ಚಿತ್ರ: ನಾರಿಯ ಸೀರೆ ಕದ್ದ ತಾರಾಗಣ: ರವಿಚಂದ್ರನ್, ನಿಖಿತಾ, ನವೀನ್ ಕೃಷ್ಣ, ಶಿವರಾಂ, ರೇಖಾದಾಸ್, ಹರ್ಷಿಕಾ ಪೂಣಚ್ಚ ನಿರ್ದೇಶನ: ಅಣ್ಣಯ್ಯ ಪಿ. ಸಂಗೀತ: ವಿ. ಮನೋಹರ್
ಕ್ರೇಜಿಸ್ಟಾರ್, ಕನ್ನಡದ ಕನಸುಗಾರ ರವಿಚಂದ್ರನ್ ಚಿತ್ರರಸಿಕರ ಮನದಂಗಳದಿಂದ ಮರೆಯಾಗಿರುವುದನ್ನು ಮತ್ತೊಮ್ಮೆ ಸಾರಿ ಹೇಳುವ ಚಿತ್ರವಿದು. ಸ್ವಾರಸ್ಯವೇ ಇಲ್ಲದ, ಲಾಜಿಕ್-ಮ್ಯಾಜಿಕ್ ಇಲ್ಲದ ಟೈಂಪಾಸ್ ಚಿತ್ರದ ಬಗ್ಗೆ ಮಾತನಾಡುವುದೇ ವ್ಯರ್ಥ ಅನ್ನುವಂತಿದೆ ಚಿತ್ರ.
ಗಮನ ಸೆಳೆಯುವ ಚಿತ್ರಕಥೆ ಅಥವಾ ನಿರೂಪನೆ ಮಾಡಲು ವಿಫಲರಾಗಿರುವುದು ನಿರ್ದೇಶಕ ಅಣ್ಣಯ್ಯ ಅವರ ಅನನುಭವವನ್ನು ಸಾರುತ್ತದೆ. 20 ವರ್ಷಗಳ ಹಿಂದಿನ ಕಥೆಯನ್ನು ಪ್ರಸ್ತುತ ಸಮಾಜಕ್ಕೆ ಹೊಂದಾಣಿಕೆಯಾಗುವಂತೆ ರೂಪಿಸುವಲ್ಲಿಯೂ ವಿಫಲರಾಗಿದ್ದಾರೆ.
'ನಾರಿಯ ಸೀರೆ ಕದ್ದ' ಎರಡು ಪ್ರೇಮಕಥೆಗಳನ್ನೊಳಗೊಂಡ ಚಿತ್ರ. ನಿಖಿತಾಗಂತೂ ಚಿತ್ರದುದ್ದಕ್ಕೂ ಸೀರೆಯನ್ನು ಸರಿಪಡಿಸಿಕೊಳ್ಳುವುದೇ ಕೆಲಸ. ಒಂದು ದೊಡ್ಡ ಶೋರೂಮ್‌ನಲ್ಲಿ ಇರದಷ್ಟು ಸೀರೆಗಳು ಚಿತ್ರದಲ್ಲಿವೆ. ಪ್ರತಿ ಬಾರಿಯೂ ಆಕೆಯ ಸೀರೆಯ ಆವಾಂತರ ಇದ್ದದ್ದೇ. ಆದರೆ ಇವೆಲ್ಲದರಿಂದ ಆಕೆಯನ್ನು ರಕ್ಷಿಸುವುದು ರವಿಚಂದ್ರನ್.
ಚಿತ್ರ ಆರಂಭವಾಗುವುದು ನಾಯಕಿ ರೇಖಾಳ (ನಿಖಿತಾ) 'ಸ್ತ್ರೀ ನಿವಾಸ'ದಿಂದ. ಆಕೆ, ಆಕೆಯ ಸಹೋದರ ವಿಜಯ್ (ನವೀನ್ ಕೃಷ್ಣ) ಮತ್ತು ಆಪ್ತ ಕಾರ್ಯದರ್ಶಿ ಪಾಯಿಂಟ್ ಪರಿಮಳ (ರೇಖಾ ದಾಸ್) ಏಕಾಂತ ಜೀವನ ಸಾಗಿಸುತ್ತಿರುವವರು. ಇಲ್ಲಿ ಹೊರಗಿನ ಯಾವುದೇ ಪುರುಷನಿಗೆ ಪ್ರವೇಶ ಇರುವುದಿಲ್ಲ. ಇದಕ್ಕೆ ಕಾರಣ ಸೆಕ್ಸೀ ಸೀರೆಗಳಲ್ಲಿ ಕಾಣಿಸಿಕೊಳ್ಳುವ ರೇಖಾ, ಆಕೆಯ ಪುರುಷ ದ್ವೇಷ.
ಮತ್ತೊಂದು ಪ್ರೇಮಕಥೆ ನವೀನ್ ಕೃಷ್ಣ-ಹರ್ಷಿಕಾ ಪೂಣಚ್ಚ ನಡುವಿನದ್ದು.
ಇಂತಹ ಹೊತ್ತಿನಲ್ಲಿ ಪರಿಸ್ಥಿತಿಯ ಕಾರಣದಿಂದ ಗೋಪಾಲ್ (ರವಿಚಂದ್ರನ್) ಮತ್ತು ಆತನ ಆಪ್ತ (ಬುಲ್ಲೆಟ್ ಪ್ರಕಾಶ್) ಸೆಕ್ಯುರಿಟಿಗಳಾಗಿ ವಿಗ್ ಧರಿಸಿ ವಿಚಿತ್ರ ರೂಪದಲ್ಲಿ ಬರುತ್ತಾರೆ. ಇವರನ್ನು ರೇಖಾ ಗುರುತು ಹಿಡಿಯಲು ಸಾಧ್ಯವಾಗಿರುವುದಿಲ್ಲ.
ರೇಖಾ ತನ್ನ ಹಳೆಯ ಪ್ರೇಮಕಥೆಯನ್ನು ಗೋಪಾಲನೊಂದಿಗೆ ಹಂಚಿಕೊಳ್ಳುತ್ತಾಳೆ. ತಾನು ಕೃಷ್ಣ ಎಂಬಾತನನ್ನು ಪ್ರೀತಿಸುತ್ತಿದ್ದೆ. ಆದರೆ ಮದುವೆ ಹೊತ್ತಿಗೆ ತಪ್ಪಿಸಿಕೊಂಡಿದ್ದ ಆತನನ್ನು ಅಸಮಾಧಾನಗೊಂಡು ತ್ಯಜಿಸಿದ್ದೆ. ಆದರೂ ಮರೆಯುವುದು ಸಾಧ್ಯವಾಗುತ್ತಿಲ್ಲ. ನೀನೇ ಸಹಾಯ ಮಾಡಬೇಕು ಎನ್ನುತ್ತಾಳೆ.
ಕೊನೆಗೆ ಗೋಪಾಲ ತಾನೇ ಕೃಷ್ಣ ಎಂದು ಹೇಳುತ್ತಾನೆ. ನಂತರ ಏನು ನಡೆಯುತ್ತದೆ ಎನ್ನುವುದನ್ನು ಚಿತ್ರಮಂದಿರದಲ್ಲೇ ನೋಡಬೇಕು.
ಕಪ್ಪು ಕನ್ನಡಕ ಮತ್ತು ಮಿತಿ ಮೀರಿದ ಮೇಕಪ್‌ನಿಂದಾಗಿ ವಿಚಿತ್ರವಾಗಿ ಕಂಡರೂ ರವಿಚಂದ್ರನ್ ಗಮನ ಸೆಳೆಯುತ್ತಾರೆ. ನವೀನ್ ಕೃಷ್ಣ, ರೇಖಾ ದಾಸ್ ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ನಿಖಿತಾ ಹತ್ತಾರು ಸೀರೆಗಳನ್ನು ಮೈ ಮೇಲೆ ಹರವಿಕೊಂಡು ಪಡ್ಡೆಗಳಿಗೆ ಹಬ್ಬವಾಗುತ್ತಾರೆ.
ನೀವು ರವಿಚಂದ್ರನ್ ಗತಕಾಲದ ಅಭಿಮಾನಿಯಾಗಿದ್ದರೆ ಚಿತ್ರಮಂದಿರದತ್ತ ಹೆಜ್ಜೆ ಹಾಕಬೇಕಾಗಿಲ್ಲ.