ಚಿತ್ರ- ಹೂ ತಾರಾಗಣ- ರವಿಚಂದ್ರನ್, ನಮಿತಾ, ಮೀರಾ ಜಾಸ್ಮಿನ್ ನಿರ್ದೇಶನ- ರವಿಚಂದ್ರನ್ ನಿರ್ಮಾಣ- ದಿನೇಶ್ ಗಾಂಧಿ
ಹಾಡು, ಕುಣಿತ, ಆಕರ್ಷಣೆ ಹಾಗೂ ನಟಿಮಣಿಯ ದೇಹ ಪ್ರದರ್ಶನ. ಇದರ ಒಟ್ಟು ಫಲಿತಾಂಶವೇ ಹೂ. ಹೌದು. ಕೊನೆಗೂ ರವಿಚಂದ್ರನ್ ಮಾದರಿಯ ಚಿತ್ರ ಬಿಡುಗಡೆ ಆಗಿದೆ. ಮಲ್ಲ ನಂತರ ಬಿಡುಗಡೆಯಾದ ಒಂದು ಪಡ್ಡೆ ಹುಡುಗರ ಪಾಲಿನ ರಸದೌತಣದ ಚಿತ್ರ ಇದಾಗಿದೆ. ಕ್ರೇಜಿ ಸ್ಟಾರ್ 50 ಆದರೂ ತಮ್ಮ ಕ್ರೇಜ್ ಉಳಿಸಿಕೊಂಡಿದ್ದಾರೆ ಅನ್ನುವುದನ್ನು ಇದು ತೋರಿಸುತ್ತದೆ.
ರವಿಚಂದ್ರನ್ ನಮಿತಾರನ್ನು ಇಡಿ ಇಡಿಯಾಗಿ ನುಂಗಿ ಹಾಕುವಂತೆ ಅಭಿನಯಿಸಿದ್ದಾರೆ. ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡುವ ಚಿತ್ರ ಅಂತ ಅನ್ನಿಸಿದರೂ, ಮಕ್ಕಳಿದ್ದರೆ ಮುಜುಗರ ಖಂಡಿತ. ಚಿತ್ರದ ತುಂಬ ರವಿಚಂದ್ರನ್ ಅವರ ಎಂದಿನ ಶೈಲಿ ಎದ್ದು ಕಾಣುತ್ತದೆ. ಹೂ, ಬಲೂನುಗಳ ರಾಶಿ, ಮಾದಕ ಮೈಮಾಟ, ಗೆಳೆತನ, ಪ್ರೀತಿಯ ಅಮಲು ಎಲ್ಲವೂ ಚಿತ್ರದಲ್ಲಿದೆ.
ಬಹು ದಿನದ ನಂತರ ವಿ. ಅಲ್ಲಲ್ಲ ವೀರಸ್ವಾಮಿ ರವಿಚಂದ್ರನ್ ಚಿತ್ರ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಇವರದ್ದೇ ಆಗಿದ್ದು, ಎಲ್ಲ ಕಡೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರೀತಿಯನ್ನು ಇವರು ಹೂವಿಗೆ ಹೋಲಿಸಿದ್ದು, ಚಿತ್ರದ ಪೂರ್ಣ ಭಾಗ ಹೂವಿನ ವರ್ಣನೆಗೆ ಮೀಸಲು. ಅಷ್ಟೇ ಅಲ್ಲ ಹೂವಿನ ಪ್ರದರ್ಶನಕ್ಕೂ ಮೀಸಲು. ಚಿತ್ರದ ಸಬ್ ಟೈಟಲ್ ಹೇಳುವಂತೆ, ಹೂ ಎಲ್ಲಕ್ಕೂ ಬೇಕು.
PR
ಚಿತ್ರಕ್ಕೆ ಛಾಯಾಗ್ರಹಣ ಜಿ.ಎಸ್.ವಿ. ಸೀತಾರಾಂ ಅವರು ನೀಡಿದ್ದಾರೆ. ಇವರ ಕ್ಯಾಮರಾ ಕಸರತ್ತನ್ನು ಮೆಚ್ಚಲೇ ಬೇಕು. ರವಿಮಾಮಗೆ ಬೇಕಾದ ಹಾಗೆ ಕ್ಯಾಮರಾ ತಿರುಗಿಸುವ ಕೈಚಳಕ ಇವರಿಗಿದೆ. ವಿ. ಹರಿಕೃಷ್ಣರ ಸಂಗೀತದ ಬಗ್ಗೆ ಎರಡು ಮಾತಿಲ್ಲ. ಉತ್ತಮವಾದ ಹಾಡಿಗೆ, ವಿಶೇಷವಾಗಿರದಿದ್ದರೂ, ಕೇಳಬಹುದಾದ ಸಂಗೀತ ನೀಡಿದ್ದಾರೆ.
ಚಿತ್ರದ ಒಬ್ಬ ನಟಿಯಾದ ಮೀರಾ ಜಾಸ್ಮಿನ್ ತನ್ನ ಅಭಿನಯದ ಮೂಲಕ ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಮಿತಾ ಅಭಿನಯದ ಬಗ್ಗೆ ಮಾತನಾಡುವುದಕ್ಕಿಂತ ಮೈಮಾಟ ಬಗ್ಗೆ ವಿಮರ್ಶೆ ಮಾಡೋದೇ ಸೂಕ್ತ. ಯಾಕೆಂದರೆ, ಅವರು ಅಭಿನಯಕ್ಕಿಂತ ಮೈ ಪ್ರದರ್ಶನವನ್ನೇ ಹೆಚ್ಚು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಹಾಸ್ಯದ ವಿಷಯಕ್ಕೆ ಬಂದಾಗ ರಂಗಾಯಣ ರಘು, ಸಾದು ಕೋಕಿಲಾ, ಬುಲೆಟ್ ಪ್ರಕಾಶ್, ಶರಣ್ ಎಲ್ಲರೂ ಚೆನ್ನಾಗಿ ನಗಿಸುತ್ತಾರೆ. ರಂಗಾಯಣ ರಘು ಅಂತೂ ಒಂದು ಭಿನ್ನ ಪಾತ್ರದಲ್ಲಿ ಮೆಚ್ಚುಗೆ ಆಗುತ್ತಾರೆ.