ಚಿತ್ರ: ಪೊಲೀಸ್ ಕ್ವಾರ್ಟರ್ಸ್ ತಾರಾಗಣ: ಅನೀಸ್ ತೇಜೇಶ್ವರ್, ಸೋನು, ದಿಲೀಪ್ ರಾಜ್, ಅವಿನಾಶ್ ನಿರ್ದೇಶನ: ಎ.ಎಂ.ಆರ್. ರಮೇಶ್ ಸಂಗೀತ: ಜೇಮ್ಸ್ ವಸಂತ
'ಮಿಂಚಿನ ಓಟ'ದ ತಪ್ಪನ್ನು ಸರಿಪಡಿಸಿಕೊಂಡಿರುವ ಎ.ಎಂ.ಆರ್. ರಮೇಶ್, ತಾನು ಈ ಹಿಂದೆ 'ಸೈನೈಡ್' ನಿರ್ದೇಶಿಸಿದವನು ಎಂಬುದನ್ನು ನೆನಪಿಸಿದ್ದಾರೆ. 'ಪೊಲೀಸ್ ಕ್ವಾರ್ಟರ್ಸ್' ಮೂಲಕ ಅವರು ಸಾಧನೆಯ ಮತ್ತೊಂದು ಮೆಟ್ಟಿಲೇರಿದ್ದಾರೆ.
ಈ ಚಿತ್ರ ಇಬ್ಬರು ಪ್ರೇಮಿಗಳ, ಎರಡು ಕುಟುಂಬಗಳ, ತಾಯಿ-ಮಗನ ಪ್ರೀತಿ, ಬಾಬ್ರಿ ಮಸೀದಿ ವಿವಾದವನ್ನು ಒಳಗೊಂಡಿದೆ. ಪ್ರೇಮಿಗಳು ಈ ಚಿತ್ರವನ್ನು ನೋಡಿದರೆ ಇದು ಪ್ರೀತಿಯ ಕತೆ, ಪೊಲೀಸ್ ಅಧಿಕಾರಿಗಳು ವೀಕ್ಷಿಸಿದರೆ ಅವರದೇ ಒಂದು ಕತೆ, ತಾಯಿ-ಮಗ ನೋಡಿದರೆ ಗೋಳಿನ ಕತೆ. ಹೀಗೆ ಪ್ರತಿಯೊಬ್ಬರ ಭಾವಕ್ಕೆ ತಕ್ಕಂತೆ ಈ ಚಿತ್ರ ಹೊಸ ಅರ್ಥ ಕೊಡುತ್ತಾ ಸಾಗುತ್ತದೆ.
1991ರ ಕಾಲಘಟ್ಟದಲ್ಲಿ ನಡೆಯುವ ಈ ಚಿತ್ರದ ಕತೆ ಕನ್ನಡ ಚಿತ್ರರಂಗಕ್ಕೆ ಹೊಸದೆಂದೇ ಹೇಳಬಹುದು. ಕತೆ ತುಂಬಾನೆ ಚಿಕ್ಕದು, ಆದರೆ ಮಾಮೂಲಿ ಪ್ರೀತಿಯ ಕತೆ ಎಂದು ಹೇಳಲು ಸಾಧ್ಯವಿಲ್ಲ. ಚಿತ್ರದಲ್ಲಿ ಸಂದೇಶವೊಂದು ಸಾರಿ ಹೇಳುತ್ತದೆ.
60ರ ದಶಕದಲ್ಲಿ ಪೊಲೀಸರ ಉಡುಪು ಹೇಗಿತ್ತು? 91ರ ದಶಕದಲ್ಲಿ ಬಾಬ್ರಿ ಮಸೀದಿ ಗಲಭೆ ನಡೆದಾಗ ವಾತವಾರಣ ಹೇಗಿತ್ತು ಎಂಬುದನ್ನು ಕೆಲವೇ ನಿಮಿಷಗಳಲ್ಲಾದರೂ ರಮೇಶ್ ಅದ್ಭುತವಾಗಿ ತೋರಿಸಿದ್ದಾರೆ. 1968, 1992 ಮತ್ತು 1999ರ ಪ್ರಮುಖ ಘಟನೆಗಳನ್ನು ಆಧರಿಸಿ ಅವರು ನಮ್ಮನ್ನು ಗತಕಾಲಕ್ಕೆ ಎಳೆದುಕೊಂಡು ಹೋಗುತ್ತಾರೆ.
ಚಿತ್ರದ ನಾಯಕ ಅನೀಸ್ ಹೊಸಬ ಎನ್ನಲು ಸಾಧ್ಯವಿಲ್ಲ. ನಟನೆಯಲ್ಲಿ ಪಳಗಿದವರಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಸೋನು ಸೊಗಸಾಗಿ ನಟಿಸಿದ್ದಾರೆ. ದಿಲೀಪ್ ರಾಜ್ ಎಂದಿನಂತೆ ಸಲೀಸಾಗಿ ಅವಿನಾಶ್‌ಗೆ ಪೈಪೋಟಿ ನೀಡಿದ್ದಾರೆ. ಧರ್ಮ ನಟನೆ ಕೂಡ ಪ್ರಶಂಸಾರ್ಹ.
ಕ್ಯಾಮರಾ ಕೆಲಸ, ಎಡಿಟಿಂಗ್, ಸಂಗೀತ ಎಲ್ಲವೂ ಚಿತ್ರಕ್ಕೆ ತಕ್ಕಂತಿದೆ. ಸಂಗೀತ ನಿರ್ದೇಶಕ ಜೇಮ್ಸ್ ವಸಂತ್ ನೀಡಿರುವ ಮೂರು ಹಾಡುಗಳಂತೂ ಮನಮೋಹಕ.
ಅಂತೂ ಬೇರೆ ಭಾಷೆಗಳ ಚಿತ್ರದಂತೆ ನಮ್ಮಲ್ಲೂ ಹೊಸ ಪ್ರಯೋಗಗಳು ನಡೆಯುತ್ತಿರುವುದು ಮತ್ತು ಅದು ಹೊಸ ವರ್ಷದ ಆರಂಭದಲ್ಲೇ ನಡೆದಿರುವುದು ಸಂತಸದ ಸಂಗತಿ.
ಹಾಗಾಗಿ ವಿಷ್ಣು ಅಗಲಿಕೆಯ ನೋವಿನಲ್ಲೂ ಚಿತ್ರಮಂದಿರದತ್ತ ಹೆಜ್ಜೆ ಹಾಕುವುದಕ್ಕಡ್ಡಿಯಿಲ್ಲ.
ಅಂದ ಹಾಗೆ ಈ ಚಿತ್ರ ತಮಿಳಿನಲ್ಲಿ 'ಕಾವಲರ್ ಕುಡಿಯಿರಪ್ಪು' ಎಂಬ ಹೆಸರಿನಲ್ಲಿ ಇದೇ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದ ಹಾಡುಗಳು ತಮಿಳಿನಲ್ಲೂ ಜನಪ್ರಿಯವಾಗಿವೆ.