ಚೈತನ್ಯ ನಿರ್ದೇಶಿಸಿದ ಆ ದಿನಗಳು ಚಿತ್ರ ನಿಜವಾಗಿಯೂ ಅದ್ಬುತವಾಗಿತ್ತು. ಅದೇ ನಂಬಿಕೆಯಲ್ಲಿ ಚಿತ್ರರಸಿಕರು ಅವರ ನಿರ್ದೇಶನದ ಸೂರ್ಯಕಾಂತಿ ಚಿತ್ರದ ಬರುವಿಕೆಗಾಗಿ ಕಾದು ಕುಳಿತಿದ್ದರು. ಆದರೆ ಸೂರ್ಯಕಾಂತಿಯನ್ನು ನೋಡಿದ ಮೇಲೆ ಚೈತನ್ಯ ಅವರ ನಿರ್ದೇಶನ ಆ ದಿನಗಳಲ್ಲೇ ವಾಸಿ ಎನಿಸಿಬಿಡುತ್ತದೆ.
ಉಜ್ಬೇಕಿಸ್ತಾನದಿಂದ ಚಿತ್ರ ಪ್ರಾರಂಭವಾಗುತ್ತದೆ. ಅಲ್ಲಿ ದುಡ್ಡಿಗಾಗಿ ಸುಪಾರಿ ಕಿಲ್ಲರ್ಸ್ ಕೊಲೆ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುತ್ತಾರೆ. ಅಂತ ಗ್ಯಾಂಗ್ ಒಂದರಲ್ಲಿ ನಾಯಕ ನಟ ಚೇತನ್ ಕೂಡ ಒಬ್ಬರು. ಗ್ಯಾಂಗ್ ಲೀಡರ್ ಆದೇಶದಂತೆ ಚೇತನ್ ಬೆಂಗಳೂರಿಗೆ ಬರುತ್ತಾನೆ. ಇಲ್ಲಿಗೆ ಬಂದ ನಂತರ ತೆಲುಗಿನ ಅತುಡು ಚಿತ್ರದ ಭಟ್ಟಿ ಇಳಿಸುವಿಕೆ ಪ್ರಾರಂಭವಾಗುತ್ತದೆ. ಯಾರದೋ ಹೆಸರಲ್ಲಿ ನಾಯಕಿ ಮನೆ ಸೇರುತ್ತಾನೆ. ಮನೆಯವರ ರಕ್ಷಣೆಗೆ ನಿಲ್ಲುತ್ತಾನೆ. ಜೊತೆಗೆ ನಾಯಕಿಗೂ ಕಾಳು ಹಾಕಲು ಪ್ರಾರಂಭಿಸುತ್ತಾನೆ. ಇವಿಷ್ಟು ಚಿತ್ರದ ಕ್ಷಮಿಸಿ, ಅತುಡು ಚಿತ್ರದಿಂದ ಆಯ್ದ ಎಳೆ.
ಕನ್ನಡದಲ್ಲಿ ಇದ್ದದ್ದೇ ಗೋಳು ಚಿತ್ರ ನೋಡೋಣವೆಂದು ಪ್ರೇಕ್ಷಕ ಕುಳಿತುಕೊಂಡರೆ, ಚಿತ್ರ ಮುಂದೆಯೂ ಸಾಗದೆ ಅತ್ತ ಹಿಂದೆಯೂ ಹೋಗದೇ ಬೇಸತ್ತು ಜಾಗ ಖಾಲಿ ಮಾಡುತ್ತಾನೆ.
ಚಿತ್ರದಲ್ಲಿ ಎಡಿಟಿಂಗ್ ಶಾರ್ಪ್ ಆಗಿಲ್ಲ. ಕ್ಯಾಮರಾ ಕೆಲಸವೂ ಅಷ್ಟೆ, ಬೇಕಾಬಿಟ್ಟಿ. ಸಂಗೀತ ಹಳೆ ಕಾಲದ್ದು. ನಟ ಚೇತನ್ ಸಖತ್ ಸ್ಮಾರ್ಟ್ ಆಗಿ ಕಾಣಿಸುತ್ತಾರೆ. ರೆಜಿನಾ ಕೂಡಾ ನೋಡೋದಕ್ಕೇನೋ ಮುದ್ದು ಮುದ್ದು, ಆದರೆ ನಟನೆ ಮಾತ್ರ ಮಾಯವಾಗಿದೆ. ರೆಜಿನಾಳ ನಟನೆ ನೋಡಿದರೆ ಚೇತನ್ ಎಷ್ಟೋ ವಾಸಿ. ಮನರಂಜನೆ ನಂಬಿ ಸೂರ್ಯಕಾಂತಿಗೆ ಹೋದರೆ ದಿನಪೂರ್ತಿ ಮೂಡ್ ಔಟ್ ಗ್ಯಾರಂಟಿ.