ಚಿತ್ರ: ಮೊದಲಾ ಸಲ ತಾರಾಗಣ: ಯಶ್, ಭಾಮಾ, ತಾರಾ, ರಂಗಾಯಣ ರಘು ನಿರ್ದೇಶಕ: ಪುರುಷೋತ್ತಮ್ ಸಂಗೀತ: ವಿ. ಹರಿಕೃಷ್ಣ
'ಮೊದಲಾ ಸಲ' ಹೆಸರಿನಂತೆ ನಿರ್ದೇಶಕ ಪುರುಷೋತ್ತಮ್ ಕೂಡ ಪ್ರಥಮ ಬಾರಿಗೆ ಸಂಪೂರ್ಣ ನಿರ್ದೇಶಕನಾಗಿ ಮಾಡಿದ ಚಿತ್ರವಿದು. ಹಾಗಂತ ಚಿತ್ರರಂಗದ ಪರಿಚಯವಿಲ್ಲದವರಲ್ಲ. ಎಸ್. ಮಹೇಂದರ್ ಅವರ ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದವರು. ಹಾಗಾಗಿ ಅವರು ಹೊಸಬರು ಎನ್ನುವುದು ಸಮಸ್ಯೆಯಾಗಿಲ್ಲ, ಬದಲಿಗೆ ಭಿನ್ನತೆಯ ಅನುಭವವಾಗುತ್ತದೆ.
ಮೊದಲಾ ಸಲ ಒಂದು ನವಿರಾದ ಪ್ರೇಮ ಕಥೆ. ಅದನ್ನು ಎಳೆ ಎಳೆಯಾಗಿ ಪ್ರೇಕ್ಷಕರಿಗೆ ಉಣ ಬಡಿಸಲಾಗಿದೆ. ಇದಕ್ಕೆ ಎಚ್.ಸಿ. ವೇಣು ಅವರ ಅದ್ಬುತ ಛಾಯಾಗ್ರಹಣದ್ದು ಅತ್ಯುತ್ತಮ ಸಾಥ್. ನಿರ್ದೇಶಕರ ಚುರುಕಾದ, ತಾಂತ್ರಿಕ ನಿರೂಪಣೆಯಿಂದ ಒಂದು ರೀತಿಯಲ್ಲಿ ಸಾಮಾನ್ಯ ಚಿತ್ರವೊಂದು ಗಮನ ಸೆಳೆಯುತ್ತದೆ.
ಚಿತ್ರದ ಹೈಲೈಟ್ಸ್ ಹೊರಾಂಗಣ ಚಿತ್ರೀಕರಣ. ಕನ್ನಡ ನಾಡಿನ ಸೊಬಗನ್ನು ಉತ್ತಮವಾಗಿ ಸೆರೆ ಹಿಡಿದಿದ್ದಾರೆ ವೇಣು. ಉದ್ಯಮಿ (ಅವಿನಾಶ್) ಅವರ ಮಗನಾದ ಕಾರ್ತಿಕ್ (ಯಶ್) ತಾಯಿಯ ವಾರ್ಷಿಕ ತಿಥಿ ಕಾರ್ಯಗಳನ್ನು ಮಾಡುವುದಕ್ಕೆ ತನ್ನ ಕೊಡಗಿನ ಎಸ್ಟೇಟಿಗೆ ಬಂದಾಗ ಅಲ್ಲಿ ಅದೇ ಊರಿನ ನಾಯಕಿ (ಭಾಮಾ)ಳೊಂದಿಗೆ ಪ್ರೇಮಕ್ಕೆ ಸಿಲುಕುತ್ತಾನೆ.
ಅಪ್ಪ-ಅಮ್ಮನನ್ನು ಭಿನ್ನ ಆಂಗಲಿನಲ್ಲಿ ತೋರಿಸುವ ಚಿತ್ರವಿದು. ತನ್ನ ಪ್ರೀತಿ ಬಗ್ಗೆ ಹೆತ್ತವರ ಜತೆ ಮಗಳು ಕೇಳಿ ಅಚ್ಚರಿ ಹುಟ್ಟಿಸುತ್ತಾಳೆ. ಅನೇಕ ತಿರುವುಗಳನ್ನೊಳಗೊಂಡ ಕಥೆ ಕೊನೆಯವರೆಗೂ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಜಾ ನೀಡುತ್ತಾ ಸಾಗುತ್ತದೆ.
ನಾಯಕ ಯಶ್ ಚುರುಕಿನಿಂದ ಅಭಿನಯಿಸಿರುವುದು ಮಾತ್ರವಲ್ಲ, ರಾಕಿಂಗ್ ಸ್ಟಾರ್ ಆಗಿದ್ದಾರೆ. ಸ್ಯಾಂಡಲ್‌ವುಡ್‌ಗೆ ಬಂದಿರುವ ಕೇರಳದ ಹುಡುಗಿ ಭಾಮಾ ಸೈ ಎನಿಸಿಕೊಂಡಿದ್ದಾರೆ. ನಾಯಕಿ ತಂದೆಯಾಗಿರುವ ರಂಗಾಯಣ ರಘು ಕೊಂಚ ಭಿನ್ನ.
ಸಂಗೀತ ನಿರ್ದೇಶಕ ಹರಿಕೃಷ್ಣರದ್ದು ಮತ್ತೊಂದು ಹೆಜ್ಜೆ. ಉಳಿದ ಕಲಾವಿದರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆ 'ಮೊದಲಾ ಸಲ' ಸಕ್ಸಸ್ ಸೂತ್ರಗಳನ್ನು ಹರಿದರೂ ಸಕ್ಸಸ್ ಕಾಣುವ ಮತ್ತು ಕಾಣಬೇಕಾದ ಚಿತ್ರ.