ಸಕುಟುಂಬ ಸಪರಿವಾರ ಸಮೇತರಾಗಿ ತೆರಳಿ ಹೊಟ್ಟೆ ತುಂಬಾ ನಕ್ಕು ಬರಲು ಇದು ಸಕಾಲ. ನಿಜಕ್ಕೂ ದಿನೇಶ್ ಬಾಬು ಹಲವು ಸೋಲುಗಳ ನಂತರ ಈ ಚಿತ್ರದ ಮೂಲಕ ಯಶಸ್ಸಿನತ್ತ ಹೆಜ್ಜೆಯಿಡಲು ಸಜ್ಜಾಗಿ ಬಂದಿದ್ದಾರೆ. ಈಗಾಗಲೇ ಅವರಿಗೆ ಇರುವ ಅಭಿಮಾನಿಗಳನ್ನು ಮೆಚ್ಚಿಸುವ ಜತೆ ಹೊಸ ಅಭಿಮಾನಿಗಳನ್ನೂ ಹುಟ್ಟುಹಾಕಿಸಿಕೊಂಡಿದ್ದಾರೆ ಈ ಚಿತ್ರದ ಮೂಲಕ.
ನಿಜಕ್ಕೂ ಒಂದು ಗುಣಮಟ್ಟದ ಚಿತ್ರ ಕನ್ನಡದಲ್ಲಿ ಬಂದಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಜನ ಕೊಟ್ಟ ಹಣಕ್ಕೆ, ಇಟ್ಟ ವಿಶ್ವಾಸಕ್ಕೆ ನಿರ್ದೇಶಕರು ಮೋಸ ಮಾಡಿಲ್ಲ. ಅದೇ ಲಾಂಗು, ಮಚ್ಚು, ಫೈಟು ನೋಡಿ ಸುಸ್ತಾದ ಪ್ರೇಕ್ಷಕ ನಕ್ಕು ಹಗುರಾಗಲು ಇದೀಗ ವಾತಾವರಣ ಸೃಷ್ಟಿಯಾಗಿದೆ.
ಚಿತ್ರದ ಸನ್ನಿವೇಶ ಕಥೆ ಎಲ್ಲಾ ಒಂದು ಮನೆಯ ಸುತ್ತವೇ ಸುತ್ತುತ್ತದೆ. ಕ್ಯಾಮರಾ ಸಹ ಅದೇ ಮನೆಯ ಒಳಗೆ ಒಮ್ಮೆ ಹೋದರೆ, ಹೊರಗೆ ಒಮ್ಮೆ ಬರುತ್ತದೆ. ಒಟ್ಟಾರೆ, ಕ್ಯಾಮರಾ ಮನೆಯ ಕಾಂಪೊಂಡ್ ಗೋಡೆ ದಾಟುವುದಿಲ್ಲ. ಚಿತ್ರದಲ್ಲಿ ವಿಶೇಷವಾದುದೇನೂ ಇಲ್ಲದಿದ್ದರೂ, ಸಿಂಪಲ್ ಕಥಾ ಹಂದರವಿರುವ ಚಿತ್ರ ಸಿಂಪಲ್ ಆಗಿಯೇ ಮುಗಿಯುತ್ತದೆ.
ತಾರಾ ಶರಣ್ ಜೋಡಿಯ ಹಾಸ್ಯದ ಹೊನಲು ನಿಜಕ್ಕೂ ಸೀಟಲ್ಲಿ ಕೂರಲು ಬಿಡುವುದಿಲ್ಲ. ಅನಂತ್ ಸುಹಾಸಿನಿ ಕಾಂಬಿನೇಷನ್ ಕೂಡಾ ಅಷ್ಟೇ ಸೂಪರ್. ಕಥೆ ಹೆಚ್ಚೇನು ಇಲ್ಲ. ಮನೆಯ ಯಜಮಾನನ ಬಗ್ಗೆ ಇತರೆ ಸದಸ್ಯರು ತೋರಿಸುವ ತಾತ್ಸಾರಕ್ಕಾಗಿ ಆತ ಅದರಿಂದ ಪಾರಾಗಲು ಉಪಾಯ ಹೂಡುತ್ತಾನೆ. ಮತ್ತೊಂದು ಬಳುಕುವ ಬಳ್ಳಿಯಂಥ ಹುಡುಗಿ ಮನೆ ಸೇರುತ್ತಾಳೆ. ಗಂಡ ಹೆಂಡಿರ ಮಧ್ಯೆ ಮತ್ತೊಬ್ಬಾಕೆ ಬಂದಾಗ ಏನಾಗುತ್ತೋ ಅದೇ ಇಲ್ಲೂ ಕಾಮಿಡಿ ರೂಪದಲ್ಲಿ ಆಗುತ್ತದೆ. ಗಂಡನ ತಂತ್ರಕ್ಕೆ ಪ್ರತಿತಂತ್ರ ಹೂಡುವ ಹೆಂಡತಿ, ಅಪ್ಪ ಅಮ್ಮನ ಅವತಾರ ನೋಡಿ ಹಳಿದುಕೊಳ್ಳುವ ಮೂವರು ಮಕ್ಕಳು ಹೀಗೆ ಕಥೆ ಸಾಗುತ್ತದೆ. ಕೊನೆಗೂ ಎರಡನೇ ಮದುವೆ ಆಗುತ್ತದೆ. ಯಾರ್ಯಾರಿಗೆ ಎಂಬುದಕ್ಕೆ ಚಿತ್ರಮಂದಿರಕ್ಕೆ ಹೋಗಬೇಕು.
ಸಸ್ಪೆಂಡ್ ಆದ ಲೋಕಾಯುಕ್ತರ ಪಾತ್ರದಲ್ಲಿ ಅನಂತನಾಗ್, ಬ್ಯಾಂಕ್ ಉದ್ಯೋಗದಲ್ಲಿರುವ ಪತ್ನಿಯ ಪಾತ್ರದಲ್ಲಿ ಸುಹಾಸಿನಿ ತಮ್ಮ ಪಾತ್ರಗಳಿಗೆ ಉತ್ತಮ ನ್ಯಾಯ ಒದಗಿಸಿದ್ದಾರೆ. ಮತ್ತೆ ಈ ಇಬ್ಬರ ಜೋಡಿ ಇಲ್ಲೂ ಮೋಡಿ ಮಾಡುತ್ತದೆ. ತಾರಾ ಕಾಮಿಡಿ ಪಾತ್ರದಲ್ಲಿ ಮಿಂಚಿದ್ದಾರೆ. ಶರಣ್ ಎಂದಿನಂತೆ ಸೂಪರ್. ನೆನಪಿರಲಿ ಪ್ರೇಮ್ ಕೂಡಾ ಉತ್ತಮವಾಗಿ ನಟಿಸಿದ್ದಾರೆ. ಜೆನಿಫರ್ ಕೋತ್ವಾಲ್ ಬಳುಕುತ್ತಾ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ರಂಗಾಯಣ ರಘು ಕೂಡಾ ಲಾಯರ್ ಪಾತ್ರದಲ್ಲಿ ಮೇಳೈಸಿದ್ದಾರೆ.
ಒಟ್ಟಾರೆ ಚಿತ್ರ ಹಾಸ್ಯಮಯವಾಗಿ ಸಾಗುವಲ್ಲಿ ರಾಜೇಂದ್ರ ಕಾರಂತರ ಸಂಭಾಷಣೆ ಜೀವಾಳವಾಗಿ ಲಭಿಸಿದೆ. ಎಲ್ಲರ ಪಾತ್ರವನ್ನೂ ಉತ್ತಮವಾಗಿ ಪೋಷಿಸಿದ್ದಾರೆ. ಸುಂದರ ಸಂಜೆಯಲ್ಲಿ ಕುಟುಂಬ ಸಮೇತರಾಗಿ ನಕ್ಕು ಬರಲು ಇದು ಸಕಾಲ. ಇನ್ಯಾಕೆ ತಡ?