ಕನ್ನಡ ಚಿತ್ರರಂಗ ನಿಂತ ನೀರಾಗಿದೆ. ಉತ್ತಮ ಚಿತ್ರಗಳು ಬರುತ್ತಿಲ್ಲ ಎಂಬ ಆರೋಪಕ್ಕೆ ಕಳೆದ ಕೆಲ ವಾರದಿಂದ ಪ್ರತ್ಯುತ್ತರ ರೂಪದಲ್ಲಿ ಕೆಲ ಉತ್ತಮ ಚಿತ್ರಗಳು ಬರುತ್ತಿವೆ. ಈ ವಾರ ತೆರೆಕಂಡ 'ಗಂಡೆದೆ'ಯೂ ಆ ಸಾಲಿನಲ್ಲಿ ನಿಲ್ಲುತ್ತದೆ.
ನೋಡುಗರನ್ನು ಸೆಳೆಯುವ ಗಂಡೆದೆ ಈ ಚಿತ್ರದಲ್ಲಿದೆ ಎನ್ನಬಹುದು. ಹಾಗಂತ ಇಲ್ಲಿ ನ್ಯೂನತೆಯೇ ಇಲ್ಲ ಅನ್ನುವಂತಿಲ್ಲ. ಆದರೆ ನ್ಯೂನತೆಯನ್ನೇ ಸಿನಿಮಾವಾಗಿಸಿಕೊಂಡಿರುವ ಮಾದರಿಯ ಪಟ್ಟಿಗೆ ಸೇರುವುದಿಲ್ಲ. ಅತ್ಯುತ್ತಮ ಅಲ್ಲದಿದ್ದರೂ, ನೋಡಿಸಿಕೊಂಡು ಹೋಗುವ ಚಿತ್ರ ಇದು. ಅಲ್ಲಲ್ಲಿ ನಿಧಾನ ಅನ್ನಿಸಿದರೂ, ಕೆಲ ತಪ್ಪನ್ನು ನುಂಗಿಕೊಂಡರೆ ನೋಡೆಬಲ್ ಚಿತ್ರ ಇದಾಗಿದೆ. ಅಸಹನೀಯ ಅನ್ನಿಸುವ ಸನ್ನಿವೇಶ, ಮುಗಿದರೆ ಸಾಕು ಅನ್ನುವ ದೃಶ್ಯಗಳು ಈ ಚಿತ್ರದಲ್ಲಿ ಅಷ್ಟಾಗಿ ಇಲ್ಲದಿರುವುದರಿಂದ ಪ್ರೇಕ್ಷಕ ಒಂದು ಹಂತದಲ್ಲಿ ಸೇಫ್. ಚಿತ್ರದ ಸಂಪೂರ್ಣ ಭಾಗ ವೀಕ್ಷಣೆ ನಂತರ ಇದೊಂದು ಕನ್ನಡ ಭಾಷೆಯ ತೆಲುಗು ಚಿತ್ರ ನೋಡಿ ಹೊರಬಂದಂತೆ ಭಾಸವಾತ್ತದೆ.
ನಿರ್ದೇಶಕ ಶಿವ ಅಕುಲ ಕೆಲಸವನ್ನು ಕೆಲವೆಡೆ ನಿಧಾನವಾಗಿ ಇನ್ನು ಕೆಲವೆಡೆ ಸಾಮಾನ್ಯ ವೇಗದಲ್ಲಿ ಸಾಗಿಸಿದ್ದಾರೆ. ಚಿತ್ರದುದ್ದಕ್ಕೂ ಸೆಂಟಿಮೆಂಟ್, ಕಾಮಿಡಿಗಳಿಗೆ ಕೊರತೆ ಇಲ್ಲ. ನಗುವಿಗೆ ಉತ್ತಮ ಅವಕಾಶ ಇಲ್ಲಿದೆ.
ಚಿರಂಜೀವಿ ಸರ್ಜಾ ತಮ್ಮ ಎರಡನೇ ಚಿತ್ರದಲ್ಲಿ ಕೊಂಚ ಸುಧಾರಿಸಿದ್ದಾರೆ. ಹಿಂದಿನ ಚಿತ್ರಕ್ಕಿಂತ ಇದು ವಾಸಿಯಿಲ್ಲ ಅನ್ನಿಸುವಂತೆ ಅಭಿನಯಿಸಿದ್ದಾರೆ. ಶರೀರದ ಚಲನೆ, ಹಾವ ಭಾವದಲ್ಲಿ ಒಂದಿಷ್ಟು ತಾಜಾತನ ಇದೆ. ಇನ್ನು ನಟಿ ರಾಗಿಣಿ ಹಾಡು, ನೃತ್ಯಕ್ಕೆ ನೀಡಿದ ಗಮನವನ್ನು ಅಭಿನಯಕ್ಕೆ ನೀಡಿಲ್ಲ. ಡಾನ್ಸ್ ಮಾಡುವಾಗ ಅದ್ಬುತ ಅನ್ನಿಸುವ ಇವರು ಮಾತಿಗೆ ನಿಂತಾಗ ಅಯ್ಯೋ ಪಾಪ ಅನ್ನಿಸಿ ಬಿಡುತ್ತಾರೆ.
ದೇವರಾಜ್ ಈ ಚಿತ್ರದ ಹೀರೋ ಅಂದರೂ ತಪ್ಪಾಗಲಾರದು. ಇವರ ಡೈನಾಮಿಕ್ ಅಭಿನಯಕ್ಕೆ ಇದೊಂದು ಉತ್ತಮ ನಿದರ್ಶನವಾಗಬಲ್ಲ ಚಿತ್ರ. ರಂಗಾಯಣ ರಘು ತಾವು ನಗುತ್ತಾ, ನಮ್ಮನ್ನೂ ಚೆನ್ನಾಗಿ ನಗಿಸುತ್ತಾರೆ. ಶರತ್ ಲೋಹಿತಾಶ್ವ, ಸೂರ್ಯನಾರಾಯಣ್ ತಮ್ಮ ಪಾಲಿನ ಖಳನಾಯಕರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಂಗೀತಕ್ಕೆ ಅಂತಹ ಮಹತ್ವ ನೀಡಿಲ್ಲವೆಂದರೂ ತಪ್ಪಿಲ್ಲ. ಹಾಡುಗಳು ಎಲ್ಲೋ ಕೇಳಿದಂತೆ ಅನ್ನಿಸುತ್ತವೆ. ಸಾಹಿತ್ಯದಲ್ಲೂ ಗಟ್ಟಿತನ ಇಲ್ಲ. ಆದರೂ ಒಟ್ಟಾರೆ ಒಮ್ಮೆ ನೋಡಿ ಬರಲು ಮೋಸವಿಲ್ಲ.