ಚಿತ್ರ: ಪ್ರೀತಿಯ ತೇರು ತಾರಾಗಣ: ತನೀಲ್, ಸೋನಿಯಾ, ಮಧುಮಿತ. ನಿರ್ದೇಶನ: ಪ್ರಸಾದ್
ಹಳೇ ಕಾಲದ ಕಥೆಯನ್ನೇ ಮತ್ತೆ ಮತ್ತೆ ಚಿತ್ರ ಮಾಡಿದರೆ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ? ಮೊದಲೇ ಹೊಸಬರ ಚಿತ್ರವೆಂದರೆ ಚಿತ್ರಪ್ರೇಮಿಗಳು ಮಾರು ದೂರ ಓಡುತ್ತಾರೆ. ಅಂಥದ್ದರಲ್ಲಿ ಹೊಸಬರನ್ನು ಹಾಕಿಕೊಂಡು ಹಳೆಯ ಕಥೆಯನ್ನು ಮತ್ತೊಮ್ಮೆ ಚಿತ್ರಿಸಿ ತೋರಿಸಿದೆ ಪ್ರೀತಿಯ ತೇರು ಚಿತ್ರ.
ಚಿತ್ರದಲ್ಲಿ ನಾಯಕ ತನೀಲ್‌ಗೆ ರೌಡಿಯ ಪಾತ್ರ. ದುಡ್ಡಿಗಾಗಿ ಮಾಡಬಾರದ್ದನ್ನು ಮಾಡುತ್ತಿರುತ್ತಾನೆ. ಅದೇ ಸಮಯದಲ್ಲಿ ನಾಯಕಿಯೊಂದಿಗೆ ಆತನ ಪ್ರೀತಿ ಪ್ರಾರಂಭವಾಗುತ್ತದೆ. ಜೊತೆಗೆ ಸುತ್ತಾಡುವ ಆಕೆಯ ಪ್ರೀತಿ ನಾಟಕ ಎಂಬುದು ನಾಯಕನಿಗೆ ಮನದಟ್ಟಾಗುತ್ತದೆ. ಇದಿಷ್ಟು ಚಿತ್ರದ ಮೊದಲಾರ್ಧ. ನಾಯಕಿ ಪ್ರೀತಿಯ ಡ್ರಾಮಾ ಮಾಡಲು ಕಾರಣವೇನು ಎಂಬುದನ್ನು ತಿಳಿಯಬೇಕಾದರೆ ಚಿತ್ರದ ಉಳಿದರ್ಧ ನೋಡಬೇಕು. ತಿಳಿದುಕೊಳ್ಳುವ ಆಸೆ ನಿಮಗಿದ್ದರೆ ಚಿತ್ರಮಂದಿರಕ್ಕೆ ಹೋಗಿ ನೋಡುವುದಾದರೆ ನೋಡಿ!
ಇಂದಿನ ಕಾಲದಲ್ಲಿ ಇಂಥ ಕಥೆ ಇಟ್ಟುಕೊಂಡು ಚಿತ್ರ ಮಾಡಿ ಗೆಲ್ಲಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಙಾನ ನಿರ್ದೇಶಕರಿಗೆ ಇಲ್ಲವಾಗಿದೆಯೋ ಅರ್ಥವಾಗುತ್ತಿಲ್ಲ. ಕೋಟಿ ಸುರಿದ ನಿರ್ಮಾಪಕರಿಗೂ ಇದೇ ಮಾತು ಅನ್ವಯಿಸುತ್ತದೆ. ತಮಾಷೆ ಎಂದರೆ ನಿರ್ಮಾಪಕರು ಈ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದ್ದಾರೆ. ಅವರೂ ಕೂಡಾ ನಟನೆಗೆ ಮುಂದೆದೂ ಇಳಿಯುವ ಸಾಹಸ ಮಾಡದಿದ್ದರೆ ಸಾಕು.
ನಾಯಕ ತನಿಲ್ ತಕ್ಷಣ ನಟನಾ ಶಾಲೆಗೆ ಸೇರುವುದು ಉತ್ತಮ. ಕಥೆ, ಸಂಭಾಷಣೆ ಎಲ್ಲವೂ ಮನಸ್ಸಿಗೆ ಬಂದಂತೆ ಮಾಡಲಾಗಿದೆ. ಮಧುಮಿತಾಳ ನಟನೆಯೂ ಅಷ್ಟಕ್ಕಷ್ಟೆ. ಇಂಥ ಚಿತ್ರ ಮಾಡಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಯಾಕೆ ಬರಲಿಲ್ಲ ಎಂದು ಕೇಳುವುದು ತಪ್ಪಲ್ಲವೇ?