ನಿರ್ದೇಶಕ ಸೂರಿ ಮತ್ತೊಂದು ಯತ್ನ ಫಲ ಕೊಟ್ಟಿದೆ. ತಮ್ಮ ಠಪೋರಿ ಪಾತ್ರಧಾರಿ ನಾಯಕನ ಮುಖವಾಡವನ್ನು ಪುನಿತ್ ರಾಜ್ ಕುಮಾರ್‌ಗೆ ಹಾಕಿ ಯಶಸ್ವಿಯಾಗಿದ್ದಾರೆ. ಒಂದೇ ಮಾದರಿಯ ಚಿತ್ರ ಮಾಡುತ್ತಾರೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಇವರು ಈ ಚಿತ್ರವನ್ನೂ ಅದೇ ರೀತಿ ಮಾಡಿ ಗೆದ್ದಿದ್ದಾರೆ.
ಚಿತ್ರದ ಯಶಸ್ಸಿನಲ್ಲಿ ರಿಯಾಲಿಟಿಗೆ ಹತ್ತಿರವಾದ ಸಂಭಾಷಣೆ ಹಾಗೂ ಸನ್ನಿವೇಶಗಳು ಕಾರಣ. ಒಂದು ಭಿನ್ನತೆ ಚಿತ್ರದಲ್ಲಿದೆ. ಪಾತ್ರ ದುನಿಯಾ ಚಿತ್ರದ ವಿಜಯ್ ಮಾದರಿಯದ್ದೇ ಆದರೂ, ಇಲ್ಲೊಂದು ಬೇರೆಯೇ ಆದ ತನ್ನತನ ಇದೆ. ಪುನಿತ್‌ಗೆ ಒಪ್ಪುವ ಗೆಟಪ್ ಇಲ್ಲಿದೆ. ಚಿತ್ರ ನೀಟಾಗಿಯೂ ವ್ಯವಸ್ಥಿತವಾಗಿಯೂ ಬಂದಿದೆ.
ಇಂದು ನಾವು ನೋಡುವ ಬೆಂಗಳೂರಿನ ಇನ್ನೊಂದು ಮುಖದ ಪರಿಚಯವನ್ನು ಸೂರಿ ಜಾಕಿಯಲ್ಲಿ ಮಾಡಿದ್ದಾರೆ. ಹಾಗೂ ಗೆದ್ದಿದ್ದಾರೆ. ಚಿತ್ರದ ಅರ್ಧಭಾಗ ಕಾಡಿನಲ್ಲಿ ಹಾಗೂ ಉಳಿದರ್ಧ ಭಾಗ ಕಲಾಸಿಪಾಳ್ಯದಲ್ಲಿ ನಡೆಯುತ್ತದೆ. ಇಲ್ಲಿ ಏನೇನು ಹೇಳಬೇಕೆಂದುಕೊಂಡು ಸೂರಿ ಬಯಸಿದ್ದರೋ, ಅದನ್ನೆಲ್ಲಾ ಪುನಿತ್ ಕೈಲಿ ಹೇಳಿಸಿದ್ದಾರೆ. ಇದರಲ್ಲಿ ಕೆಲವು ಜನರಿಗೆ ಒಪ್ಪಿಗೆ ಆದರೆ ಹೆಚ್ಚಿನವು ಆಗಿಲ್ಲ ಎನ್ನಬಹುದು. ಹೊಡೆದಾಟದ ಬದುಕಿನಲ್ಲಿ ಪ್ರೀತಿ ಚಿಗುರಲು ಸಹ ಅವಕಾಶ ಕಲ್ಪಿಸಿದ್ದಾರೆ ಸೂರಿ. ಕಾಮಿಡಿಯೂ ಇದೆ. ಆಗ ಈಗ ಬಂದು ನಗಿಸುವ ಕಾರ್ಯವನ್ನು ಹಾಸ್ಯ ಕಲಾವಿದರು ಮಾಡಿದ್ದಾರೆ.
PR
ನಿರ್ದೇಶಕ ಸೂರಿ ಕಥೆ ಮತ್ತು ಚಿತ್ರಕಥೆ ವಿಭಾಗದಲ್ಲಿ ಸಾಕಷ್ಟು ಶ್ರಮ ತೋರಿದ್ದಾರೆ. ಪುನಿತ್ ಎಂಬ ಉತ್ತಮ ನಟನನ್ನು ಹಾಕಿಕೊಂಡು ಗೆದ್ದಿದ್ದಾರೆ. ಚಿತ್ರ ಚೆನ್ನಾಗಿದೆ ಎನ್ನುವುದಕ್ಕಿಂತಲೂ ನೋಡುವಂತಿದೆ ಎನ್ನಬಹುದು.
ಇನ್ನು, ನಾಯಕಿ ಭಾವನಾ ಈ ಚಿತ್ರದಲ್ಲಿ ಇನ್ನೂ ಕ್ಯೂಟ್ ಆಗಿ ಕಾಣುತ್ತಾರೆ. ತೆಳ್ಳಬೆಳ್ಳಗೆ ಮಿಂಚುತ್ತಾರೆ. ರಂಗಾಯಣ ರಘು ಅರ್ಧದ ನಂತರ ಬರುತ್ತಾರೆ. ಅಲ್ಲಿಂದ ಸಿನಿಮಾ ಒಂದು ಹಂತಕ್ಕೆ ಟೇಕಾಫ್ ಆಗುತ್ತದೆ. ಹರ್ಷಿಕಾ ಪೂಣಚ್ಚ ನಟನೆಗೆ ಪರವಾಗಿಲ್ಲ ಎನ್ನಬಹುದು. ಸುಮಿತ್ರಮ್ಮ ಅಭಿನಯ ಪರವಾಗಿಲ್ಲ. ರವಿ ಕಾಳೆ ಎಂದಿನಂತೆ ಚೆನ್ನಾಗಿ ಅಬ್ಭರಿಸಿದ್ದಾರೆ.
ಹರಿಕೃಷ್ಣ ಸಂಗೀತ ಅತ್ಯುತ್ತಮ. ಯೋಗರಾಜ್ ಭಟ್ಟರ ಸಾಹಿತ್ಯದ ಬಗ್ಗೆ ಎರಡು ಮಾತಿಲ್ಲ. ನೃತ್ಯ ಸಂಯೋಜನೆಯಲ್ಲಿ ಹೊಸತನವಿದೆ. ಸತ್ಯ ಹೆಗಡೆ ಕ್ಯಾಮೆರಾ ಕೈಚಳಕ ಅದ್ಬುತ. ಅದಕ್ಕಾಗಿಯಾದರೂ ಈ ಚಿತ್ರ ನೋಡಲೇಬೇಕು.