ವಾರೆವ್ಹಾ ಚಿತ್ರವಿಮರ್ಶೆ; ಅಪರೂಪದ ಕಥೆಗೆ ಸುಮ್ಮನೆ ನಕ್ಕುಬಿಡಿ
MOKSHA
ಚಿತ್ರ: ವಾರೆವ್ಹಾ ನಿರ್ದೇಶನ: ವಿಜಯಲಕ್ಷ್ಮಿ ಸಿಂಗ್ ತಾರಾಗಣ: ಕೋಮಲ್ ಕುಮಾರ್, ಭಾವನ ರಾವ್
ಲಾಜಿಕ್ಕಿಲ್ಲದೆ ನಕ್ಕು ಬಿಡುವವರಿಗೆ ಹೇಳಿ ಮಾಡಿಸಿದ ಚಿತ್ರ ವಾರೆವ್ಹಾ...! ಪೂರ್ಣ ಪ್ರಮಾಣದ ನಾಯಕನಾಗಿ ಕೋಮಲ್ ನಟಿಸಿರುವ ಈ ಚಿತ್ರದಲ್ಲಿ ಮಹಿಳೆಯ ಮನಸ್ಸನ್ನು ಅರಿತುಕೊಂಡು ಪೀಡನೆಗೊಳಗಾಗುವ ಬಲಿಪಶು ಅವರು.
ಕೆಲವರ ಪ್ರಕಾರ ಸಿನಿಮಾ ಬೊಂಬಾಟ್. ಇನ್ನು ಕೆಲವರ ಪ್ರಕಾರ ಅಷ್ಟಕಷ್ಟೇ. ಒಟ್ಟಾರೆ ಚಿತ್ರಮಂದಿರದಲ್ಲಿ ನಗು ಉಕ್ಕಿಸಿರುವುದಂತೂ ಹೌದು.
ಮನೆ, ಕಚೇರಿ, ಬಸ್ಸು ಎಲ್ಲಾ ಕಡೆ ಮಹಿಳೆಯರಿಂದ ತೊಂದರೆಯಾಗುತ್ತಿದೆ ಎಂದು ಭಾವಿಸುವ ಅದೀಶ್ ದೇಶಪಾಂಡೆಗೆ (ಕೋಮಲ್) ಮಹಿಳೆಯರೆಂದರೆ ಆಗದು. ತಾಯಿಯ ಒತ್ತಡಕ್ಕೆ ಮಣಿದು ವಿವಾಹವಾಗುತ್ತಾನೆ. ಗ್ರಾಮ ದೇವತೆ ವರದಿಂದ ಹೆಂಗಸರ ಮನಸ್ಸಿನ ಮಾತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಪಡೆಯುತ್ತಾನೆ.
ಆದರೆ, ಅದರಿಂದ ಮುಂದೆ ಹೇಗೆ ಮಹಿಳೆಯರ ಪರ ನಿಲುವು ಬೆಳೆಸಿಕೊಳ್ಳುತ್ತಾನೆ ಎನ್ನುವುದು ಕಥೆ. ಇಲ್ಲಿ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಆಂಗ್ಲ ಚಿತ್ರವೊಂದರ ಸ್ಫೂರ್ತಿ ಪಡೆದುಕೊಂಡಿದ್ದಾರೆ. ಅದನ್ನು ಕನ್ನಡೀಕರಿಸಿದ್ದಾರೆ. ಪ್ರೇಕ್ಷಕರನ್ನು ನಗಿಸಲು ಏನೇನು ಬೇಕೋ, ಅದನ್ನೆಲ್ಲ ತುರುಕಿ ಯಶಸ್ವಿಯಾಗಿದ್ದಾರೆ.
ಚಿತ್ರದಲ್ಲಿ ಲವಲವಿಕೆ ತುಂಬಿರುವುದು ವಿಶೇಷ. ಹಾಸ್ಯಪ್ರಧಾನ ಚಿತ್ರಗಳಲ್ಲಿ ಅದಿಲ್ಲದೇ ಹೋದರೆ ಸಪ್ಪೆಯಾಗಿರುತ್ತದೆ. ಲವಲವಿಕೆಗೆ ಕೋಮಲ್ ಸೇರಿಕೊಂಡಾಗಲಂತೂ ಪ್ರೇಕ್ಷಕರಿಗೆ ನಗಲು ಸರಕು ಸಿಕ್ಕಿದಂತಾಗುತ್ತದೆ. ಆ ನಿಟ್ಟಿನಲ್ಲಿ ಯಾವ ರೀತಿಯಿಂದಲೂ ಮೋಸವಾಗದು.
ಕೋಮಲ್ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಪಾತ್ರವನ್ನು ಅವರು ಅನುಭವಿಸಿದ್ದಾರೆ. ಗಾಳಿಪಟದ ಚಿನಕುರುಳಿ ಭಾವನಾ ರಾವ್‌ಗೆ ಹೇಳಿದ ಪಾತ್ರವಲ್ಲ. ಉಳಿದವರದ್ದು ಅಷ್ಟಕಷ್ಟೇ.