ಜಮಾನಾ ಏಕೋ ಜಮಾನಾದ ಹಿಂದೇ ಬರಬೇಕಿತ್ತು. ಈಗ ಬಂದು ತಪ್ಪು ಮಾಡಿದೆ ಅನ್ನಿಸುತ್ತದೆ. ಮಚ್ಚು ಲಾಂಗುಗಳ ವೈಭವಿಸುತ್ತಿದ್ದ ಕಾಲದಲ್ಲೇ ಬಂದಿದ್ರೆ ಇದೊಂದು ಅತ್ಯುತ್ತಮ ಚಿತ್ರ ಅನ್ನಬಹುದಿತ್ತು. ಆದರೆ ಓಂ, ಜೋಗಿ ಬಂದ ಸಂದರ್ಭದಲ್ಲೇ ಬಂದಿದ್ದರೆ, ಈ ಚಿತ್ರವೂ ಗೆಲ್ಲುತ್ತಿತ್ತು. ಆದರೆ ಈಚೆಗೆ ಬಂದಿರುವುದರಿಂದ ಗೆಲ್ಲುವುದು ಕಷ್ಟ.
ಚಿತ್ರ ಸಾಹಸ ಪ್ರಿಯರಿಗೆ ಪಕ್ಕಾ ಮನರಂಜನೆ ನೀಡುತ್ತದೆ. ಹಲವು ವರ್ಷಗಳ ಗ್ಯಾಪ್‌ನ ನಂತರ ಬರುತ್ತಿರುವ ಲಕ್ಕಿ ಶಂಕರ್ ಎಂಬ ಹುಡುಗನ ಸಾಹಸದ ಕಥೆ ಇದು. ಏಳು ವರ್ಷಗಳ ಹಿಂದೆ ಗಾಂಧಿನಗರ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಈ ಹುಡುಗನ ಇನ್ನೊಂದು ಸಾಹಸ ಮೆಚ್ಚುಗೆ ಆಗುತ್ತದೆಯದರೂ ಅದೂ ಒಂದು ವರ್ಗದ ಜನರನ್ನು ಮಾತ್ರ ಎನ್ನುವುದು ವಿಪರ್ಯಾಸ.
ರೌಡಿಸಂ ಮತ್ತು ಸೆಂಟಿಮೆಂಟ್ ಎರಡನ್ನೂ ಬೆಸೆದು ಚಿತ್ರಕಥೆ ಮಾಡಿದ್ದಾರೆ. ನಿತೇಶ್ ಎನ್ನುವ ಹೊಸ ಮುಖಕ್ಕೆ ಹೀರೋ ಡ್ರೆಸ್ ತೊಡಿಸಿದ್ದಾರೆ. ಇಲ್ಲೇ ಅವರು ಎಡವಿದ್ದಾರೆ ಎನ್ನಬಹುದು. ಆಯ್ಕೆಯಲ್ಲಿ ಪ್ರಮಾದ ಆಗಿ ಬಿಟ್ಟಿದೆ. ಅಭಿನಯವನ್ನೇ ಕಲಿಯದ ಎಳೆ ಕೂಸಿನಂತೆ ಆಡುತ್ತಾರೆ ನಿತೇಶ್. ಬಾಲಿವುಡ್ಡಿನ ಜಾಕಿಶ್ರಾಫ್‌ಗೆ ಮುಖ್ಯ ಪಾತ್ರ ಕೊಟ್ಟಿದ್ದಾರೆ. ಆದರೆ ಅದೂ ವರ್ಕೌಟ್ ಆಗಿಲ್ಲ. ಆಕರ್ಷ ಎನ್ನುವ ಹುಡುಗಿ ನಾಯಕಿ. ಈಕೆಗೆ ಒಂದಿಷ್ಟು ಮೈಮಾಟಕ್ಕೆ ಕೊನೆಯದಾಗಿ ಮೂರು ಅಂಕ ನೀಡಬಹುದು. ಅದನ್ನೇ ಚಿತ್ರ ಪೂರ್ತಿ ನೋಡಲು ಬೋರ್ ಆಗುತ್ತೆ.
ನಿರ್ಮಾಪಕರಾದ ಚೇತನ್‌ಗೆ ಈ ಚಿತ್ರ ಚೊಂಬು ಹಿಡಿಸುವ ಲಕ್ಷಣ ತೋರುತ್ತಿದೆ. ಚಿತ್ರ ಮಂದಿರಕ್ಕೆ ಜನರು ಬರುತ್ತಿಲ್ಲ ಎನ್ನುವ ಆರೋಪವನ್ನು ನಾವು ಸುಳ್ಳು ಮಾಡುತ್ತೇವೆ ಎಂದು ಹೇಳಿದ್ದ ಲಕ್ಕಿ ಏನೋ ಕಳೆದುಕೊಳ್ಳುವ ಸಾಧ್ಯತೆಯನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಏನೇ ಆದರೂ ಕೊನೆಯವರೆಗೂ ನೋಡಿಯೇ ಬರುತ್ತೇನೆ ಎನ್ನುವ ಧೈರ್ಯವಿದ್ದರೆ ಚಿತ್ರಕ್ಕೆ ಹೋಗಬಹುದು.