ಮಹಾದೇವ್ ನಿರ್ದೇಶನದ ಮೇಷ್ಟ್ರು ಚಿತ್ರ ಉತ್ತಮರ ಪಟ್ಟಿಗೆ ಸೇರದಿದ್ದರೂ, ಕನಿಷ್ಠವಂತೂ ಅಲ್ಲ. ಒಂದು ಸಾಮಾಜಿಕ ಸಂದೇಶವನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ನೋಡುಗರಿಗೆ ಮನರಂಜನೆ ನೀಡುವುದಿಲ್ಲ. ಆದರೆ ಉತ್ತಮ ಸಂದೇಶವನ್ನಂತೂ ನೀಡುತ್ತದೆ. ನಮ್ಮ ಬದುಕಿನಲ್ಲಿ ಬಂದು ಹೋದ ಮೆಷ್ಟ್ರುಗಳನ್ನು ಜ್ಞಾಪಿಸುತ್ತದೆ. ಆದರೆ ಮೇಷ್ಟ್ರ ಕೈಗೆ ಕೋಲು ಬಳಪ ನೀಡುವ ಬದಲು ನಿರ್ದೇಶಕ ಮಹಾದೇವ್ ಲಾಂಗು ಮಚ್ಚು ನೀಡಿದ್ದಾರೆ! ಆ ಮೂಲಕ ಡಿಫರೆಂಟ್ ಮೇಷ್ಟ್ರನ್ನು ನೀಡಿದ್ದಾರೆ.
ಮೇಷ್ಟ್ರು ಅಂದರೆ ಹೀಗಿರಬೇಕು ಅನ್ನುವಂತೆ ದೇವರಾಜ್ ಅಭಿನಯಿಸಿದ್ದಾರೆ. ಅವರ ಅಭಿನಯ ಎಂದಿನಂತೆ ಟಾಪ್ ಕ್ಲಾಸ್. ಮೇಷ್ಟ್ರು ಎಲ್ಲ ಮಕ್ಕಳ ಬದುಕಿನಲ್ಲಿ ಯಾವ ರೀತಿ ಮುಖ್ಯ ಪಾತ್ರವಹಿಸುತ್ತಾರೆ ಎನ್ನುವುದನ್ನು ಇದು ನವಿರಾಗಿ ವಿವರಿಸುತ್ತದೆ.
ದೇವರಾಜ್ ಮೇಷ್ಟ್ರ ಜೊತೆ ಯುವ ನಾಯಕ ದಿಲೀಪ್ ಪೈ ಕೂಡ ಕೊಂಚ ಉತ್ತಮ ಅಭಿನಯ ನೀಡಿದ್ದಾರೆ. ಇಬ್ಬರಿಗೂ ವಿಭಿನ್ನ ಪಾತ್ರವಿದೆ. ಅದನ್ನು ಅವರು ಅಷ್ಟೇ ನಿಯತ್ತಾಗಿ ನಿಭಾಯಿಸಿದ್ದಾರೆ. ಚಿತ್ರದ ಉಳಿದ ತಾರಾಗಣಕ್ಕೆ ಹೆಚ್ಚಿನ ಕೆಲಸವಿಲ್ಲ. ನಟಿ ಭಾನುಪ್ರಿಯಾ ಕೂಡಾ ಹಾಗೆ ಬಂದು ಹೀಗೆ ಹೋಗುತ್ತಾರೆ.
ದೇವರಾಜ್ ಖಡಕ್ ಅಭಿನಯ ಬಿಟ್ಟರೆ ಚಿತ್ರದಲ್ಲಿ ಹೇಳಿಕೊಳ್ಳುವಂಥ ವಿಶೇಷವೇನೂ ಇಲ್ಲ. ಹಾಗಾಗಿ ದೇವರಾಜ್ ಅಭಿನಯ ನೋಡಬೇಕೆನಿಸುವವರು ಚಿತ್ರ ನೋಡಬಹುದು.