ಚಿತ್ರ: ಸ್ಕೂಲ್ ಮಾಸ್ಟರ್ ತಾರಾಗಣ: ಡಾ.ವಿಷ್ಣುವರ್ಧನ್, ಸುಹಾಸಿನಿ, ದೇವರಾಜ್, ಅವಿನಾಶ್ ಮತ್ತಿತರರು. ನಿರ್ದೇಶನ: ದಿನೇಶ್ ಬಾಬು
ಹೆಚ್ಚು ಕಡಿಮೆ ಕಳೆದ ಒಂದು ವರ್ಷದಿಂದ ಬಿಡುಗಡೆ ತಿಣುಕಾಡಿದ 'ಸ್ಕೂಲ್ ಮಾಸ್ಟರ್' ಚಿತ್ರ ಕೊನೆಗೂ ತೆರೆಗೆ ಬಂದಿದೆ. ಅಂತೂ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ದಿಢೀರನೆ ಚಿತ್ರ ಬಿಡುಗಡೆ ಮಾಡಿ ಸಾಹಸ ಸಿಂಹನ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದ್ದಾರೆ. ಸ್ಕೂಲ್ ಮಾಸ್ಟರ್ ಚಿತ್ರ ನಿರ್ಮಾಪಕರು ಈವರೆಗೆ ಬಿಡುಗಡೆ ಮಾಡಲು ಮೀನಮೇಷ ಎಣಿಸಿ ವಿಷ್ಣು ಸಾವಿನ ನಂತರ ದಿಢೀರ್ ಬಿಡುಗಡೆ ಮಾಡುತ್ತಿರುವುದಕ್ಕೆ, ವಿಷ್ಣು ಸಾವನ್ನು ಚಿತ್ರತಂಡ ಎನ್‌ಕ್ಯಾಶ್ ಮಾಡುತ್ತಿದೆಯೆಂಬ ಆರೋಪ ಬಂದರೂ, ವಿಷ್ಣು ಅಗಲಿಕೆಯಿಂದ ನೊಂದ ಅಭಿಮಾನಿಗಳಿಗೆ ಸಾಕ್ಷಾತ್ ವಿಷ್ಣು ಅವರೇ ಪ್ರತ್ಯಕ್ಷವಾದಂತೆ ಅನಿಸಿದೆ.
PR
ಸ್ಕೂಲ್ ಮಾಸ್ಟರ್ ಚಿತ್ರ ಸಾಹಸಸಿಂಹ ಅವರ 199ನೇ ಚಿತ್ರವಾಗಿದ್ದು, ರಾಜ್ಯದ 70 ಕೇಂದ್ರಗಳಲ್ಲಿ ಬಿಡುಗಡೆಯಾಗಿ ಪ್ರತಿದಿನ 280 ಪ್ರದರ್ಶನಗಳನ್ನು ನೀಡುವ ಮೂಲಕ ಪ್ರೇಕ್ಷಕರ ಕಣ್ಮನ ಸೆಳೆಯುತ್ತಿದೆ. ಬಿಡುಗಡೆಯ ದಿನ ಇಂದು ಎಷ್ಟೋ ಗಂಟೆಗಳ ಮೊದಲೇ ಟಿಕೆಟ್ ಭಾರೀ ಬಿಕರಿಯಾಗಿದ್ದು, ಜನ ಮುಗಿಬಿದ್ದು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ.
ಸಂಭಾಷಣೆಯೇ ಇಡೀ ಚಿತ್ರದ ಜೀವಾಳ. ಕೇವಲ ಡೈಲಾಗುಗಳ ಮೂಲಕವೇ ವಿಷ್ಣು ತಮ್ಮ ಅಭಿಮಾನಿಗಳನ್ನು ಹಿಡಿದಿಟ್ಟಿದ್ದಾರೆ. ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ವಿಷ್ಣು, ಡೈಲಾಗ್ ಡೆಲಿವರಿಗೆ ಕೊಟ್ಟ ಸಮಯಾವಕಾಶ ಪ್ರತಿಯೊಬ್ಬರಲ್ಲೂ ಬೆರಗು ಮೂಡಿಸುವಂತಿದೆ. ಅಷ್ಟೇ ಅಲ್ಲ, ನಟನೆ ವಿಚಾರವಾಗಿ ಎರಡು ಮಾತೇ ಇಲ್ಲ. ಎಂದಿನಂತೆ ತಮ್ಮ ನಟನೆಯನ್ನು ಲೀಲಾಜಾಲವಾಗಿ ನಿಭಾಯಿಸಿ ಎಂದೆಂದೂ ತಾವೊಬ್ಬ ಅಸಾಮಾನ್ಯ ಪ್ರತಿಭೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಮಗುವೊಂದರ ಅಪಹರಣವಾದಾಗ ಸುತ್ತಲ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ಅಪಹರಣದ ಪ್ರಕರಣವೊಂದನ್ನು ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಳಿಗೆ ಹೇಗೆ ಬಳಸಿಕೊಳ್ಳುತ್ತಾರೆ. ಆದರೆ ಮಗುವಿನ ಮನೆಯವರ ಮಾನಸಿಕ ಸ್ಥಿತಿಯತ್ತ ಯಾರೂ ಗಮನ ನೀಡುವುದಿಲ್ಲ ಎಂಬುದು ಚಿತ್ರದ ಕಥೆ. ಅಪಹರಣದಿಂದ ನೊಂದ ಕುಟುಂಬದ ಪರಿಸ್ಥಿತಿಯನ್ನು ಚಿತ್ರದಲ್ಲಿ ಅದ್ಬುತವಾಗಿ ಮನಮುಟ್ಟುವಂತೆ ಚಿತ್ರೀಕರಿಸಲಾಗಿದೆ. ಅಲ್ಲದೆ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಮೇಲೂ ಬೆಳಕು ಚೆಲ್ಲುತ್ತಾರೆ ನಿರ್ದೇಶಕ ದಿನೇಶ್ ಬಾಬು.
PR
ಚಿತ್ರದಲ್ಲಿ ಸುಹಾಸಿನಿ ಅವರ ನಟನೆ ಎಂದಿನಂತೆ ಅದ್ಭುತ. ಅವರ ನಗುವೇ ಚಿತ್ರಕ್ಕೆ ತೋರಣ ಕಟ್ಟಿದಂತಿದೆ. ವಿಷ್ಣು ಸುಹಾಸಿನಿ ಜೋಡಿ ಮೋಡಿ ಮಾಡುತ್ತದೆ. ದೇವರಾಜ್, ಅವಿನಾಶ್ ಅವರಂತಹ ಘಟಾನುಘಟಿ ನಟರ ಅಭಿನಯದ ಬಗ್ಗೆಯೂ ಎರಡು ಮಾತಿಲ್ಲ. ಇನ್ನು ಮುಂದೆ ವಿಷ್ಣು ಅವರ ನಟನೆ ಅವರ 200ನೇ ಚಿತ್ರ 'ಅಪ್ತ ರಕ್ಷಕ' ಬಿಟ್ಟರೆ ಮತ್ತೆಂದೂ ಸಿಗಲಾರದು. ಹಾಗಾಗಿ ಆರಾಮವಾಗಿ ನೋಡಬಹುದಾದ ಸಮಾಜಮುಖಿ ಸಂದೇಶ ಹೊತ್ತ ಸ್ಕೂಲ್ ಮಾಸ್ಟರ್ ಚಿತ್ರದನ್ನು ಧಾರಾಳವಾಗಿ ನೋಡಿ.