ಅದ್ಯಾವ ಮುಹೂರ್ತದಲ್ಲಿ ಥ್ರಿಲ್ಲರ್ ಮಂಜು ಜಯಹೇ! ಅಂದರೋ, ಜನ ಹೋದರೆ ಮಾತ್ರ ಚಿತ್ರ ಮಂದಿರವನ್ನೇ ಕೆಡವಿ ಬರುತ್ತಾರೆ. ಅಷ್ಟೊಂದು ಸಿಟ್ಟು ಹುಟ್ಟಿಸುತ್ತದೆ ಈ ಚಿತ್ರ. ಇದೇನು ದೇಶಭಕ್ತಿ ಚಿತ್ರವಾ ಅಂತ ಅಂದುಕೊಳ್ಳಬೇಡಿ. ದಯವಿಟ್ಟು ಈ ಚಿತ್ರಕ್ಕೆ ಹೋದವರಿಗೆ ಸಿಟ್ಟು ಬರುವುದು ಸ್ವಂತ ಅವರ ಮೇಲೆಯೇ! ಇಂಥದ್ದೊಂದು ಚಿತ್ರಕ್ಕೆ ಬಂದೆನಲ್ಲಾ ಅಂತ.
ಖಾರ ಇಷ್ಟವೆಂದು ಮೆಣಸನ್ನೇ ಅರೆದು ತಿಂದರೆ ಹೇಗಾದೀತು ಹೇಳಿ. ಅದೇ ಪರಿಸ್ಥಿತಿ ಈ ಚಿತ್ರದ್ದು. ಉಪ್ಪು, ಉಳಿ, ಸಿಹಿ, ಕಹಿ ಯಾವುದೂ ಇಲ್ಲದೆ, ಕೇವಲ ಮೆಣಸನ್ನೇ ಅರೆದು ಅಡುಗೆ ಮಾಡಿದಂತಿದೆ ಈ ಚಿತ್ರ. ಚಿತ್ರದಲ್ಲಿ ಹೊಗಳಲು ಏನಂದರೆ ಏನೂ ಇಲ್ಲ. ತೆಗಳಲು ಸಾಕಷ್ಟು ಅಂಶಗಳಿವೆ.
ಚಿತ್ರಕ್ಕೆ ಸ್ಟಂಟೇ ಜೀವ, ಸಸ್ಪೆನ್ಸ್ ಅನ್ನಲಾಗುತ್ತಿದ್ದರೂ, ಅದರ ಅರ್ಥ ಏನೆಂದು ಅರಿವಾಗುವುದಿಲ್ಲ. ಸ್ಟಂಟ್ ಬಿಟ್ಟರೆ ಬೇರೇನೂ ಇಲ್ಲ. ಸಾಹಸದ ಹೆಸರಿನಲ್ಲಿ ನಟಿ ಮಣಿ ಆಯೇಷಾರ ಹಾರಾಟ, ಚೀರಾಟ ಜತೆಗೆ ಪೊಗದಸ್ತಾದ ಮೈಮಾಟ ತೋರಲಾಗಿದೆ. ದುಡ್ಡು ಹೆಚ್ಚಾಗಿ ಚಿತ್ರ ಮಾಡಿದಂತಿದೆ ಇದು. ನಾಯಕಿಗೆ ಸಾಹಸ ಬಿಟ್ಟರೆ ಬೇರೇನೂ ಮಾಡಲು ಬರೋದಿಲ್ಲ. ನಟನೆಯಂತೂ ಗೊತ್ತಿದ್ದ ಹಾಗಿಲ್ಲ.
ಕೇವಲ ಚಿತ್ರದ ತುಂಬಾ ನಾಯಕಿಯ ಹೊಡೆದಾಟದ ಸನ್ನಿವೇಶ ನೋಡಿಕೊಂಡು ಸಾಗಲು ಸಾಧ್ಯವೇ ಇಲ್ಲ! ಕೊಂಚವಾದರೂ ಕಥೆ ಇದ್ದರೆ ಚೆನ್ನಾಗಿತ್ತು. ಅಂದಂತೂ ಚಿತ್ರದಲ್ಲಿಲ್ಲ. ಈ ನಡುವೆ ಥ್ರಿಲ್ಲರ್ ಸಾಹಸವಂತೂ ಅವರ್ಣನೀಯ. ಸಾಕಪ್ಪಾ ಸಾಕು ಅಂತನಿಸದಿದ್ದರೆ ಹೇಳಿ.