ಯಾರದೋ ನಿವೇಶನ, ಮತ್ಯಾರೋ ಬೇಲಿ ಹಾಕಿಕೊಂಡು ನಿಜವಾದ ಮಾಲೀಕರನ್ನೇ ಏಮಾರಿಸುವ ರಿಯಲ್ ಎಸ್ಟೇಟ್ ಉದ್ಯಮದ ಎಳೆಯ ಸುತ್ತ ಸುತ್ತುವ ಕಥೆ ರಾಮೇಗೌಡ ವರ್ಸಸ್ ಕೃಷ್ಣೇಗೌಡ. ಕೇವಲ ಹೆಸರಿನಲ್ಲಷ್ಟೇ ಗಿಮಿಕ್ ಮಾಡಿರುವ ಚಿತ್ರ ಪ್ರೇಕ್ಷಕರ ಇಚ್ಛೆಯನ್ನು ಪೂರ್ಣಗೊಳಿಸುವುದರಲ್ಲಿ ಸೋತಿದೆ. ಮೂಲತಃ ಹಿಂದಿ ಚಿತ್ರ 'ಖೋಸ್ಲಾ ಕಾ ಗೋಸ್ಲಾ' ಕನ್ನಡ ಅವತರಣಿಕೆ ಇದು.
ಈ ಸಾಮಾನ್ಯ ಎಳೆಯನ್ನಿಟ್ಟುಕೊಂಡು ಸರಿಯಾಗಿ ಪೋಣಿಸಲು ಸೋತಿರುವ ನಿರ್ದೇಶಕ ಟಿ.ಎನ್. ನಾಗೇಶ್ ಬರೀ ರೀಲ್ ಸುತ್ತಿದ್ದಾರೆ ಎನಿಸುತ್ತದೆ. ಚಿತ್ರ ಕೇವಲ ನಾಟಕೀಯ ಎನಿಸುತ್ತದೆ. ಕಥೆಯನ್ನು ಸರಿಯಾಗಿ ಪೋಣಿಸಲು ಸಾಧ್ಯವಾಗದೆ ಸೊರಗಿದಂತಿದೆ.
ಮಗಳು ವೇದ (ರೂಪಶ್ರೀ) ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ತನ್ನ ನಿವೇಶನ ಮಾರಲು ಹೋಗುವ ಸುಬ್ಬಣ್ಣನಿಗೆ (ಅನಂತ್‌ನಾಗ್) ತನ್ನ ಜಾಗವನ್ನು ಬೇರೋಬ್ಬರು ಆಕ್ರಮಿಸಿರುವ ಸಂಗತಿ ತಿಳಿದು ಕಂಗಾಲಾಗುತ್ತಾನೆ. ತನ್ನ ಜಾಗವನ್ನು ಪಡೆಯಲು ಮನೆಯ ಮಗನಂತಿರುವ ಸಿದ್ದು (ರೂಪೇಶ್) ಜತೆಗೂಡಿ ಹಲವು ಕಸರತ್ತು ನಡೆಸುತ್ತಾನೆ. ಆದರೆ, ಯಾವುದೂ ಈಡೇರುವುದಿಲ್ಲ ಎಂದು ತಿಳಿದು ಕೈಕಟ್ಟಿ ಕೂರುತ್ತಾನೆ.
ಅಮಾಯಕ ಸುಬ್ಬಣ್ಣನ ನೆರವಿಗೆ ರಾಮೇಗೌಡ (ಶಶಿಕುಮಾರ್) ಬರುತ್ತಾನೆ. ಅಮಾಯಕ ಜನರ ನಿವೇಶನಗಳಿಗೆ ಬೇಲಿ ಹಾಕಿಕೊಂಡು ಯಾಮಾರಿಸುವ ಕೃಷ್ಣರೆಡ್ಡಿ (ರಂಗಾಯಣ ರಘು) ಆತನ ಸಮಸ್ಯೆಗಳನ್ನು ಅರಿತು ಯಾಮಾರಿಸುವುದೇ ಚಿತ್ರದ ತಿರುಳು.
ಚಿತ್ರದ ಕಥೆ, ಚಿತ್ರಕಥೆ, ನಿರೂಪಣೆಯಲ್ಲಿ ಬಹಳವಾಗಿ ಸೊರಗಿದ್ದಾರೆ ನಿರ್ದೇಶಕ ಟಿ.ಎನ್. ನಾಗೇಶ್. ಅನಂತ್‌ನಾಗ್ ಅಮಾಯಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಂಗಾಯಣ ರಘು ಪಾತ್ರಕ್ಕೆ ಬೇಕಿರುವುದಕ್ಕಿಂತ ಕೊಂಚ ಜಾಸ್ತಿಯಾಗಿ ನಟಿಸಿ ಎಡವಿದ್ದಾರೆ. ಶಶಿಕುಮಾರ್ ಪಾತ್ರದಲ್ಲಿ ಲವಲವಿಕೆ ಕಂಡುಬಂದಿದೆ.
ಜೈ ಆನಂದ್ ಛಾಯಾಗ್ರಹಣ, ನರಹಳ್ಳಿ ಜ್ಞಾನೇಶ್ ಅವರ ಸಂಕಲನ ಚಿತ್ರಕ್ಕಿದೆ.