ಚಿತ್ರ: ವೀರ ಪರಂಪರೆ ತಾರಾಗಣ: ಅಂಬರೀಷ್, ಸುದೀಪ್, ಐಂದ್ರಿತಾ ರೇ, ವಿಜಯಲಕ್ಷ್ಮಿ ಸಿಂಗ್, ಶರಣ್ ಸಂಗೀತ, ನಿರ್ದೇಶನ: ಎಸ್. ನಾರಾಯಣ್
ರಿಮೇಕ್ ಚಿತ್ರವೊಂದನ್ನು ಮಾಡಲು ಮುಂದೆ ಬಂದಾಗ, ಅದಕ್ಕೂ ಮೊದಲು ಒಂದು ಸ್ವಮೇಕ್ ಮಾಡಿ ಎಂದು ಸುದೀಪ್ ಹೇಳಿದ್ದನ್ನೇ ಸವಾಲಾಗಿ ಸ್ವೀಕರಿಸಿ ಎಸ್. ನಾರಾಯಣ್ ನಿರ್ಮಿಸಿರುವ ಚಿತ್ರವಿದು. ಹೊಸತೇನಾದರೂ ಇದೆಯೆಂದು ನಿರೀಕ್ಷಿಸುವುದೇ ತಪ್ಪು, ಆದರೂ ಮಾಸ್ ಪ್ರೇಕ್ಷಕರನ್ನು ರಂಜಿಸುವ ಸಾಕಷ್ಟು ಅಂಶಗಳನ್ನು ಚಿತ್ರದೊಳಗೆ ನಾರಾಯಣ್ ಸಮರ್ಥವಾಗಿ ತುರುಕಿದ್ದಾರೆ ಎನ್ನುವುದು ಚಿತ್ರದ ಪ್ಲಸ್ ಪಾಯಿಂಟ್.
ಕಠಿಣ ಶಿಸ್ತು ಮತ್ತು ಧರ್ಮಪಾಲಕನಾಗಿರುವ, ಎಲ್ಲರಿಂದ ಅಪಾರ ಗೌರವವನ್ನು ಪಡೆಯುವ ಊರಿನ ಮುಖಂಡ ವರದೇಗೌಡ (ಅಂಬರೀಷ್). ಜನರ ಸಮಸ್ಯೆಗಳನ್ನು ಪರಿಹರಿಸುವುದು ಗೌಡನಿಗೆ ನೀರು ಕುಡಿದಂತೆ. ಕೆಳವರ್ಗದವರನ್ನು ಮೇಲೆತ್ತುವುದೇ ತನ್ನ ಕಾಯಕ ಎಂದು ಭಾವಿಸಿದವನಾತ.
ವರದೇಗೌಡನನ್ನು ದೇವರೆಂದೇ ಭಾವಿಸುವ ಸಾಕು ಮಗ ತೇಜ. ಈತನ ತಂದೆ (ಶೋಭರಾಜ್) ಮರಣ ಹೊಂದಿದ ಬಳಿಕ ವರದೇಗೌಡನೇ ಎಲ್ಲ. ಹಾಗಾಗಿ ಗೌಡನ ಯಾವ ಮಾತನ್ನೂ ತೇಜ ಮೀರುವವನಲ್ಲ.
ಹೀಗಿದ್ದಾಗ ತನ್ನ ಎದುರಾಳಿ ಭೈರೇಗೌಡ (ಸುದೀಪ್ ಧೋ) ನೂರಾರು ಎಕರೆ ಜಮೀನನ್ನು ಅತಿಕ್ರಮಿಸಿಕೊಳ್ಳುತ್ತಾನೆ. ಇದನ್ನು ವಿರೋಧಿಸುವ ವರದೇಗೌಡ ಮತ್ತೊಮ್ಮೆ ಜನರ ಕಣ್ಮಣಿಯಾಗುತ್ತಾನೆ. ಈತನಿಗೆ ಪೂರಕ ಬೆಂಬಲ ನೀಡುವ ಬಲಗೈ ತೇಜ (ಸುದೀಪ್). ವರದೇಗೌಡ ಮತ್ತು ತೇಜರನ್ನು ಮುಟ್ಟಲು ಧೈರ್ಯ ಇಲ್ಲದವರ ಊರದು.
ತೀವ್ರ ಮುಖಭಂಗಕ್ಕೀಡಾದ ಭೈರೇಗೌಡ ವರದೇಗೌಡನ ಮೇಲೆ ದಾಳಿಗೆ ಸಂಚು ರೂಪಿಸುತ್ತಾನೆ. ಆತನನ್ನು ಮುಗಿಸಬೇಕೆಂದು ಹೊರಟಿದ್ದ ಭೈರೇಗೌಡನ ಪಡೆಯನ್ನು ಮಣ್ಣುಮುಕ್ಕಿಸುವುದು ತೇಜ. ಸಾಕಷ್ಟು ತಲೆಗಳು ಈ ಸಂದರ್ಭದಲ್ಲಿ ಉರುಳಿ ಹೋಗುತ್ತವೆ.
ಇಷ್ಟಾದರೂ ಭೈರೇಗೌಡ ಪಟ್ಟು ಬಿಡುವುದಿಲ್ಲ. ವರದೇಗೌಡ ಮತ್ತು ತೇಜನನ್ನು ಬೇರ್ಪಡಿಸಲು ಸಾಕಷ್ಟು ತಂತ್ರಗಳನ್ನು ಹೂಡುತ್ತಾನೆ. ಇದರಲ್ಲಿ ಯಶಸ್ವಿಯಾಗುತ್ತಾನಾ? ವರದೇಗೌಡ ಮತ್ತು ತೇಜನ ಸಂಬಂಧ ಏನಾಗುತ್ತದೆ ಎಂಬ ಅನಿರೀಕ್ಷಿತವಲ್ಲದ ಕಥೆ ಮುಂದಿದೆ.
ಪ್ರಸಕ್ತ ತಾಂಡವವಾಡುತ್ತಿರುವ ಕೈಗಾರಿಕೆ, ರಸ್ತೆ, ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಹೆಸರಿನಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ಸರಕಾರದ ನೀತಿಗಳ ವಿರುದ್ಧ ಹೋರಾಡುವ ಕಥೆಯನ್ನು ಚಿತ್ರ ಒಳಗೊಂಡಿದ್ದರೂ, ಅದೇ ಹಳೆ ಮೀಸೆ-ಹೊಡೆದಾಟಗಳು ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗದು. ಅಂಬರೀಷ್-ಸುದೀಪ್ ಅಭಿಮಾನಿಗಳಿಗೆ ಕಿಕ್ ಕೊಡಬಹುದಾದರೂ, ಕೆಲವು ಕಡೆಯಂತೂ ಬೋರ್ ಹೊಡೆಸುವಷ್ಟು ಹೊಡೆದಾಟಗಳಿವೆ.
ಅಂಬಿ ಮತ್ತು ಸುದೀಪ್ ಚಿತ್ರದ ಎರಡು ಕಣ್ಣುಗಳಿದ್ದಂತೆ. ಇಬ್ಬರಿಗೂ ಆಕ್ಷನ್ ಮತ್ತು ಸೆಂಟಿಮೆಂಟ್ ಪಾತ್ರಗಳಲ್ಲಿ ಮಿಂಚುತ್ತಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ, ನಿರ್ಮಾ -- ಹೀಗೆ ಎಲ್ಲವನ್ನೂ ಮೈಮೇಲೆ ಎಳೆದುಕೊಂಡಿರುವ ನಾರಾಯಣ್ ಈ ಹಿಂದೆ ಇದೇ ರೀತಿ ಮಾಡಿರುವುದಕ್ಕಿಂತ ಉತ್ತಮ ಚಿತ್ರ ನೀಡಿದ್ದಾರೆ ಎಂದಷ್ಟೇ ಹೇಳಬಹುದು.
ನಾಯಕಿ ಐಂದ್ರಿತಾ ರೇಯದ್ದು ಇದ್ದೂ ಇಲ್ಲದಂತಿರುವ ಪಾತ್ರ. ಶರಣ್ ಆಗಾಗ ಪ್ರೇಕ್ಷಕರಿಗೆ ಕಚಗುಳಿಯಿಡುತ್ತಾರೆ. ನಾರಾಯಣ್ ಸಂಗೀತದಲ್ಲಿನ ಒಂದೆರಡು ಹಾಡುಗಳು ಬಹುವಾಗಿ ಕಾಡುತ್ತವೆ. ಗಿರಿ ಕ್ಯಾಮರಾದ ಬಗ್ಗೆ ಎರಡು ಮಾತಿಲ್ಲ. ಸಂಗೀತಕ್ಕಿಂತಲೂ ಹೆಚ್ಚು ಗಮನ ಸೆಳೆಯುವುದು ಸುಂದರ ಛಾಯಾಗ್ರಹಣ. ಇದು ಹೊಡೆದಾಟದ ದೃಶ್ಯಗಳಲ್ಲೂ ಕಂಡು ಬರುತ್ತದೆ.
ಹಳ್ಳಿಯ ಸೊಗಡು, ಗೌಡರ ದೌಲತ್ತು, ಪ್ರಾಮಾಣಿಕತೆ, ದ್ವೇಷ, ಒಂದಿಷ್ಟು ಪ್ರೀತಿ, ಸೆಂಟಿಮೆಂಟ್ ಮುಂತಾದ ಫ್ಯಾಮಿಲಿ ಪ್ಯಾಕೇಜ್ ಬೇಕಾದವರಿಗೆ ಹೇಳಿ ಮಾಡಿಸಿದ ಚಿತ್ರ 'ವೀರ ಪರಂಪರೆ'.