ಚಿತ್ರಕ್ಕೆ ಇರಬೇಕಾದ ಎಲ್ಲಾ ಅಂಶವೂ ಇರುವ 'ತಮಸ್ಸು' ನಿಜಕ್ಕೂ ಗೆದ್ದಿದೆ. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಚಿತ್ರಕ್ಕೆ ಎಲ್ಲಾ ಮಸಾಲೆಯೂ ಹದವಾಗಿ ಬಿದ್ದಿದೆ. ಶಿವಣ್ಣನ ಅಭಿನಯ ಚಿತ್ರದ ಹೈಲೈಟ್. ಅಣ್ಣನಾಗಿ, ಪ್ರೇಮಿಯಾಗಿ, ಪೊಲೀಸ್ ಅಧಿಕಾರಿಯಾಗಿ, ಒಬ್ಬ ಸಹೃದಯಿಯಾಗಿ ಇವರು ಮೆಚ್ಚುವ ಅಭಿನಯ ನೀಡಿದ್ದಾರೆ.
ಹಾಡುಗಳು ಕೊಂಚ ಸುಧಾರಿಸಬಹುದಿತ್ತು, ಆದರೂ ಇದ್ದಷ್ಟಕ್ಕೆ ಪರವಾಗಿಲ್ಲ. ಕಥೆ ವೇಗವಾಗಿ ಸಾಗಿದ್ದರಿಂದ ಕಾಮಿಡಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿಲ್ಲ. ಸಿಕ್ಕಿದ್ದರೆ ಚಿತ್ರ ಸೋಲುತ್ತಿತ್ತೇನೋ.
ನಿರ್ದೇಶಕರ ಕೈ ಪತ್ರಕರ್ತರ ಲೇಖನಿಯಂತೆ ಆಗಿದೆ. ಪತ್ರಕರ್ತ ಮನಸ್ಸು ಕೊಟ್ಟು ಬರೆಯುವ ಉತ್ತಮ ಸ್ಟೋರಿಯಂತೆ ಟೈಟ್ ಆಗಿ ಮೂಡಿ ಬಂದಿದೆ. ಜಾಳುತನಕ್ಕೆ ಇಲ್ಲಿ ಅವಕಾಶವೇ ಇಲ್ಲ. ಕ್ಲಾಸ್ ಚಿತ್ರಕ್ಕೆ ಇರಬೇಕಾದ ಎಲ್ಲಾ ಅಂಶ ಇದರಲ್ಲಿದೆ. ವಿವಾದಕ್ಕೆ ಈಡಾಗಿದ್ದರೂ, ಒಳ್ಳೆಯ ಸಂದೇಶ ನೀಡಬಲ್ಲಂತ ಒಳ್ಳೆಯ ಚಿತ್ರದ ಸಾಲಲ್ಲಿ ಇದು ನಿಲ್ಲುತ್ತದೆ.
ಈ ಒಂದು ಚಿತ್ರದ ಮೂಲಕ ಶಿವರಾಜ್ ಕುಮಾರ್ ತಮ್ಮ ನಟನೆಯ ಸಾಮರ್ಥ್ಯವನ್ನು ಪ್ರಚುರಪಡಿಸಿದ್ದಾರೆ. ಹಿಂಸೆಯ ನಡುವೆ ಅರಳುವ ಪ್ರೀತಿಯನ್ನು ಪೋಷಿಸುವ ಪರಿ ಅನನ್ಯ. ಚಿತ್ರದ ಮೊದಲನೇ ಅರ್ಧ ಪೂರ್ಣ ಕೋಮು ಗಲಭೆಗೆ ಮೀಸಲು. ದ್ವಿತೀಯಾರ್ಧ ಭಾವನಾತ್ಮಕ ಸಂಘರ್ಷಗಳ ತಾಕಲಾಟಕ್ಕೆ ಈಡಾದಂತೆ ಗೋಚರಿಸುತ್ತದೆ.
ಬೆಂಗಳೂರಿನಲ್ಲಿ ನಡೆಯುವ ಕೋಮು ಗಲಭೆಯಲ್ಲಿ ತ್ರಿಶೂಲ ಹಾಗೂ ಖಡ್ಗಕ್ಕೆ ಜನ ಬಲಿಯಾಗುವುದರ ಮೂಲಕ ಚಿತ್ರ ಆರಂಭವಾಗುತ್ತದೆ. ಜೈ ಶ್ರೀರಾಂ ಹಾಗೂ ಅಲ್ಲಾಹು ಅಕ್ಬರ್ ಘೋಷಗಳು ಮೊಳಗುತ್ತಲೇ ಚಿತ್ರದ ಮೊದಲ ಪ್ಲೇಟ್ ಮುಗಿಯುತ್ತದೆ.
ಈ ಗಲಭೆ ನಿಯಂತ್ರಿಸಲು ದಕ್ಷ ಪೊಲೀಸ್ ಅಧಿಕಾರಿ ಶಂಕರ್ (ಶಿವಣ್ಣ) ತಂಡದೊಂದಿಗೆ ಬರುತ್ತಾರೆ. ಗಲಾಟೆಯಲ್ಲಿ ತಲೆಗೆ ಹೊಡೆತ ಬಿದ್ದು, ಮುಸ್ಲಿಂ ವ್ಯಕ್ತಿಯೊಬ್ಬರ ಮನೆ ಸೇರಿಕೊಳ್ಳುತ್ತಾರೆ. ಅಲ್ಲಿ ಆಶ್ರಯ ಪಡೆಯುತ್ತಾರೆ.
ಇಲ್ಲೊಬ್ಬ ತಂಗಿಯೂ ಸಿಗುತ್ತಾಳೆ. ಆಕೆ ಅಮ್ರೀನ್ ಸಭಾ. ಇವಳ ತಂದೆಯಲ್ಲಿ ಆತ ತಮ್ಮ ತಂದೆಯನ್ನು ಕಾಣುತ್ತಾನೆ. ಅಲ್ಲಿಂದ ಚಿತ್ರದ ಫ್ಲ್ಯಾಶ್‌ಬ್ಯಾಕ್ ಆರಂಭ. ಅಲ್ಲಿ ಶಿವಣ್ಣನ ಮಡದಿ ಬರುತ್ತಾಳೆ. ಅವಳೊಂದಿಗೆ ಕಳೆದ ಕ್ಷಣಗಳು ಬಿಚ್ಚಿಕೊಳ್ಳುತ್ತವೆ.
ಕಥೆ ಮುಂದುವರಿದು ಶಂಕರ್ ಯಾವುದೋ ಸಂದರ್ಭದಲ್ಲಿ ಅಮ್ರೀನ್‌ಳ ಅಣ್ಣ ಇಮ್ರಾನ್‌ನನ್ನು ಉಗ್ರಗಾಮಿ ಎಂದು ಭಾವಿಸಿ ಸಾಯಿಸುತ್ತಾನೆ. ನಂತರ ತಾನು ಸಾಯಿಸಿದ್ದು ಅಮಾಯಕನನ್ನು ಎನ್ನುವುದು ತಿಳಿಯುತ್ತದೆ. ಪಶ್ಚಾತ್ತಾಪದಿಂದ ಬೆಂದು ಹೋಗುತ್ತಾನೆ.
ಈ ವಿಷಯ ಅಮ್ರೀನ್ ಹಾಗೂ ಆಕೆಯ ತಂದೆಗೆ ತಿಳಿದಾಗ ಶಂಕರ್‌ನನ್ನು ದೂರ ಮಾಡುತ್ತಾರೆ. ಮುಂದೇನಾಗುತ್ತದೆ ಎನ್ನುವುದನ್ನು ತೆರೆ ಮೇಲೆ ನೋಡಬೇಕು.
ಪದ್ಮಪ್ರಿಯಾ ಶಿವಣ್ಣನ ಮಡದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿನಯ ಗಮನ ಸೆಳೆಯುತ್ತದೆ. ಇಮ್ರಾನ್ ಪತ್ರದಲ್ಲಿ ಯಶ್ ಮಿಂಚಿದ್ದಾರೆ. ಹರ್ಷಿಕಾ ಪೂಣಚ್ಚ ತಂಗಿಯಾಗಿ ಉತ್ತಮ ಅಭಿನಯ ನೀಡಿದ್ದಾರೆ.
ಸಂಗೀತ, ನಿರ್ದೇಶನ, ಛಾಯಾಗ್ರಹಣ ಉತ್ತಮವಾಗಿದೆ. ಕೆಲ ಪಾತ್ರಗಳು ಹಾಗೆ ಬಂದು ಹೀಗೆ ಹೋದರೂ ಕೆಲ ಕಾಲ ನೆನಪಿನಲ್ಲಿ ಉಳಿಯುತ್ತವೆ.