ಮಾನಸಿಕ ದುರ್ಬಲತೆಯಿಂದ ಬಳಲುತ್ತಿರುವ ತರುಣಿಯೊಬ್ಬಳ ಕಥೆಯ ಹಂದರವನ್ನು ಹೊಂದಿರುವ ಚಿತ್ರ `ಶಾಕ್'. ಈ ವಾರ ಬಿಡುಗಡೆಯಾದ ರೀಮೇಕ್ ಚಿತ್ರ. ಬಾಲಿವುಡ್ ಖ್ಯಾತಿಯ ರಾಮ್‌ಗೋಪಾಲ್ ವರ್ಮ ಅವರ `ಕೌನ್' ಚಿತ್ರದ ಕನ್ನಡ ಅವತರಣಿಕೆ ಇದು.
ಬಂಗಲೆಯೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ನಾಯಕಿಗೆ (ಸುಮಾ ಗುಹಾ), ಸದಾ ತುಮಲ. ಇಲ್ಲದ್ದನ್ನು ಊಹಿಸಿಕೊಂಡು ಮಾನಸಿಕ ಒತ್ತಡದಲ್ಲಿ ಒದ್ದಾಡುತ್ತಿರುವ ಜೀವಿ. ಒಮ್ಮೆ ಟಿವಿ ಪರದೆಯ ಮೇಲೆ ಸರಣಿ ಕಿಲ್ಲರ್ರೊಬ್ಬ (ರಮೇಶ್ ಅರವಿಂದ್) ತಪ್ಪಿಸಿಕೊಂಡು ತಿರುಗುತ್ತಿರುವ ಸುದ್ದಿ ನೋಡಿ ಮತ್ತಷ್ಟು ಗಾಬರಿಯಾಗುತ್ತಾಳೆ. ಎಲ್ಲಿ ನನ್ನ ಮನೆಗೆ ನುಗ್ಗುತ್ತಾನೆ ಎಂಬ ಅನುಮಾನ.
ಈಕೆ ಯೋಚನೆಯಲ್ಲಿರುವಾಗ ಸರಿ ರಾತ್ರಿಯಲ್ಲಿ ಟಕ್.. ಟಕ್... ಬಾಗಿಲು ಬಡಿದ ಶಬ್ದ. ಆಕೆ ನಿಟ್ಟು ಬಿದ್ದು ಎದ್ದು ಬಾಗಿಲ ಬಳಿ ಬಂದು ಕಿಟಕಿ ಸಂದಿನಿಂದ ನೋಡುತ್ತಾಳೆ. ವ್ಯಕ್ತಿಯೊಬ್ಬನು ನಿಂತಿರುತ್ತಾನೆ. ಮತ್ತಷ್ಟು ದಿಗಿಲುಗೊಂಡು ಬಾಗಿಲು ತೆರೆಯಲು ಹಿಂಜರಿಯುತ್ತಾಳೆ. ಆದರೂ ಅನಾಮಿಕ ವ್ಯಕ್ತಿಯ ಮಾತಿನ ತಂತ್ರಗಾರಿಕೆ ಆಕೆ ಬಾಗಿಲು ತೆರೆಯುವಂತೆ ಮಾಡುತ್ತದೆ. ಪಾಟೀಲ್ ಎಂಬ ವ್ಯಕ್ತಿಯನ್ನು ಭೇಟಿ ಮಾಡಲು ಬಂದೆ. ಆದರೆ. ದಾರಿ ತಪ್ಪಿ ಇಲ್ಲಿಗೆ ಬಂದಿದ್ದೇನೆ. ಹೊರಗಡೆ ತುಂಬಾ ಮಳೆ ಬೀಳುತ್ತಿದೆ. ಕತ್ತಲು ಬೇರೆ ಇಂತಹ ನಾನಾ ರೀತಿ ಮನವೊಲಿಕೆ ಮಾತನಾಡುತ್ತಾನೆ.
ನಂತರ ಸರಣಿ ಕೊಲೆಗಾರರನ್ನು ಹುಡುಕಿಕೊಂಡು ಪೊಲೀಸ್ ಅಧಿಕಾರಿ (ನಿನಾಸಂ ಅಶ್ವತ್ಥ್) ಆಗಮನ. ಕೊಲೆಗಾರ ಮತ್ತೊಬ್ಬ ಪೊಲೀಸ್ ಅಧಿಕಾರಿ ನಡುವಿನ ದ್ವೇಷ ಈಕೆಯನ್ನು ಮತ್ತಷ್ಟು ವಿಚಲಿತಗೊಳಿಸುತ್ತದೆ.
NRB
ಕೇವಲ ಮೂರು ಪಾತ್ರಗಳ ಸುತ್ತ ಸುತ್ತಿರುವ ಕಥೆ. ಕೇವಲ ಒಂದು ಬಂಗಲೆ ಒಳಗಡೆ ನಡೆಯುವ ಘಟನೆಗಳ ಆಧಾರದಲ್ಲಿ ಒಂಬತ್ತು ದಿನಗಳಲ್ಲಿ ಚಿತ್ರೀಕರಿಸಿರುವ ಚಿತ್ರ. ಕತ್ತಲೆ ಬಂಗಲೆ ದೃಶ್ಯಗಳನ್ನೆ ಹೆಚ್ಚಾಗಿ ಚಿತ್ರಿಸಿರುವ ಈ ಸಿನಿಮಾನದಲ್ಲಿ ಕೇವಲ ಚೀರಾಟ ಬಿಟ್ಟು ಇನ್ನಾವುದೇ ಹಾಡುಗಳಿಲ್ಲ.
ಆದರೆ, ಚಿತ್ರಕಥೆಯ ಉದ್ದೇಶದ ಸ್ಪಷ್ಟ ಸಂದೇಶವನ್ನು ನಿರ್ದೇಶಕರು ಸರಿಯಾಗಿ ಬಿಂಬಿಸಿಲ್ಲವೇನೋ ಎನಿಸುತ್ತದೆ. ಆದರೆ, ತಮಗೆ ದೊರಕಿರುವ ಚಿತ್ರದ ಪಾತ್ರಗಳನ್ನು ರಮೇಶ್ ಹಾಗೂ ನಿನಾಸಂ ಅಶ್ವತ್ಥ್ ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಂದಿ ಮೂಲದ ಕೌನ್ ಕನ್ನಡದಲ್ಲಿ ಶಾಕ್ ಆಗಿರುವುದು ಸೂಕ್ತ ಹೆಸರಲ್ಲ ಎಂದೆನಿಸಿತ್ತದೆ. ಆದರೆ, ನಿರ್ದೇಶಕ ಹ.ಸು. ರಾಜಶೇಖರ್ ಅವರು ತಮ್ಮ ಸಂಭಾಷಣೆಯಲ್ಲಿ ಹಲವಾರು ಟ್ವಿಸ್ಟ್‌ಗಳನ್ನು ನೀಡಿರುವಲ್ಲಿ ಯಶಸ್ವಿಯಾಗಿದ್ದಾರೆ.