ಹಲವು ಸಮಯದಿಂದ ಡಬ್ಬದಲ್ಲಿ ಕಾಯುತ್ತಿದ್ದ 'ಲವ್‌ಗುರು' ನಿರ್ದೇಶಕ ಪ್ರಶಾಂತ್‌ರಾಜ್ ಅವರ ಮಹತ್ವಾಕಾಂಕ್ಷೆಯ 'ಗಾನ ಬಜಾನಾ' ಮೋಸ ಮಾಡಿಲ್ಲ. ಕಮರ್ಷಿಯಲ್ ಅಂಶಗಳನ್ನು ಸೇರಿಸಿಕೊಂಡು, ಭಿನ್ನ ನಿರೂಪನೆಯನ್ನು ಪ್ರಚುರಪಡಿಸಿರುವ ನಿರ್ದೇಶಕರು ತನ್ನ ಹಳೆ ಟೀಮಿನಿಂದ ಹೊಸ ಚಿತ್ರ ನೀಡಿದ್ದಾರೆ.
ಇಬ್ಬರು ನೃತ್ಯಪಟುಗಳು ಮತ್ತು ಲೋಕಲ್ ರೌಡಿಯ ನಡುವೆ ಸುತ್ತುವ ಕಥೆಯನ್ನೊಳಗೊಂಡ ಚಿತ್ರವಿದು. ಹಾಗಿದ್ದರೂ ಇದು ತ್ರಿಕೋನ ಪ್ರೇಮಕಥೆಯಲ್ಲ. ಪ್ರೀತ್ಯಂತರದಲ್ಲಿ ಕೊನೆಗೆ ಗೆಲ್ಲುವವರು ಯಾರು ಎನ್ನುವುದರ ನಡುವೆ ಸೆಂಟಿಮೆಂಟ್ ಕಡಿಮೆ ಇರುವ ಕೆಲವು ಕುತೂಹಲಕಾರಿ ವಿಚಾರಗಳನ್ನು ನಿರ್ದೇಶಕರು ಹೇಳುತ್ತಾ ಹೋಗುತ್ತಾರೆ.
ಇಬ್ಬರು ಪ್ರಾಣ ಸ್ನೇಹಿತರ (ರಾಜಾ ರಾವ್, ಸಿ.ಆರ್. ಸಿಂಹ) ಮೊಮ್ಮಕ್ಕಳು ರಾಧೆ (ರಾಧಿಕಾ ಪಂಡಿತ್) ಮತ್ತು ಕ್ರಿಶ್ (ತರುಣ್). ತಮ್ಮ ಸಂಬಂಧವನ್ನು ಮೊಮ್ಮಕ್ಕಳ ಮೂಲಕ ಮುಂದುವರಿಸಬೇಕೆಂದು ಬಯಕೆಯನ್ನು ಹೊತ್ತವರು. ವಿದೇಶದಲ್ಲಿ ನೆಲೆಸಿರುವ ರಾಜಾ ರಾವ್ ಆರೋಗ್ಯ ಹದಗೆಟ್ಟಿದೆ ಎಂದು ಸಿ.ಆರ್. ಸಿಂಹ ತನ್ನ ಮೊಮ್ಮಗಳು ಮತ್ತು ಕುಟುಂಬದೊಂದಿಗೆ ತರಾತುರಿಯಲ್ಲಿ ಹೋಗುತ್ತಾರೆ.
ಸ್ವತಃ ನೃತ್ಯಪಟುವಾಗಿರುವ ರಾಧೆ, ಕ್ರಿಶ್‌ನನ್ನು ಭೇಟಿಯಾಗುತ್ತಾಳೆ. ರಾಧೆಯನ್ನು ನೋಡಿದ ಕ್ರಿಶ್ ಕ್ಲೀನ್ ಬೌಲ್ಡ್. ಆದರೆ ರಾಧೆಯ ಮನೋಸ್ಥಿತಿ ಬೇರೆಯಾಗಿರುತ್ತದೆ. ಆಕೆ ರಫ್ ಎಂಡ್ ಟಫ್ ಆಗಿರುವ ರೌಡಿ ಕುಟ್ಟಪ್ಪನನ್ನು (ದಿಲೀಪ್‌ರಾಜ್) ಮದುವೆಯಾಗಬೇಕೆಂದು ಬಯಸಿರುತ್ತಾಳೆ.
ಭಾರತಕ್ಕೆ ಬರುವ ಕ್ರಿಶ್, ರಾಧೆಯ ಮನೆಯಲ್ಲೇ ಉಳಿಯುತ್ತಾನೆ. ರಾಧೆ ತನ್ನ ನಿಲುವು ಅಚಲ ಎನ್ನುತ್ತಾಳೆ. ಆದರೂ ಕ್ರಿಶ್ ಅಪಾರ ಪ್ರೀತಿಯನ್ನು ಕಂಡು ಮರುಗುತ್ತಾಳೆ.
ರಾಧೆಗೆ ರೌಡಿ ಕುಟ್ಟಪ್ಪನ ಮೇಲೆ ಒಲವಿದ್ದರೂ, ರೌಡಿಯ ಒಲವು ಮತ್ತೊಬ್ಬಾಕೆಯ ಮೇಲಿರುತ್ತದೆ. ನೃತ್ಯಶಾಲೆಯೊಂದರ ಶಿಕ್ಷಕಿಯನ್ನು ಮದುವೆಯಾಗುವ ನಿರ್ಧಾರಕ್ಕೆ ಕುಟ್ಟಪ್ಪ ಬಂದಿರುತ್ತಾನೆ.
ಈ ಬಳಿಕವಾದರೂ ಕ್ರಿಶ್‌ನನ್ನು ರಾಧೆ ಇಷ್ಟಪಡುತ್ತಾಳೋ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು.
'ಲವ್‌ಗುರು' ಚಿತ್ರಕ್ಕೆ ಹೋಲಿಸಿದರೆ 'ಗಾನ ಬಜಾನಾ' ಅಷ್ಟಕ್ಕಷ್ಟೇ. ಬಾಲಿವುಡ್ ಮಾದರಿಯ ಚಿತ್ರ ಮಾಡಿರುವುದಾಗಿ ಪ್ರಶಾಂತ್‌ರಾಜ್ ಹೇಳಿಕೊಂಡಿದ್ದರೂ, ಅಂತಹ ಯಾವುದೇ ಅಂಶಗಳು ಚಿತ್ರದಲ್ಲಿ ಕಾಣ ಸಿಗದು. ಅತಿಯಾದ ಆತ್ಮವಿಶ್ವಾಸದಿಂದ ನಿರ್ದೇಶಕರು ಕೊಂಚ ಎಡವಿದ್ದಾರೆ ಎನ್ನಲು ಸಾಕಷ್ಟು ಸಾಕ್ಷಿಗಳಿವೆ. ಆದರೂ ಕೊಟ್ಟ ಹಣಕ್ಕೆ ಚಿತ್ರ ಮೋಸ ಮಾಡದು. ನಿರ್ದೇಶಕರಾಗಿ ಅವರು ಸೋತಿದ್ದಾರೆ ಎಂದು ಹೇಳಲಾಗದು.
ನಿರ್ದೇಶಕರ ಪಾತ್ರಗಳಾಗಿರುವ ರಾಧಿಕಾ ಪಂಡಿತ್, ತರುಣ್ ಮತ್ತು ದಿಲೀಪ್ ನಟನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಸಾಧ್ಯವೇ ಇಲ್ಲ. ಮೂವರೂ ಹಠಕ್ಕೆ ಬಿದ್ದವರಂತೆ ಚಿತ್ರವನ್ನು ಜೀವಂತವಾಗಿಡಲು ಯತ್ನಿಸುತ್ತಾರೆ. ತರುಣ್ ಹುಡುಗಿಯರ ಹೃದಯಕ್ಕೆ ಕನ್ನ ಹಾಕಿದರೆ, ರೌಡಿಯಾಗಿ ದಿಲೀಪ್ ಸಖತ್ ಕಿಕ್ ಕೊಡುತ್ತಾರೆ. ಸ್ಟೈಲಿಶ್ ನಗುವಿನ ರಾಧೆಯಂತೂ ಎಂದಿನಂತೆ ಲವ್ಲಿ.
ಶರಣ್, ಎಂ.ಎಲ್. ಲಕ್ಷ್ಮಿದೇವಿ ಆಗಾಗ ತೆರೆ ಮೇಲೆ ಬಂದು ಹಾಸ್ಯದ ಟಾನಿಕ್ ನೀಡುತ್ತಾರೆ. ಚಿತ್ರದ ಮತ್ತೊಂದು ದೊಡ್ಡ ಹೈಲೈಟ್ ಜೋಶ್ವಾ ಶ್ರೀಧರ್ ಇಂಪಾದ ಸಂಗೀತ. ಶೀರ್ಷಿಕೆ ಗೀತೆ ಸೇರಿದಂತೆ ಮೂರು ಹಾಡುಗಳು ಸೂಪರ್. ನೃತ್ಯ ನಿರ್ದೇಶನ ಕೂಡ ಗಮನ ಸೆಳೆಯುತ್ತದೆ.