ಕನ್ನಡಕ್ಕೆ ರೌಡಿಸಂ ಆಧಾರಿತ ಚಿತ್ರಗಳ ಕೊರತೆ ಎಂದೂ ಕಾಡಿಲ್ಲ. ಇಂಥದ್ದೊಂದು ಚಿತ್ರ ಆಗಾಗ ಬಂದು ಹೋಗುತ್ತಲೇ ಇರುತ್ತವೆ. ಅವುಗಳ ಪಟ್ಟಿಗೆ ಹೊಸ ಸೇರ್ಪಡೆ ಪುಂಡ.
ಬೈಕ್ ಪ್ರೇಮ ಹಾಗೂ ರೌಡಿಸಂ ರೌದ್ರನರ್ತನವೇ ಚಿತ್ರದ ಕಥಾವಸ್ತು. ಮೂಲ ಜೀವಾಳ ಅಂದರೂ ತಪ್ಪಿಲ್ಲ. ನಿರ್ದೇಶಕ ಎಚ್. ವಾಸು ಹಳೆಯ ಮದ್ಯವನ್ನೇ ಹೊಸ ಬಾಟಲಿಯಲ್ಲಿ ತುಂಬಿ ಕೊಟ್ಟಿದ್ದಾರೆ. ಹಾಗಾಗಿ, ಕೂತರೂ, ಎದ್ದು ಹೋದರೂ ನಷ್ಟವಾಗದ ಚಿತ್ರ ಇದು.
ಹೇಳಿ ಕೇಳಿ ಇದು ತಮಿಳಿನ ಪೊಳ್ಳಾದವನ್ ಚಿತ್ರದ ರಿಮೇಕ್. ಮೂಲ ಚಿತ್ರದಲ್ಲಿ ನಮ್ಮ ಕನ್ನಡದ ರಮ್ಯ ನಟಿಸಿದ್ದರು. ಈಗ ಆ ಪಾತ್ರದಲ್ಲಿ ಕನ್ನಡದಲ್ಲಿ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿಗಳ ಪುತ್ರಿ ಮೇಘನಾ ರಾಜ್ ನಟಿಸಿದ್ದಾರೆ. ರಿಮೇಕ್ ಆದರೂ, ಕೊಂಚ ಮಟ್ಟಿಗೆ ಸ್ವಂತಿಕೆ ಉಳಿಸಿಕೊಂಡಿದ್ದಾರೆ ನಿರ್ದೇಶಕ ವಾಸು. ಲೂಸ್ ಮಾದ ಖ್ಯಾತಿಯ ಯೋಗೀಶ್ ಈ ಬಾರಿ ಇನ್ನೂ ಹೆಚ್ಚಿನ ಲವಲವಿಕೆಯಿಂದ ನಟಿಸಿದ್ದಾರೆ. ಕನ್ನಡದಲ್ಲಿ ಮೊದಲ ಚಿತ್ರವಾದ ಮೇಘನಾ ರಾಜ್ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಇನ್ನುಳಿದಂತೆ, ಅವಿನಾಶ್, ಶರತ್ ಲೋಹಿತಾಶ್ವ, ನಾಗಶೇಖರ್ ಮೊದಲಾದ ನಟರಿಂದ ಚಿತ್ರಕ್ಕೆ ಒಂದು ವಿಶೇಷ ಕಳೆ ಬಂದಿದೆ.
ಪೋಷಕರನ್ನು ಕಾಡಿ ಬೇಡಿ ಬೈಕ್ ಕೊಳ್ಳುವ ನಾಯಕನ ಸುತ್ತ ಗಿರಕಿ ಹೊಡೆಯುವ ಕಥೆಯಿದು. ಬೈಕ್ ಕಳ್ಳತನದೊಂದಿಗೆ ಆರಂಭವಾಗುವ ರೌಡಿಸಂ ಚಿತ್ರವನ್ನೇ ಆವರಿಸಿಕೊಳ್ಳುತ್ತದೆ. ನಡುವೆ ನಾಯಕನ ಮರಸುತ್ತುವ ಪ್ರೇಮ ಇದ್ದೇ ಇದೆ.
ಚಿತ್ರ ಚೆನ್ನಾಗಿದೆಯಾ ಅಂತ ಕೇಳುವುದು ಸರಿಯಲ್ಲ. ನಾಯಕ ಯೋಗೀಶ್ ಸಾಕಷ್ಟು ಬೆವರು ಹರಿಸಿದ್ದಾರೆ. ನಟನೆಯಲ್ಲೂ ಒಂದಷ್ಟು ಸುಧಾರಣೆ, ಬದಲಾವಣೆಗಳಾಗಿವೆ. ಆದರೆ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಅವರಿಗೆ ಇದು ಬ್ರೇಕ್ ನೀಡುವಂಥಾ ಚಿತ್ರವಾಗುತ್ತದೆ ಎನ್ನಲು ಖಂಡಿತಾ ಸಾಧ್ಯವಿಲ್ಲ. ಇನ್ನು ಶೇಖರ್ ಚಂದ್ರ ಛಾಯಾಗ್ರಹಣದಲ್ಲಿ ಒಂದಷ್ಟು ಹೊಸತನ ಇದೆ. ಪ್ರಶಾಂಕ್ ಕುಮಾರ್ ಅವರ ಸಂಗೀತವೂ ಕೇಳಬಹುದು.