ಚಿತ್ರ ಅದ್ಬುತ ಅಂತ ಅನ್ನಿಸದಿದ್ದರೂ ಹೊಟ್ಟೆ ತುಂಬಾ ನಗಿಸುತ್ತದೆ, ಮನಸ್ಸಿಗೆ ರಂಜಿಸುತ್ತಲೇ ನೀತಿ ಪಾಠ ಕಲಿಸುತ್ತದೆ. ಮಕ್ಕಳಿಗೆ ಶಾಲೆಯಲ್ಲಿ ಜಗ್ಗೇಶ್ ಮಾದರಿಯ ಮಾಸ್ತರ್ ಸಿಕ್ಕರೆ ಮಕ್ಕಳೆಲ್ಲಾ ಒಳ್ಳೆ ಮಾರ್ಗದಲ್ಲಿ ಸಾಗುತ್ತಾರೆ ಅನ್ನುವಷ್ಟು ಇಷ್ಟವಾಗುತ್ತದೆ ಲಿಫ್ಟ್ ಕೊಡ್ಲಾ.
ನಿಜಕ್ಕೂ ಒಂದು ಭಿನ್ನ ಮಾದರಿಯ ಚಿತ್ರ ನೀಡುವಲ್ಲಿ ನಿರ್ದೇಶಕ ಅಶೋಕ್ ಕಶ್ಯಪ್ ಯಶ ಕಂಡಿದ್ದಾರೆ. ಇವರಿಗೆ ಸಂಪೂರ್ಣ ಸಹಕಾರ ನೀಡಿದ ಶಂಕರ್ ರೆಡ್ಡಿ ಎಂಬ ನಿರ್ಮಾಪಕನೂ ಹಣ ಗಳಿಸುತ್ತಾನೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಒಟ್ಟಾರೆ ಸರ್ವರೂ ಆದರದಿಂದ ನೋಡಬಹುದಾದ ಉತ್ತಮ ಚಿತ್ರ.
ಜಗ್ಗೇಶ್ ಅಭಿನಯದ ಬಗ್ಗೆ ಎಂದಿನಂತೆ ಎರಡು ಮಾತಿಲ್ಲ. ಇವರ ಜತೆ ಕೋಮಲ್, ಅರ್ಚನಾ ಗುಪ್ತಾ, ಸಾಧುಕೋಕಿಲ, ಶ್ರೀನಿವಾಸಮೂರ್ತಿ ಅಭಿನಯವೂ ಚೆನ್ನಾಗಿದೆ. ಬಸ್ಸೇರಿದ ಪ್ರತಿಯೊಬ್ಬರೂ ಸಾವಿನ ಬಗ್ಗೆ ಮಾತನಾಡುವಾಗ ಜಗ್ಗೇಶ್ ಒಬ್ಬರು ಮಾತ್ರ ಇದರ ವಿರುದ್ಧ ದನಿ ಎತ್ತುತ್ತಾರೆ. ಎಲ್ಲರೂ ಒಂದು ಎನ್ನವಾಗ ಈತ ಇನ್ನೊಂದನ್ನು ಹೇಳುತ್ತಾನೆ. ಜಗ್ಗೇಶ್ ಮಾತಿಗೆ ಸಾಮಾನ್ಯವಾಗಿ ಬೆಲೆ ಸಿಗುವುದಿಲ್ಲ ಅನ್ನಿಸುತ್ತದೆ. ಕೊನೆಗೆ ಉಳಿದವರೊಂದಿಗೆ ಇವರೂ ಅತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅನ್ನಿಸುತ್ತದೆ. ಆದರೆ ವಿಶಿಷ್ಟ ರೀತಿಯಲ್ಲಿ ಮಾತಿನ ಮಾರ್ಗದರ್ಶನ ನೀಡುವ ಜಗ್ಗೇಶ್ ಎಲ್ಲರಲ್ಲೂ ಜೀವಂತವಾಗಿ ಉಳಿಯುವ ನಿರ್ಧಾರ ಕೈಗೊಳ್ಳುತ್ತಾರೆ.
ರೀಮೆಕ್ ಆದರೂ ಅತ್ಯಂತ ವಿಶಿಷ್ಟವಾಗಿ ತೋರಿಸಿದ್ದಾರೆ. ಚಿತ್ರಗಳು ಹೀಗೆ ರಿಮೇಕ್ ಆದರೆ ಚೆನ್ನ ಅನ್ನಿಸುತ್ತದೆ. ಸಾಯಲು ಹೋಗುವವರಲ್ಲಿ ಒಬ್ಬ ಸಾಲಬಾಧೆಯಿಂದ ನರಳುತ್ತಿರುವವ, ಮತ್ತೊಬ್ಬ ವಿಚ್ಛೇದಿತ, ಇನ್ನಿಬ್ಬರ ಪ್ರೇಮಕ್ಕೆ ಮನೆಯವರೇ ಶತ್ರುಗಳು ಇವರೆಲ್ಲಾ ಸೇರಿ ಸಾಯಲು ಹೊರಡುತ್ತಾರೆ. ಇದು ಚಿತ್ರದ ಮೂಲ ವಸ್ತು.
ರಾಮ್ ನಾರಾಯಣ್ ಪಂಚಿಂಗ್ ಡೈಲಾಗ್ ಅಪಾರವಾಗಿ ಗಮನ ಸೆಳೆಯುತ್ತದೆ. ಕೋಮಲ್ ಹಾಸ್ಯ ಅದ್ಬುತವಾಗಿದೆ. ಚಿತ್ರದುದ್ದಕ್ಕೂ ಬರುವ ತಾರೆಗಳ ದಂಡು, ನೆನಪಿನಲ್ಲಿ ಇರುವುದು ಸ್ವಲ್ಪ ಕಷ್ಟ. ಸಾಧುಕೋಕಿಲ ಸ್ವಾಮಿ ವೇಷದಲ್ಲಿ ಸಾಕಷ್ಟು ನಗಿಸುತ್ತಾರೆ. ಸಂಗೀತ ರಂಜನೀಯವಾಗಿದೆ. ಸಾಹಿತ್ಯದ ಸೊಗಡು ಇದರಲ್ಲಿದ್ದುದು ಕಡಿಮೆ. ಆದರೂ ಇಷ್ಟವಾಗುತ್ತದೆ. ನಟಿ ಅರ್ಚನಾ ಹಾಗೂ ಶ್ರೀನಿವಾಸಮೂರ್ತಿ ಕೆಲವೇ ಸಮಯಕ್ಕಾಗಿ ಬಂದರೂ, ಉತ್ತಮ ಅಭಿನಯ ನೀಡಿದ್ದಾರೆ. ನಿಸ್ಸಂಶಯವಾಗಿ ಇದೊಂದು ಸಂದೇಶಾತ್ಮಕ ಚಿತ್ರ. ಸಿನಿಮಾ ತುಂಬಾ ಚೆನ್ನಾಗಿದೆ. ಇಷ್ಟಪಟ್ಟು ನೋಡಬಹುದು.