ಮೈ ಜುಮ್ ಎನ್ನಿಸುವ ಸನ್ನಿವೇಶ. ನೆರಳು ಬೆಳಕಿನ ಆಟ, ರಾತ್ರಿ ಕಪ್ಪುಗತ್ತಲೆಯಲ್ಲಿ ಮೆರೆದ ಛಾಯಾಗ್ರಹಣದ ವೈಭವ, ಸೈ ಎನಿಸುವ ಉಮಾಶ್ರಿ ಅಭಿನಯದಿಂದ ಒಮ್ಮೆ ನೋಡೋಣ ಅನ್ನಿಸುವ ಚಿತ್ರ ಅಂತರಾತ್ಮ.
ಇದು ಸಾಮಾನ್ಯವಾಗಿ ಇತ್ತೀಚಿನ ಆಕರ್ಷಣೆಗಳಲ್ಲಿ ಒಂದಾಗಿರುವ ಭೂತದ ವೈಭವೀಕರಣದ ಚಿತ್ರವೇ ಆದರೂ, ನಿರೂಪಣೆಯಲ್ಲಿ ವಿಭಿನ್ನತೆ ಕಾಪಾಡಿಕೊಳ್ಳಲಾಗಿದೆ. ಹೊಸ ಬಾಟಲಿಯಲ್ಲಿ ಹಳೆ ಮದ್ಯ ಅನ್ನುವಂತಿದೆ ಚಿತ್ರದ ಕಥೆ. ಇಷ್ಟೇ ಆಗಿದ್ದರೆ ಬರೆಯುವ ಅಗತ್ಯವೇ ಇರಲಿಲ್ಲ. ಇದೊಂದು ವಿಮರ್ಶೆಗೆ ಒಳಗಾಗುವ ಚಿತ್ರವಾಗಿ ಲಭಿಸುತ್ತಿರಲಿಲ್ಲ. ಆದರೆ, ಇಲ್ಲೊಂದು ಎಲ್ಲವನ್ನೂ ಮೀರಿ ನಿಲ್ಲುವ ಅದ್ಬುತ ಪ್ರೇಮ ಕಥೆ ಅಡಗಿದೆ. ಭೂತದ ಅಟ್ಟಹಾಸದ ನಡುವೆ ನವಿರಾಗಿ ಪ್ರೇಮ ಕಥೆಯನ್ನೂ ಹೆಣೆದರೆ ಚಿತ್ರ ಹೇಗಿರಬಹುದು ಎಂದು ನೋಡುವುದಾದರೆ ಈ ಚಿತ್ರವನ್ನು ಒಮ್ಮೆ ನೋಡಬೇಕು.
ಈಗಾಗಲೇ ಉತ್ತಮ ಅಭಿನಯದಿಂದ ಹಲವು ಹತ್ತು ಪ್ರಶಸ್ತಿ ಗಳಿಸಿ ಕನ್ನಡ ಚಿತ್ರರಂಗದಲ್ಲಿ ಮೆರೆಯುತ್ತಿರುವ ಪುಟ್ನಂಜಿ ಉಮಾಶ್ರೀ ಇಡೀ ಚಿತ್ರದ ಪ್ರಮುಖ ಹೈಲೈಟ್. ಮನೋಜ್ಞ ಅಭಿನಯದ ಮೂಲಕ ಎಲ್ಲಾ ಸ್ತರದಲ್ಲೂ ಗಮನ ಸೆಳೆದಿದ್ದಾರೆ. ಎದುರು ಇರುವ ನಟರ ಅಭಿನಯವನ್ನೇ ಮರೆಮಾಚುವ ಮಟ್ಟಿಗೆ ಇವರ ಅಭಿನಯ ಮೇಳೈಸಿದೆ. ಅವರ ಈ ಪಾತ್ರದ ಅಭಿನಯಕ್ಕೆ ಪ್ರಶಸ್ತಿ ಸಿಕ್ಕರೂ ಅತಿಶಯೋಕ್ತಿ ಇಲ್ಲ ಅನ್ನಿಸುತ್ತದೆ.
ಚಿತ್ರದಲ್ಲಿ ಶ್ಯಾಮ್ (ಮಿಥುನ್ ತೇಜಸ್ವ್) ಒಬ್ಬ ಬ್ಯಾಂಕ್ ಕೆಲಸಗಾರ. ಒಂದು ದಿನ ಶ್ಯಾಮ್ ಬ್ಯಾಂಕ್ ಖಾತೆಯಲ್ಲಿ 14 ಕೋಟಿ ರೂಪಾಯಿ ದುಡ್ಡು ಇದ್ದಕ್ಕಿದ್ದಂತೆ ಕ್ರೆಡಿಟ್ ಆಗಿರುತ್ತದೆ. ಏನೋ ತಪ್ಪಿನಿಂದ ಹೀಗೆ ಆಗಿರುತ್ತದೆಯಾದರೂ, ಅದಾಗಿ ಕೆಲವೇ ದಿನಗಳಲ್ಲಿ ಮತ್ತೊಬ್ಬನಿಂದ ಇದೇ ಕಾರಣಕ್ಕೆ ಶ್ಯಾಮ್ ಕೊಲೆಯಾಗುತ್ತದೆ. ಹೀಗೆ ಕೊಲೆಯಾದ ಶ್ಯಾಮ್ ಭೂತವಾಗುತ್ತಾನೆ ಜೊತೆ ತನ್ನ ಹೆಂಡತಿ ಡೇಂಜರ್‌ನಲ್ಲಿದ್ದಾಳೆಂಬುದನ್ನು ಗುರುತಿಸುತ್ತಾನೆ. ಆದರೆ ಭೂತವಾಗಿರುವ ಕಾರಣ ತನ್ನ ಹೆಂಡತಿಯನ್ನು ಉಳಿಸಲು ಆತನಿಗೆ ಕೆಲವೇ ಕೆಲವು ಆಯ್ಕೆಗಳಿರುತ್ತದೆ, ಎಲ್ಲ ಸಂದರ್ಭಗಳಲ್ಲೂ ಸಹಾಯಕ್ಕೆ ನಿಲ್ಲಲು ಸಾದ್ಯವಿಲ್ಲ. ಆದರೂ ತನ್ನ ಹೆಂಡತಿಯನ್ನು ಭೂತವಾಗಿ ಹೇಗೆ ಉಳಿಸುತ್ತಾನೆ ಎಂಬುದು ಕಥಾ ಹಂದರ.
ಚಿತ್ರದಲ್ಲಿ ಉಮಾಶ್ರೀ ಕಪಟ ಮಾಂತ್ರಿಕಳಾಗಿ ನಟಿಸಿದ್ದರೆ, ರಂಗಾಯಣ ರಘು ಇನ್ನೊಂದು ಭೂತವಾಗಿ ನಟಿಸಿದ್ದಾರೆ. ನಟ ಮಿಥುನ್, ನಟಿ ವಿಶಾಖಾ ಉತ್ತಮ ನಟನೆ ತೋರಿದ್ದಾರೆ. ನಿರ್ದೇಶಕ ಶಂಕರ್ ಕ್ಯಾಮರಾ ಹಿಂದೆ ತಮ್ಮ ಪಾತ್ರವನ್ನು ಸೂಕ್ತವಾಗಿ ಮಾಡಿ ಮುಗಿಸಿದ್ದಾರೆ. ರಂಗಾಯಣ ರಘು ಎಂದಿನ ಶೈಲಿಯನ್ನು ಬದಲಿಸಿ ಅಭಿನಯಿಸುವ ಯತ್ನ ಮಾಡಿದ್ದು ಕೆಲಭಾಗ ಯಶಸ್ಸು ಕಂಡಿದ್ದಾರೆ. ರೋಹನ್ ಎಂಬ ಹೊಸ ಮುಖದ ನಟನ ಅಭಿನಯಕ್ಕೆ ಮೋಸ ಆಗಿಲ್ಲ.
ಇಡೀ ಚಿತ್ರದಲ್ಲಿ ಉಮಾಶ್ರೀ ಹೈಲೈಟ್. ಆದರೆ ಇದಕ್ಕೆ ಸಮಾನವಾಗಿ ಚಿತ್ರವನ್ನು ಎತ್ತಿ ನಿಲ್ಲಿಸಿದ್ದು ಸುಂದರ್ನಾಥ್ ಸುವರ್ಣರ ಛಾಯಾಗ್ರಹಣ. ಅದ್ಬುತ ಅನ್ನಿಸುವ ಹಾಗೆ ಇವರು ಕ್ಯಾಮರಾ ತಿರುಗಿಸಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣಗೊಂಡ ಎರಡು ಹಾಡುಗಳಂತೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ. ಒಟ್ಟಾರೆ ಚಿತ್ರ ವೀಕ್ಷಿಸಿದಾಗ ಎಲ್ಲರ ಅಭಿನಯವೂ ಉತ್ತಮವಾಗಿದೆ ಅನ್ನಿಸುತ್ತದೆ.
ಚಿತ್ರದಲ್ಲಿ ಹೊಡೆದಾಟ, ಹಾಡು, ಗ್ರಾಫಿಕ್ಸ್, ಆಕ್ಷನ್ ಎಲ್ಲವೂ ಉತ್ತಮ ಎನಿಸುವಂತೆ ಮೂಡಿ ಬಂದಿದೆ. ಕುಟುಂಬ ಸಮೇತರಾಗಿ ತೆರಳಬಹುದಾದ ಚಿತ್ರ. ಕನ್ನಡಕ್ಕೊಂದು ಫ್ರೆಶ್ ಚಿತ್ರವಿದು.