ಮಕ್ಕಳನ್ನು ರಂಜಿಸಲು ಇದುವರೆಗೂ ಕೋತಿ, ಆನೆ, ಹಾವು, ಮತ್ತಿತರವುಗಳನ್ನು ತರುತ್ತಿದ್ದ, ಅದಕ್ಕೆ ಧಾರ್ಮಿಕ ಆಚರಣೆಯ ಟಚ್ ನೀಡುತ್ತಿದ್ದ ನಿರ್ದೇಶಕ ರಾಮ್ ನಾರಾಯಣ್ ತಮ್ಮ 120ನೇ ಚಿತ್ರಕ್ಕೆ ಹೈಟೆಕ್ ಸ್ಪರ್ಶ ನೀಡಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆವಿಷ್ಕಾರವನ್ನು ಬಳಸಿಕೊಂಡಿದ್ದರೂ, ನಿರ್ದೇಶಕ ರಾಮ್ ಮಾತ್ರ ಇಲ್ಲಿ ಅದರ ಸಂಪೂರ್ಣ ಲಾಭ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೈಟೆಕ್ ತಂತ್ರಜ್ಞಾನವನ್ನು ಇಂದಿನ ಚಿತ್ರಗಳ ಬಳಸಿಕೊಳ್ಳುತ್ತಿರುವ ಶ್ರೇಷ್ಠ ಮಟ್ಟದಲ್ಲಿ ಇಲ್ಲಿ ಬಳಕೆ ಆಗಿರುವುದು ಕಂಡು ಬರುತ್ತಿಲ್ಲ. ಬಜೆಟ್ ಒಳಗೆ ಪೂರೈಸುವುದಕ್ಕೆ ಗಮನ ಹರಿಸಿದಂತೆ ಚಿತ್ರ ಭಾಸವಾಗುತ್ತದೆ.
ಆದರೆ ಒಂದು ದೃಷ್ಟಿಯಲ್ಲಿ ನೋಡಿದರೆ ಮಕ್ಕಳನ್ನು ರಂಜಿಸಲು ಇಷ್ಟು ಸಾಕು. ಇಲ್ಲಿ ಬೊಂಬಾಟ್ ಕಾರ್ ಇದೆ. ರೋಬೋಟ್ ಇದ್ದಾನೆ. ಎಲ್ಲವೂ ಮಕ್ಕಳನ್ನು ರಂಜಿಸಲು ಸಿದ್ಧವಾಗಿದೆ. ಆದರೆ ಚಿತ್ರದುದ್ದಕ್ಕೂ ಮಕ್ಕಳೊಂದಿಗೆ ಬರುವ ಪಾಲಕರಿಗೆ ನೀಡುವ ಸಂದೇಶವಾಗಲಿ, ತನ್ಮಯಗೊಳಿಸುವ ಅಂಶವಾಗಲಿ ಕಂಡು ಬರುವುದಿಲ್ಲ. ಕೇವಲ ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಪಕ್ಕಾ ಮನರಂಜನೆಗೆ ಮಾತ್ರ ಚಿತ್ರ ಸಿದ್ಧವಾದಂತಿದೆ.
ಬಾಲಕನ ಸಾಹಸ, ರೋಬೋಟ್ ಮಾಯೆ ಹಾಗೂ ದುಷ್ಟ ಶಕ್ತಿಗಳ ಆರ್ಭಟ ಈ ಚಿತ್ರದ ಹೈಲೈಟ್. ದೊಡ್ಡಣ್ಣ, ಶರಣ್ ಮುಂತಾದ ನಟರ ಬಳಗವೇ ಚಿತ್ರದಲ್ಲಿದ್ದು ಹಾಸ್ಯವನ್ನು ಅಲ್ಲಲ್ಲಿ ತುರುಕಲಾಗಿದೆ. ಇದರಿಂದ ಚಿತ್ರ ಬೋರು ಎನಿಸುವುದಿಲ್ಲ. ತಾಯಿಯ ಆತಂಕ, ತಂದೆಯ ದುಗುಡ, ದುಷ್ಟ ಶಕ್ತಿಯ ಆರ್ಭಟ ನರ್ತನ ಹಾಗೂ ಪುಟ್ಟ ಬಾಲಕನ ಸಾಹಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ದೇವ್ ಅವರ ಸಂಗೀತ ಪರವಾಗಿಲ್ಲ.
ನಿರ್ದೇಶಕ ರಾಮ್ ನಾರಾಯಣ್ ಬಗ್ಗೆ ಏನೂ ಹೇಳುವಂತಿಲ್ಲ. ಆನೆ, ಹುಲಿ ಹಾಗೂ ಕೋತಿ ಬಿಟ್ಟು ಅವರೂ ಹೈಟೆಕ್ ಮಂತ್ರ ಜಪಿಸಲು ಮುಂದಾಗಿದ್ದು, ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರೆ ಅನ್ನಬಹುದು. ರಜಾದ ಮಜಾಕ್ಕೆ ಒಂದು ಸಂಜೆಯ ಮಕ್ಕಳ ಮನರಂಜನೆಗೆ ಈ ಚಿತ್ರ ಸಾಕು.