ಮೂರು ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರವೊಂದು ನಿರೀಕ್ಷಿತವೆಂಬಂತೆ ಕನ್ನಡಕ್ಕೂ ರಿಮೇಕ್ ಆಗಿದೆ. ಅದೇ ದರ್ಶನ್ ಅಭಿನಯದ ಪೊರ್ಕಿ ಚಿತ್ರ. ನಮ್ಮಲ್ಲೂ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದೂ ಕೂಡಾ ನಿರೀಕ್ಷಿತವೆಂಬಂತೆಯೇ ಸ್ವಲ್ಪ ಮಟ್ಟಿಗೆ ಹುಸಿಯಾಗಿದೆ. ಎಲ್ಲಾ ಭಾಷೆಗಳಲ್ಲೂ ಈ ಚಿತ್ರ ನೋಡಿರುವ ಕನ್ನಡ ಪ್ರೇಕ್ಷಕರು ತೆಲುಗಿನ ಪೊಕರಿ ಮುಂದೆ ಈ ಪೊರ್ಕಿ ಎನೂ ಇಲ್ಲ ಬಿಡಿ ಎನ್ನುತ್ತಿದ್ದಾರೆ.
ಈ ಚಿತ್ರದ ಹಾಡುಗಳನ್ನು ಕೊಲ್ಲಲಾಗಿದೆ. ಸಾಹಸ ದೃಶ್ಯಗಳಿಗೆ ಗ್ರಾಫಿಕ್ಸ್ ಸೇರಿಸಿ ಹಾಳು ಮಾಡಲಾಗಿದೆ. ತಾಂತ್ರಿಕವಾಗಿ ಚಿತ್ರ ತುಂಬಾ ಸೊರಗಿ ಹೋಗಿದೆ.
PR
ಸಾಧು, ಟೆನ್ನಿಸ್, ಶರಣ್ ಅವರುಗಳ ಕಾಮಿಡಿ ಚಿತ್ರದಲ್ಲಿ ಯಾವ ಗಿಮಿಕ್ಕೂ ಮಾಡೋದಿಲ್ಲ. ದರ್ಶನ್ ಅವರ ನಟನೆ ಸೊಗಸಾಗಿ ಮೂಡಿ ಬಂದಿದ್ದು, ಈ ಬಾರಿಯ ಅವರ ಹೇರ್ ಸ್ಟೈಲ್ ಅವರಿಗೆ ಚೆನ್ನಾಗಿ ಒಪ್ಪಿದೆ. ನಾಯಕಿ ಪ್ರಣೀತಾಗೆ ಇದು ಚೊಚ್ಚಲ ಚಿತ್ರ. ಪರವಾಗಿಲ್ಲ ಎನ್ನುವಷ್ಟರಮಟ್ಟಿಗೆ ನಟಿಸಿರುವ ಪ್ರಣೀತಾ, ತೆಳ್ಳಗೆ, ಬೆಳ್ಳಗೆ ದರ್ಶನ್ ಅವರ ಹೈಟಿಗೆ ಸರಿಯಾಗಿ ಹೊಂದಿಕೆಯಾಗುತ್ತಾರೆ.
ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶೋಭರಾಜ್ ನಟನೆ ನಿಜಕ್ಕೂ ಚೆನ್ನಾಗಿದೆ. ಅಶಿಶ್ ವಿದ್ಯಾರ್ಥಿ, ಅವಿನಾಶ್, ಚಿತ್ರಾ ಶೆಣೈ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ.
ಆದರೆ, ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಯಾವುದೂ ಮನದಲ್ಲಿ ಉಳಿಯುವುದಿಲ್ಲ. ಒಟ್ಟಾರೆ ಎಂ.ಡಿ.ಶ್ರೀಧರ್ ಉತ್ತಮವಾದ ರಿಮೇಕ್ ಚಿತ್ರವನ್ನೂ ಕೊಡುವಲ್ಲಿ ಸೋತಿದ್ದಾರೆ ಎನ್ನದೆ ವಿಧಿಯಿಲ್ಲ.