ಬಾಯ್ತುಂಬಾ ನಕ್ಕುಬಿಡಿ, ನಕ್ಕು ಹಗುರಾಗಿ: ಇದು ಕ್ರೇಜಿ ಕುಟುಂಬ
PR
ಚಿತ್ರ : ಕ್ರೇಜಿ ಕುಟುಂಬ ತಾರಾಗಣ : ರಮೇಶ್ ಅರವಿಂದ್, ಸನಾತನಿ, ಅನಂತನಾಗ್ ನಿರ್ದೇಶನ : ಬಿ.ರಾಮಮೂರ್ತಿ
ತಮ್ಮ ಹಿಂದಿನ ಚಿತ್ರಗಳಿಗಿಂತ ಬಿ.ರಾಮಮೂರ್ತಿ ಕ್ರೇಜಿ ಕುಟುಂಬವನ್ನು ಸೊಗಸಾಗಿ ನಿರ್ದೇಶಿಸಿದ್ದಾರೆ. ಚಿತ್ರದ ಒಂದು ಹಂತದವರೆಗೆ ಪ್ರೇಕ್ಷಕರು ನಗುವುದನ್ನು ಬಿಟ್ಟರೆ ಬೇರೇನೂ ಮಾಡುವುದಿಲ್ಲ. ಕ್ರೇಜಿ ಕುಟುಂಬ ಚಿತ್ರದಲ್ಲಿ ಹಾಸ್ಯಕ್ಕೆ ಬರವಿಲ್ಲ. ಸ್ವಲ್ಪ ಸೆಂಟಿಮೆಂಟ್ ಕೂಡ ಇದ್ದು, ಒಟ್ಟಾರೆ ಕಾಮಿಡಿ ಪ್ರಿಯರಿಗೆ ಹೇಳಿಮಾಡಿಸಿದ ಚಿತ್ರದಂತಿದೆ.
ಉತ್ತರ ಕರ್ನಾಟಕದ ಭಾಷೆ, ಜುಬ್ಬಾ ಪೈಜಾಮ, ಟೊಪ್ಪಿ ಧರಿಸಿಕೊಂಡು ನಟ ರಮೇಶ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದು ಮರಾಠಿಯ ದೇ ಧಕ್ಕಾ ಚಿತ್ರದ ರಿಮೇಕ್. ಆದರೆ ನಿರ್ದೇಶಕರು ಎಲ್ಲಿ ಎಷ್ಟು ಬೇಕೋ ಅಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.
PR
ಸನಾತನಿ ನಟನೆ ಅಚ್ಚುಕಟ್ಟಾಗಿದೆ. ಅನಂತನಾಗ್ ಮಾತ್ರ ಕಣ್ಣಲ್ಲೇ ಎಲ್ಲವನ್ನೂ ಹೇಳುತ್ತಾರೆ. ರಮೇಶ್ ಅವರ ಮಗುವಿನ ಪಾತ್ರದಲ್ಲಿ ನಟಿಸಿರುವ ಪುಟಾಣಿಗೆ ಉತ್ತಮ ಭವಿಷ್ಯವಿದೆ. ರಿಕ್ಕಿ ಕೇಜ್ ಸಂಗೀತ, ಛಾಯಾಗ್ರಹಣ ಸಾಮಾನ್ಯವಾಗಿದೆ.
ಟಂ ಟಂ ಆಟೋದಲ್ಲಿ ಬೆಳಗಾವಿಯಿಂದ ಇಡೀ ಕುಟುಂಬ ಬೆಂಗಳೂರಿಗೆ ಹೊರಡುವುದರಿಂದ ಕಥೆ ಪ್ರಾರಂಭವಾಗುತ್ತದೆ. ಹಾಸ್ಯದ ಜೊತೆಗೆ ನಿರ್ದೇಶಕರು ಸಾಮಾಜಿಕ ಸಂದೇಶ ಕೊಟ್ಟಿರುವ ರೀತಿ ಮೆಚ್ಚುಗೆಯಾಗುತ್ತದೆ. ಖಂಡಿತವಾಗಿಯೂ, ಇಡೀ ಕುಟುಂಬ ಕುಳಿತು ಈ 'ಕ್ರೇಜಿ ಕುಟುಂಬ' ನೋಡಿ ಎಂಜಾಯ್ ಮಾಡಬಹುದು. ಹಾಗಾದ್ರೆ ನಗೋದಕ್ಯಾಕೆ ಚಿಂತೆ? ನೋಡಿ, ಬಾಯ್ತುಂಬಾ ನಕ್ಕುಬಿಡಿ. ನಕ್ಕು ಹಗುರಾಗಿ. ಏನಂತೀರಾ?!