ಹಲವು ಸಮಯದಿಂದ ಬಿಡುಗಡೆಗೆ ಕಾಯುತ್ತಿದ್ದ ಚಿತ್ರ 'ಬಿಸಿಲೆ'. ಬಿಡುಗಡೆಯ ಮೊದಲೇ ಪ್ರಶಂಸೆ ಗಿಟ್ಟಿಸಿಕೊಂಡಿದ್ದ ಚಿತ್ರ ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಉಳಿಸಿಕೊಂಡಿರುವುದು ವಿಶೇಷ.
ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳುವ ಯುವಕ ವಿಕ್ಕಿ (ದಿಗಂತ್). ಆತನ ಧ್ಯಾನ ಪ್ರೀತಿಯ ಹುಡುಗಿ ಅನು (ಜೆನಿಫರ್) ಮಾತ್ರ. ಆದರೆ ಇದು ಏಕಮುಖ ಪ್ರೇಮ. ಮೊದಲ ನೋಟದಲ್ಲೇ ಅನು ಪ್ರೀತಿಗೆ ಬಿದ್ದಿದ್ದ ವಿಕ್ಕಿಗೆ ಅದ್ಯಾವ ಯತ್ನಕ್ಕೂ ಆಕೆ ಒಲಿದಿರುವುದಿಲ್ಲ. ಎಷ್ಟೇ ಸರ್ಕಸ್ ಮಾಡಿದರೂ ಸಫಲತೆ ಕಂಡಿರುವುದಿಲ್ಲ.
ಆದರೆ ಬಿಸಿಲೆ ಘಾಟಿಗೆ ಟ್ರೆಕ್ಕಿಂಗ್‌ಗೆಂದು ಹೋದ ಸಂದರ್ಭದಲ್ಲಿ ವಿಕ್ಕಿ ತನ್ನ ಪ್ರೀತಿಯನ್ನು ಮನದಟ್ಟು ಮಾಡುವ ಅತ್ಯುತ್ತಮ ಅವಕಾಶ ಪಡೆದುಕೊಳ್ಳುತ್ತಾನೆ. ಗುಂಪಿನಿಂದ ಬೇರ್ಪಟ್ಟಿದ್ದ ಅನುವಿಗೆ, ಅದೇ ಸ್ಥಿತಿಯಲ್ಲಿದ್ದ ವಿಕ್ಕಿ ಕಾಡಿನಲ್ಲಿ ಸಾಕಷ್ಟು ಸಹಾಯವನ್ನೂ ಮಾಡುತ್ತಾನೆ. ಆ ಮೂಲಕ ಪ್ರೀತಿಯನ್ನೂ ಗೆಲ್ಲುತ್ತಾನೆ.
ಇದಕ್ಕೆ ತಿರುವು ಲಭಿಸುವುದು ದಾರಿ ತಪ್ಪಿದವರು ಊರಿಗೆ ಮರಳಿದಾಗ. ಆಗಲೇ ಅನುವಿಗಾಗಿ ಸಮರ್ಥ ವರನೊಬ್ಬನನ್ನು ಆಕೆಯ ತಂದೆ ಹುಡುಕಿರುತ್ತಾರೆ. ವಿಕ್ಕಿ ಸಮಸ್ಯೆ ಎದುರಿಸುವುದು ಇಲ್ಲಿ. ಇದನ್ನು ಹೇಗೆ ನಿಭಾಯಿಸುತ್ತಾನೆ? ಕೊನೆಗೂ ಅನು-ವಿಕ್ಕಿ ಒಂದಾಗುತ್ತಾರಾ ಎನ್ನುವುದು ನಂತರದ ಕಥೆ.
ಸಾಕಷ್ಟು ವಿಳಂಬವಾಗಿ ತೆರೆಗೆ ಬಂದಿರುವ 'ಬಿಸಿಲೆ' ತಾಜಾತನದ ಕೊರತೆಯನ್ನು ಮೀರುವಲ್ಲಿ (ನಿರ್ದೇಶಕರು ಸಂದೀಪ್ ಗೌಡ) ಸಫಲತೆ ಕಂಡಿಲ್ಲ. ಮನೆ-ಮಂದಿಯನ್ನು ಗಮನದಲ್ಲಟ್ಟುಕೊಂಡು ಮಾಡಿರುವ ಚಿತ್ರದಲ್ಲಿನ ಹಾಸ್ಯಗಳು ಕೆಲವು ಕಡೆ ಹಾಸ್ಯಸ್ಪದಕ್ಕೆ ಎಡೆ ಮಾಡಿಕೊಟ್ಟಿವೆ. ಇಂತಹ ಕೆಲವು ಹುಳುಕುಗಳನ್ನು ಸರಿಪಡಿಸಿಕೊಂಡಿರುತ್ತಿದ್ದರೆ ಚಿತ್ರ ಇನ್ನಷ್ಟು ಸಹ್ಯವೆನಿಸುತ್ತಿತ್ತು.
ದಿಗಂತ್ ಮತ್ತು ಜೆನಿಫರ್ ಜೋಡಿ ಬೊಂಬಾಟ್. ಇಬ್ಬರೂ ಪಟ್ಟಿಗೆ ಬಿದ್ದವರಂತೆ ನಟಿಸಿದ್ದಾರೆ. ಅದರಲ್ಲೂ ದಿಗಂತ್ ತನ್ನ ಲವ್ವರ್ ಬಾಯ್ ಇಮೇಜ್ ಹೆಚ್ಚಿಸಿಕೊಳ್ಳಲು ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಯೋಗರಾಜ್ ಭಟ್ ಕ್ಯಾಂಪಿನ ಹೊರಗೂ ಅತ್ಯುತ್ತಮ ನಟನೆ ಸಾಧ್ಯವಿದೆ ಎಂದು ತೋರಿಸಿ ಕೊಟ್ಟಿದ್ದಾರೆ.
ಜೆನಿಫರ್‌ಗೆ ಸಿಕ್ಕಿರುವ ಅವಕಾಶದಲ್ಲಿ ಎದ್ದು ಕಾಣುವುದೆಂದರೆ ನಡೆದಾಡುವುದು, ನಗುವುದು ಮತ್ತು ಕುಣಿಯುವುದು. ಕೆಲವೇ ಸಂಭಾಷಣೆಗಳು ಆಕೆಗೆ ಸೀಮಿತವಾಗಿವೆ. ಆದರೆ ಅಷ್ಟರಲ್ಲೇ ತನ್ನ ಸಾಮರ್ಥ್ಯವನ್ನು ಮೆರೆದಿದ್ದಾರೆ.
ಕ್ಯಾಮರಾ ಕಣ್ಣು, ನೃತ್ಯ ನಿರ್ದೇಶನ, ಸಂಗೀತ (ಗಗನ್-ಹರಿ) ಕಥೆಯಲ್ಲಿನ ಹುಳುಕುಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತವೆ. ಮೈನಾ ಚಂದ್ರು, ದ್ವಾರಕೀಶ್, ಲಕ್ಷ್ಮಿ ದೇವಮ್ಮ, ಜೈ ಜಗದೀಶ್ ಗಮನ ಸೆಳೆಯುತ್ತಾರೆ.
ಒಟ್ಟಾರೆ ಬಿಸಿಲೆ ಯುವ ಜನತೆಯ ತುಡಿತಗಳನ್ನೊಳಗೊಂಡ ಚಿತ್ರ ಮತ್ತು ಎಲ್ಲಾ ವಯಸ್ಸಿನವರೂ ನೋಡಬಹುದಾದ ಚಿತ್ರ.