ಶ್ರೀ ನಾಗಶಕ್ತಿ ವಿಮರ್ಶೆ: ಭಕ್ತಿ ಪ್ರಧಾನ, ತಂತ್ರಜ್ಞಾನ ನಿಧಾನ
ಚಿತ್ರ: ಶ್ರೀ ನಾಗಶಕ್ತಿ ತಾರಾಗಣ: ರಾಮ್‌ಕುಮಾರ್, ಶ್ರುತಿ, ಚಂದ್ರಿಕಾ, ರಮೇಶ್ ಭಟ್ ನಿರ್ದೇಶನ: ಓಂ ಸಾಯಿ ಪ್ರಕಾಶ್ ಸಂಗೀತ: ಗಣೇಶ್ ನಾರಾಯಣ್
ಧರ್ಮ, ದೈವ, ಭಕ್ತಿ, ಶಕ್ತಿ, ಪರಂಪರೆ, ಸಂಸ್ಕೃತಿಗೆ ಒತ್ತು ನೀಡುವ ನಾಡಿನಲ್ಲಿ ದೈವಶಕ್ತಿ ಬಗ್ಗೆ ಅಷ್ಟೇ ಶ್ರದ್ದೆ, ಭಯ ಹಾಗೂ ಭಕ್ತಿ ಜಾಸ್ತಿ. ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದ್ದರೂ ಸಹ ಭಯ-ಭಕ್ತಿಯೂ ಜೊತೆ ಜೊತೆಗೆ ಮುಂದುವರಿಯುತ್ತಿದೆ.
ಇದಕ್ಕೆ ಉದಾಹರಣೆ ಎಂಬಂತಿದೆ ಶುಕ್ರವಾರ ಬಿಡುಗಡೆಯಾದ 'ಶ್ರೀನಾಗಶಕ್ತಿ'. ಆಧುನಿಕ ಯುಗದಲ್ಲಿ ಶ್ರೀಸಾಮಾನ್ಯರು ಮಾತ್ರವಲ್ಲ ಸಚಿನ್ ತೆಂಡೂಲ್ಕರ್, ಅಮಿತಾಬ್ ಬಚ್ಚನ್, ರಿಲಯನ್ಸ್ ದೊರೆಗಳು ಸೇರಿದಂತೆ ಸಮಾಜದ ಮಹಾನ್ ಶಕ್ತಿಗಳೇ ಸರ್ಪದೋಷದ ನಿವಾರಣೆಗೆ ಕುಕ್ಕೆ ಸುಬ್ರಹ್ಮಣ್ಯದಂತಹ ಕ್ಷೇತ್ರಗಳಿಗೆ ಬಂದು ಪೂಜಾ ಕೈಂಕರ್ಯಗಳನ್ನು ಮಾಡಿಸಿರುವುದು ತಿಳಿದ ಸಂಗತಿ.
ಅಂಥಹುದರಲ್ಲಿ ನಿರ್ದೇಶಕ ಓಂ ಸಾಯಿಪ್ರಕಾಶ್ ಈ ಹಾದಿಯಲ್ಲಿ ಚಿತ್ರ ಮಾಡಿರುವುದರಲ್ಲಿ ವಿಶೇಷವೆನಿಲ್ಲ. ಚಿತ್ರದ ನಿರೂಪಣೆಯೂ ಇದೇ ರೀತಿಯಲ್ಲಿ ಸಾಗಿದೆ. ಚಿಕ್ಕ ಹುಡುಗಿಯ ಮೇಲೆ ಸರ್ಪಕಲೆ ಆವರಿಸುವುದು (ಸರ್ಪದೋಷ) ನೋಡುಗರಲ್ಲಿ ಭಯ ಹುಟ್ಟಿಸುತ್ತದೆ. ಇಷ್ಟಕ್ಕೂ ಆ ಪುಟ್ಟ ಬಾಲೆ ಸರ್ಪಕ್ಕೆ ಯಾವುದೇ ಹಾನಿ ಮಾಡಿರುವುದಿಲ್ಲ. ಬದಲಿಗೆ ಅರಿಶಿನ ಪುಡಿ ಹಾಕಿ ಗಾಯಗೊಂಡ ಹಾವಿಗೆ ರಕ್ಷಿಸಿರುತ್ತಾಳೆ. ಒಳ್ಳೆಯದನ್ನೇ ಮಾಡಿರುತ್ತಾಳೆ. ಯಾರದೋ ತಪ್ಪು ಯಾರಿಗೋ ಗಾಯ ಎಂಬಂತೆ ಈ ಹುಡುಗಿಗೆ ಸರ್ಪದೋಷ ಆವರಿಸುತ್ತದೆ.
PR
ಹಳ್ಳಿ ಪರಿಸರದಲ್ಲಿ ನಾಗದೇವತೆಗೆ ಮೀಸಲಾದ ಜಾಗವಿರುತ್ತದೆ. ಅದನ್ನು ಯಾರೂ ಬಳಸಬಾರದು, ಆಕಸ್ಮಾತ್ ಬಳಸಿದರೂ ಯಾವುದೆ ಸರ್ಪಕ್ಕೆ ಹಾನಿಯಾಗಬಾರದು ಎಂಬ ನಿಯಮವನ್ನು ನಾಗರಾಜ ವಿಧಿಸಿರುತ್ತಾನೆ. ಆ ಜಾಗದಲ್ಲಿ ವ್ರತ, ಜಪ, ತಪ ಮಾಡಿಕೊಂಡು ನಾಗಣ್ಣ ಇರುತ್ತಾನೆ. ಆತ ಬ್ರಹ್ಮಚಾರಿ ದೇವರಿಗೆ ಮೀಸಲು. ಅವರ ಸಹೋದರ ಶೇಷಣ್ಣ. ಅವನ ಮಡದಿ ನಾಗರತ್ನ, ಸುಪುತ್ರಿ ನಾಗಸುಂದರಿ- ಹೀಗೆ ಇಡೀ ಪರಿವಾರವೇ ನಾಗ ಕುಟುಂಬದಲ್ಲಿರುವಾಗ ನಾಗಣ್ಣನ ವ್ರತಭಂಗವಾಗಿ ನಾಗಶಕ್ತಿ ಆತನನ್ನು ಕಚ್ಚಿ ಸಾಯಿಸಿಬಿಡುವುದರಿಂದ ಸಹೋದರನ ಕೋಪಕ್ಕೆ ಬಲಿಯಾಗುತ್ತದೆ. ಶೇಷಣ್ಣ ಕೆಡವಿದ ಹುತ್ತದಿಂದ ನಾಗದೇವತೆ ಕುಪಿತಳಾಗುತ್ತಾಳೆ.
ಆದರೆ, ನಾಗಚಂದ್ರಿಕೆ ಎಂಬ ಸರ್ಪ ಇವರ ಬೆಂಗಾವಲಾಗಿ ನಿಂತು ಶೇಷಣ್ಣನ ಕುಟುಂಬವನ್ನು ಕಾಪಾಡಿ ಹಾವಿನ ಜೊತೆ ಸಂಧಾನ ನಡೆಸುತ್ತದೆ. ಶೇಷಣ್ಣ ಪ್ರಾಯಶ್ಚಿತ್ತದಿಂದಾಗಿ ಸಿನಿಮಾ ಪ್ರೇಕ್ಷಕರಿಗೆ, ಘಾಟಿ ಸುಬ್ರಹ್ಮಣ್ಯ, ವಿದುರಾಶ್ವತ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳ ದರ್ಶನವಾಗುತ್ತದೆ.
ಆಧುನಿಕ ಜಗತ್ತು ಏನೇ ಹೇಳಿದರೂ ಸಾಯಿಪ್ರಕಾಶ್ ಮಾತ್ರ ತಮ್ಮ ಶೈಲಿಯನ್ನು ಹೇಳುತ್ತಾ ಹೋಗಿದ್ದಾರೆ. ಎಲ್ಲ ಚಿತ್ರಗಳಂತೆ ನಟಿ ಶ್ರುತಿ ಅಂತಿಮ ದೃಶ್ಯಗಳಲ್ಲಿ ಹಾವನ್ನು ಹಿಂಬಾಲಿಸಿ ವರ ಬೇಡುವ ದೃಶ್ಯಗಳು ಇಲ್ಲಿವೆ.
ಬಹಳ ವರ್ಷಗಳ ನಂತರ ಬೆಳ್ಳಿಪರದೆ ಮೇಲೆ ಮತ್ತೆ ಕಾಣಿಸಿಕೊಂಡಿರುವ ರಾಮ್‌ಕುಮಾರ್ ಉತ್ತಮ ಅಭಿನಯ ನೀಡಿದ್ದಾರೆ. ಶ್ರುತಿಯದು ಸಹಜ ಅಭಿನಯ. ಶಿವಕುಮಾರ್ ಅವರಿಂದ ಹೇಳುವಂತಹ ನಟನೆ ಬಂದಿಲ್ಲ. ಟೆನ್ನಿಸ್ ಕೃಷ್ಣ, ರಮೇಶ್ ಭಟ್, ಗೋಟೂರಿ ಮಾಮೂಲಿನಂತೆ ಬಂದು ಹೋಗುತ್ತಾರೆ.
ಇಂದಿನ ತಂತ್ರಜ್ಞಾನಕ್ಕೆ ಸಾಯಿಪ್ರಕಾಶ್ ಇನ್ನೂ ಒಗ್ಗಿಕೊಂಡಿಲ್ಲ ಎನ್ನುವುದಕ್ಕೆ ಓಂ ನಾಗಶಕ್ತಿಯೇ ಸಾಕ್ಷಿ. ಶ್ರೀಗಣೇಶ್ (ಗಣೇಶ್ ನಾರಾಯಣ್) ಸಂಗೀತ ಸಮಾಧಾನಕರ. ಸಿ. ನಾರಾಯಣ್ ಛಾಯಾಗ್ರಹಣದಲ್ಲಿ ವಿಶೇಷತೆ ಕಂಡುಬಂದಿಲ್ಲ.
ಇಷ್ಟೆಲ್ಲದರ ಹೊರತಾಗಿಯೂ ಚಿತ್ರವನ್ನು ಒಮ್ಮೆ ನೋಡಬಹುದು. ಭಕ್ತಿ ಪ್ರಧಾನವೆನಿಸಿದಾಗ ತಂತ್ರಜ್ಞಾನ ಒಂದಿಷ್ಟು ಹೆಚ್ಚು ಬಳಕೆಯಾದರೆ ನೋಡುಗರಿಗೆ ಆನಂದ. ಜತೆಗೆ ನಿರ್ಮಾಪಕರಿಗೆ ಕೂಡ!