ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ಮೈಲಾರಿ ವಿಮರ್ಶೆ; ಎಡವಿದ ಚಂದ್ರು, ಶಿವಣ್ಣ ಸೂಪರ್ (Mylari review | Mylari | R Chandru | Shivaraj Kumar)
ಸಿನಿಮಾ ವಿಮರ್ಶೆ
Bookmark and Share Feedback Print
 
PR
ಚಿತ್ರ: ಮೈಲಾರಿ
ತಾರಾಗಣ: ಶಿವರಾಜ್ ಕುಮಾರ್, ಸದಾ, ಸಂಜನಾ
ನಿರ್ದೇಶನ: ಆರ್. ಚಂದ್ರು
ಸಂಗೀತ: ಗುರುಕಿರಣ್

ಭಾರೀ ಕುತೂಹಲ ಕೆರಳಿಸಿದ್ದ 'ಮೈಲಾರಿ' ನಿರೀಕ್ಷೆಗಳನ್ನು ಮುಟ್ಟಿಲ್ಲ. ನಿರ್ದೇಶಕ ಆರ್. ಚಂದ್ರು ಮ್ಯಾಜಿಕ್ ವಿಫಲವಾಗಿದೆ. ಆದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವೆಲ್ಲವನ್ನೂ ಮೀರಿಸುವ ಪ್ರದರ್ಶನ ತೋರಿಸಿದ್ದಾರೆ. ಆ ಮಟ್ಟಿಗೆ ಇದು ಚಂದ್ರು ಸಿನಿಮಾವಲ್ಲ, ಶಿವಣ್ಣನ ಸಿನಿಮಾ!

ನಿರ್ದೇಶಕರು ಹೊಸೆದಿರುವ ಚಿತ್ರಕಥೆಯೇ ಹಲವು ಕಡೆ ಹಾಸ್ಯಾಸ್ಪದ. ಸಾಕಷ್ಟು ಅನಗತ್ಯ ದೃಶ್ಯಗಳನ್ನು ತುರುಕಲಾಗಿರುವುದು, ಶಿವಣ್ಣನನ್ನು ಬಳಸಿಕೊಂಡಿರುವ ರೀತಿ, ವಾಸ್ತವತೆಯನ್ನು ಬದಿಗೊತ್ತಿ ಏನೋ ಹೇಳಲು ಹೊರಟಿರುವುದು ಚಂದ್ರು ಅವರು ಇನ್ನೂ ಕಲಿಯಲು ತುಂಬಾ ಇದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ.

ಶಿವರಾಜ್ ಅವರಂತಹ ಅಪರಂಜಿಯನ್ನು ನಿರ್ದೇಶಕ ಚಂದ್ರು ಸಮರ್ಪಕವಾಗಿ ಬಳಸಿಕೊಂಡಿಲ್ಲ ಮತ್ತು ಬಳಸಿಕೊಂಡ ರೀತಿಯೂ ಅಭಿಮಾನಿಗಳಿಗೆ ಪಥ್ಯವಾಗುವ ರೀತಿಯಲ್ಲಿಲ್ಲ ಎನ್ನುವುದು ನಿರ್ವಿವಾದ.

ನಿರೀಕ್ಷೆಯಂತೆ ಶಿವರಾಜ್ ಕುಮಾರ್ ಇಲ್ಲಿ ಹಳ್ಳಿ ಹುಡುಗ. ಆದರೆ ಪ್ರತಿಭಾವಂತ. ಕೋಪಿಷ್ಠ. ನಾಯಕನ ಜೀವನವೇ ಒಂದು ದುರಂತ ಎಂಬ ರೀತಿಯಲ್ಲಿ ಚಿತ್ರಿಸಲಾಗಿದೆ.

ಮೈಲಾಪುರ ಗ್ರಾಮದ ಮೈಲಾರಿ (ಶಿವಣ್ಣ) ಸಿಟ್ಟಿನಲ್ಲಿ ವಿಶ್ವಾಮಿತ್ರ. ಅದು ತಂದೆಯಿಂದ ಬಂದ ಬಳುವಳಿ. ತನ್ನ ಪ್ರೀತಿಯ ಹುಡುಗಿ ಅನಿತಾ (ಸದಾ) ಹಿಂದೆ ಬಿದ್ದು ತಂದೆಯನ್ನೂ ಎದುರು ಹಾಕಿಕೊಂಡು ಊರನ್ನೇ ಬಿಡಬೇಕಾದ ಅನಿವಾರ್ಯತೆ ಮೈಲಾರಿಗೆ.

ದಿಕ್ಕೆಡದೆ ತಂದೆಗೇ ಸವಾಲು ಹಾಕುತ್ತಾನೆ ಮೈಲಾರಿ. ಒಂದಲ್ಲ ಒಂದು ದಿನ ನಿನ್ನನ್ನೂ ಮೀರಿಸುವ ವ್ಯಕ್ತಿಯಾಗಿ ಬೆಳೆಯುತ್ತೇನೆ. ಆಗ ಮರಳುತ್ತೇನೆ ಎಂದು ಬೆಂಗಳೂರು ಸೇರಿಕೊಳ್ಳುತ್ತಾನೆ.

ಅಲ್ಲಿ ಪತ್ರಿಕೆಯೊಂದಕ್ಕೆ ಸೇರಿಕೊಂಡು ತನ್ನ ಹರಿತವಾದ ಲೇಖನಿಯಿಂದ ಹಲವರನ್ನು ತಿವಿಯುತ್ತಾನೆ. ಇದು ರಾಜ್ಯದ ಪ್ರತಿಪಕ್ಷದ ನಾಯಕನಿಗೆ ನುಂಗಲಾರದ ತುತ್ತಾಗುತ್ತದೆ. ಹಲವು ಹೆಣಗಳು ಈ ನಡುವೆ ಬಿದ್ದು ಹೋಗುತ್ತವೆ. ಸೇಡಿಗೆ ಬಿದ್ದ ಮೈಲಾರಿ ಪ್ರತಿಪಕ್ಷದ ನಾಯಕನನ್ನು ಹಾಡು ಹಗಲೇ ಕೊಂದು ಹಾಕುತ್ತಾನೆ. ತಪ್ಪಿತಸ್ಥನೆಂದು ಸಾಬೀತಾಗಿ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನೂ ಪ್ರಕಟಿಸುತ್ತದೆ.
PR

ನಿಜಕ್ಕೂ ಮೈಲಾರಿಗೆ ಗಲ್ಲು ಶಿಕ್ಷೆ ಕೊಡಲಾಗುತ್ತದೆಯೇ? ತನ್ನ ಪ್ರೀತಿಯ ಅನಿತಾ ಏನಾಗುತ್ತಾಳೆ? ತಂದೆಗೆ ಹಾಕಿದ್ದ ಸವಾಲಿನ ಕಥೆಯೇನು ಎಂಬುದು ಉಳಿದ ಕಥೆ.

ಮೊದಲನೆಯದಾಗಿ ಇಂತಹ ಕಥೆಯೇ ಶಿವಣ್ಣನಿಗೆ ಹೊಸತಲ್ಲ. ಈಗಾಗಲೇ ಸಾಕಷ್ಟು ಕೋಪಿಷ್ಠ ಹಳ್ಳಿಗನ ಪಾತ್ರಗಳಲ್ಲಿ ಅವರು ಮಿಂಚಿದ್ದಾರೆ. ಹಲವು ಕಡೆ ನಿರೀಕ್ಷಿತ ದೃಶ್ಯಗಳು ಅಪ್ಪಳಿಸಿ, ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಲಾಗಿದೆ.

ವಿಪಕ್ಷದ ನಾಯಕ ಜನತಾ ದರ್ಶನ ನಡೆಸುವುದು, ಪೊಲೀಸ್ ಇಲಾಖೆಗೆ ಆದೇಶಗಳನ್ನು ನೀಡುವುದು, ಆತನನ್ನು ಮೈಲಾರಿ ಹಾಡು ಹಗಲೇ ತರಿದು ಹಾಕುವುದಂತೂ ತೀರಾ ಹಾಸ್ಯಾಸ್ಪದ.

ಶಿವಣ್ಣನ ನಟನೆ ಬಗ್ಗೆ ಎರಡು ಮಾತಿಲ್ಲ. ಅದು ಸೆಂಟಿಮೆಂಟ್ ಇರಲಿ, ಆಕ್ಷನ್ ಇರಲಿ ಅಥವಾ ಡ್ಯಾನ್ಸ್ ಇರಲಿ -- ಎಲ್ಲದ್ದಕ್ಕೂ ಫುಲ್ ಮಾರ್ಕ್ಸ್. ನಾಯಕಿ ಸದಾ ಅಷ್ಟಕ್ಕಷ್ಟೇ. ಅವರನ್ನು ಚಂದ್ರು ಚಿತ್ರಕ್ಕೆ ಒಗ್ಗಿಸಿಕೊಂಡಿಲ್ಲ.

ಸುಚೇಂದ್ರ ಪ್ರಸಾದ್, ರವಿ ಕಾಳೆ, ಸುರೇಶ್ ಮಂಗಳೂರು ಅವರನ್ನು ಭೇಷ್ ಅನ್ನುವಂತಿಲ್ಲ. ಆದರೆ ಮೈಲಾರಿಯ ತಮ್ಮನಾಗಿ ಕಾಣಿಸಿಕೊಂಡಿರುವ ಯಶಸ್‌ರದ್ದು ಅದ್ಭುತ ನಟನೆ. ಸಂಜನಾ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡು ಮಾಯವಾಗುತ್ತಾರೆ.

ಚಂದ್ರಶೇಖರ್ ಛಾಯಾಗ್ರಹಣ ಬೊಂಬಾಟ್. ಗುರುಕಿರಣ್ ಸಂಗೀತದಲ್ಲಿನ, ಅದರಲ್ಲೂ ಮೈಲಾಪುರ ಮೈಲಾರಿ ಎನ್ನುವ ಹಾಡಂತೂ ಹುಚ್ಚೆಬ್ಬಿ ಕುಣಿಸುತ್ತದೆ. ಉಳಿದ ಹಾಡುಗಳೂ ಸೂಪರ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೈಲಾರಿ ವಿಮರ್ಶೆ, ಮೈಲಾರಿ, ಆರ್ ಚಂದ್ರು, ಶಿವರಾಜ್ ಕುಮಾರ್