕಿಲಾ ಅವರ ಕಾಮಿಡಿ ಸೂಪರ್. ಅಲ್ಲದೆ ದೊಡ್ಡಣ್ಣ, ಶೋಭರಾಜ್, ತಿಲಕ್ ಕೂಡ ಪೋಷಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಪುನೀತ್ ನಟನೆಯ ಬಗ್ಗೆ ದೂಸರಾ ಮಾತೇ ಇಲ್ಲ. ಪ್ರಿಯಾಮಣಿ ಕೂಡ ಸೊಗಸಾಗಿ ನಟಿಸಿ ಕನ್ನಡದಲ್ಲಿ ತಳವೂರವುದನ್ನು ಖಚಿತ ಪಡಿಸಿದ್ದಾರೆ.
ಹರಿಕೃಷ್ಣ ಸಂಗೀತದ 'ಗಾನ ಬಜಾನ' ಹಾಡು ಚಿತ್ರ ಮುಗಿದ ಮೇಲೂ ಮನದಲ್ಲಿ ಗುನುಗುತ್ತಲೇ ಇರುತ್ತದೆ. ಒಟ್ಟಾರೆ, ಮನೆಮಂದಿಯೆಲ್ಲಾ ಕುಳಿತು 'ರಾಮ್' ಚಿತ್ರವನ್ನು ನೋಡಬಹುದು.