ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ನಾಗತಿಯ ನೂರು ಜನ್ಮಕೂ: ಒಮ್ಮೆ ನೋಡಲಡ್ಡಿಯಿಲ್ಲ (Nooru Janmaku | Kannada Movie Review | Aindritha Rey | Santhosh | Nagathihalli Chandrashekhar)
ಸಿನಿಮಾ ವಿಮರ್ಶೆ
Bookmark and Share Feedback Print
 
PR
ಚಿತ್ರ- ನೂರು ಜನ್ಮಕೂ
ನಿರ್ದೇಶನ- ನಾಗತಿಹಳ್ಳಿ ಚಂದ್ರಶೇಖರ್
ತಾರಾಗಣ- ಸಂತೋಷ್, ಐಂದ್ರಿತಾ ರೇ, ಭವ್ಯ, ಶರಣ್

ಹೊಸ ನಟರನ್ನು ಇಟ್ಟುಕೊಂಡು ಎರಡುವರೆ ಗಂಟೆ ಕಾಲ ಹಿಡಿದಿಡಬಲ್ಲ ಸಿನಿಮಾ ನೀಡುವುದು ಈ ಕಾಲಘಟ್ಟದಲ್ಲಿ ಕಷ್ಟವೇ ಸರಿ. ಆ ಮಟ್ಟಿಗೆ ಇಲ್ಲಿ ನಾಗತಿಹಳ್ಳಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಲ್ಲ. ಜಾಗತೀಕರಣದ ಅವಕಾಶಗಳು, ಸಾಧ್ಯತೆಗಳು, ಆರ್ಥಿಕ ಹಿಂಜರಿತದಂತಹ ಸಂದರ್ಭಗಳನ್ನು ಸೃಷ್ಟಿಸಿ ಅಲ್ಲೊಂದು ಪ್ರೇಮ ಪರಿಣಯವನ್ನು ಹದವಾಗಿ ಬೆರೆಸಿದ್ದಾರೆ ನಾಗತಿ. ಹಾಗಾಗಿ ಇದೊಂದು ನಾಗತಿಯ ಎಂದಿನಂತಿರುವ ಪೂರ್ಣ ಕೌಟುಂಬಿಕ ಮನರಂಜನಾತ್ಮಕ ಚಿತ್ರ.

ವಿನ್ಯಾಸ್ (ಸಂತೋಷ್) ಒಬ್ಬ ಆರ್ಕಿಟೆಕ್ಟ್. ಜೊತೆಗೆ ಜಾಗತೀಕರಣದ ಹೊಡೆತದಿಂದ ಉದ್ಯೋಗ ಕಳೆದುಕೊಂಡ ನತದೃಷ್ಟ. ಇಂತಹ ಸಂದರ್ಭದಲ್ಲಿ ಆತ ತನ್ನದೇ ಸ್ವಂತ ಬ್ಯುಸಿನೆಸ್ ಆರಂಭಿಸುತ್ತಾನೆ. ಅಮ್ಮ ಹಾಗೂ ತಂಗಿಯ ಜೊತೆಗೆ ವಾಸವಾಗಿರುವ ವಿನ್ಯಾಸ್ ತನಗಾಗಿ ಮಹಿಳೆ ಕೆಲಸ ಮಾಡಬೇಕಿಲ್ಲ ಎಂಬ ದೃಷ್ಟಿಕೋನ ಹೊಂದಿರುವಾತ. ಆದರೆ ಆತನ ಜೀವನದಲ್ಲಿ ದೃಷ್ಟಿ (ಐಂದ್ರಿತಾ) ಎಂಬಾಕೆಯ ಆಗಮನವಾಗುತ್ತಲೇ ಆತನ ಈ ವಾದಕ್ಕೆ ವಿರಾಮ ಬೀಳುತ್ತದೆ. ಕಾರಣ ಆಕೆ ಆತನ ಬ್ಯುಸಿನೆಸ್ಸನ್ನು ಎತ್ತರಕ್ಕೇರಿಸುವಲ್ಲಿ ಪ್ರಮುಖ ರೂವಾರಿಯಾಗುತ್ತಾಳೆ. ಆದರೆ ದೃಷ್ಟಿ ಎಲ್ಲಿಯೂ ತನ್ನ ಬಗ್ಗೆ ವಿನ್ಯಾಸ್‌ಗೆ ಖಾಸಗಿಯಾಗಿ ಹಂಚಿಕೊಂಡಿರುವುದಿಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ಪಕ್ಕಾ ಪ್ರೊಫೆಷನಲ್ ಗುಣ ಆಕೆಯದು.
MOKSHA


ಆಕೆಯ ಜೊತೆಗಿನ ಮೂರು ವರ್ಷದ ಉದ್ಯೋಗ ಒಪ್ಪಂದ ಮುಗಿಯುವ ಹೊತ್ತಿಗೆ ವಿನ್ಯಾಸ್ ಆಕೆಯ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ಅದೇ ಸಂದರ್ಭ ಆಕೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗುತ್ತಿದ್ದಾಳೆ ಎಂಬುದು ತಿಳಿದು ಆಘಾತಕ್ಕೊಳಗಾಗುತ್ತಾನೆ. ಆಕೆಯ ನೆನಪಲ್ಲಿ ಈತನ ಬ್ಯುಸಿನೆಸ್ ನಷ್ಟದತ್ತ ಸಾಗುತ್ತದೆ. ಆದರೆ ಆಕೆಯನ್ನು ಮರೆತು ಬಾಳಬೇಕೆಂಬ ಪ್ರಯತ್ನ ಮಾಡುತ್ತಾನೆ. ಆಮೇಲೇನಾಗುತ್ತದೆ ಎಂಬುದಕ್ಕೆ ಚಿತ್ರ ನೋಡಬೇಕು. ಕ್ಲೈಮ್ಯಾಕ್ಸ್ ಸರಳವಾದರೂ, ಪ್ರೇಕ್ಷಕರನ್ನು ಒಪ್ಪಿಸುವಂತಿದೆ.

ವಿನ್ಯಾಸ, ದೃಷ್ಟಿ, ಜೀವನ ಹೀಗೆ ಪಾತ್ರಗಳ ಹೆಸರುಗಳನ್ನೇ ಉಪಮೆಯನ್ನಾಗಿಸಿ ನಿರ್ದೇಶಕರು ಆ ಮೂಲಕ ಚಿತ್ರವನ್ನು ಕಟ್ಟಿದರೂ, ಆ ಸಮಸ್ಯೆಯ ಆಳಕ್ಕಿಳಿಯುವಂತೆ ಕಂಡುಬರುವುದಿಲ್ಲ. ಹಾಗಾಗಿ ಚಿತ್ರ ಸಾಮಾಜಿಕ ಸಮಸ್ಯೆಯನ್ನು ಮೇಳೈಸುವ ಗೊಡವೆಗೆ ಹೊಗದೆ, ಕೇವಲ ಪ್ರೇಮಕಥಾನಕವನ್ನೇ ಮೇಳೈಸುವಂತೆ ತೋರಿದರೆ ಅದು ತಪ್ಪಲ್ಲ.

ಇನ್ನು ಅಭಿನಯದ ಮಟ್ಟಿಗೆ ಹೇಳುವುದಾದರೆ ಸಂತೋಷ್ ಶ್ರದ್ಧೆಯಿಂದ ನಟಿಸಿದರೂ, ಇನ್ನೂ ಸಾಕಷ್ಟು ಪಳಗಬೇಕು. ಹಾಗೆ ನೋಡಿದರೆ, ಐಂದ್ರಿತಾ ಸಾಕಷ್ಟು ಸುಧಾರಿಸಿದ್ದಾರೆ. ಇಲ್ಲೂ ಆಕೆ ಮುದ್ದಾದ ಗೊಂಬೆಯಂತೆ ಜಾದೂ ಮಾಡುತ್ತಾರೆ. ಬ್ಯಾಂಕ್ ಜನಾರ್ಧನ್ ನಗಿಸುವ ಪ್ರಯತ್ನ ಯಾಕೋ ಸಪ್ಪೆ. ಅಲ್ಲಲ್ಲಿ ಕೊಂಡಿಯಂತೆ ಬಂದುಹೋಗುವ ಶರಣ್ ಮಾತ್ರ ನಿಜಕ್ಕೂ ಅಚ್ಚುಕಟ್ಟಾಗಿ ನಟಿಸಿ ನಗಿಸುತ್ತಾರೆ. ಅಮ್ಮನಾಗಿ ಬಂದಿರುವ ಭವ್ಯ ಒಕೆ.

ಮನೋಮೂರ್ತಿ ಸಂಗೀತ ನಿರ್ದೇಶನದ ಹಾಡುಗಳು ಕೇಳಬಹುದು. ನಾಗತಿ ಅವರ ಹಳೆಯ ಅಮೆರಿಕಾ ಅಮೆರಿಕಾ ಚಿತ್ರ ನೂರು ಜನ್ಮಕೂ.. ಹಾಡೇ ಇಲ್ಲಿ ಟೈಟಲ್ ಸಾಂಗ್ ಆಗಿ ಮಿಂಚಿದೆ. ಸಂತೋಷ್ ರೈ ಪಾತಾಜೆ ಅವರ ಕ್ಯಾಮರಾ ಕೈಚಳಕ ಅದ್ಭುತ. ಚಿತ್ರವನ್ನು ಮತ್ತಷ್ಟು ಸೊಗಸಾಗಿಸುವ ಕೆಲಸವನ್ನು ರೈ ಮಾಡಿದ್ದಾರೆ. ಒಟ್ಟಾರೆ ಕುಟುಂಬ ಸಮೇತರಾಗಿ ಒಂದು ಸಂಜೆ ಕೂತು ನೋಡಬಲ್ಲ ಚಿತ್ರ ಇದಾಗಿದೆ ಎನ್ನಲಡ್ಡಿಯಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೂರು ಜನ್ಮಕೂ, ಐಂದ್ರಿತಾ ರೇ, ಸಂತೋಷ್, ನಾಗತಿಹಳ್ಳಿ ಚಂದ್ರಶೇಖರ್