ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » 5 ಈಡಿಯೆಟ್ಸ್ ಚಿತ್ರ ವಿಮರ್ಶೆ; ಪ್ರೇಕ್ಷಕರೇ ಮೂರ್ಖರು (5 Idiots | Master Anand | Kannada film | Harshika Poonaccha)
PR
ಹಾಸ್ಯ ಚಿತ್ರವೆಂಬ ಹಣೆಪಟ್ಟಿಯೊಂದಿಗೆ ತೆರೆಗೆ ಬಂದಿರುವ '5 ಈಡಿಯಟ್ಸ್' ಪರಿಪೂರ್ಣ ಹಾಸ್ಯ ರಸಾಯನ ನೀಡೀತೆಂಬ ನಿರೀಕ್ಷೆ ಹೊತ್ತು ಹೋದವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.

ಸಿನೆಮಾ ಎಂದ ಮೇಲೆ ಹಾಸ್ಯ, ಆಕ್ಷನ್, ಪ್ರೀತಿ ಸಹಜ. '5 ಈಡಿಯಟ್ಸ್'ನಲ್ಲಿ ಎಲ್ಲವೂ ಇವೆ. ಆದರೆ ಯಾವುದೂ ಸರಿ ಇಲ್ಲ. ಯಾವ ವಿಭಾಗಕ್ಕೆ ಈ ಚಿತ್ರ ಸೇರುತ್ತದೆಂಬುದೇ ಯಕ್ಷ ಪ್ರಶ್ನೆ.

ನಾಲ್ಕು ಮಂದಿ ನಿರುದ್ಯೋಗಿ ಗೆಳೆಯರಿಗೆ ಹೇಗಾದರೂ ಮಾಡಿ ಹಣ ಸಂಪಾದಿಸಬೇಕೆಂಬ ಹುಚ್ಚು. ಈ ಗುಂಪಿಗೆ ಇನ್ನೊಬ್ಬ ಮಾಯಾಂಗನೆ ಸೇರಿಕೊಳ್ಳುತ್ತಾಳೆ. ಐದು ಮಂದಿ ಸೇರಿಕೊಂಡು ಶ್ರೀಮಂತ ಹುಡುಗಿಯೊಬ್ಬಳನ್ನು ಕಿಡ್ನಾಪ್ ಮಾಡಿ ಹಣ ಮಾಡಲು ಹೊರಟಾಗ ಎದುರಾಗುವ ನಾಟಕೀಯ ಪ್ರಸಂಗಗಳೇ ಈ ಸಿನೆಮಾದ ಕಥಾ ವಸ್ತು.

ಈ ಪ್ರಸಂಗಗಳು ಓಚಿತ್ಯವಿಲ್ಲದ ಪ್ರಹಸನಗಳಾಗಿ ಪ್ರಬುದ್ಧ ಹಾಸ್ಯಪ್ರೇಮಿಗಳಿಗೆ ಬೋರು ಹೊಡೆಸಿದರೂ ಆಶ್ಚರ್ಯವಿಲ್ಲ. ಐದು ವರ್ಷಗಳ ಹಿಂದೆ ತೆರೆ ಕಂಡ 'ದರ್ವಾಜಾ ಬಂದ್ ರಖೋ' ಹಿಂದಿ ಚಿತ್ರವನ್ನು ಎಷ್ಟು ಸಾಧ್ಯವೋ ಅಷ್ಟು ಕಾಪಿ ಮಾಡಲಾಗಿದೆ ಮತ್ತು ಅದನ್ನೂ ಸರಿಯಾಗಿ ಮಾಡಿಲ್ಲ!

ಟಿವಿ ಧಾರಾವಾಹಿ ತಯಾರಿಸಿರುವವರಾದ ನಿರ್ದೇಶಕ 'ಮಾಸ್ಟರ್' ಆನಂದ್ ಅವರಿಗೆ ಇದು ಚೊಚ್ಚಲ ನಿರ್ದೇಶನ. ಅವರಿನ್ನೂ ಟಿವಿ ಧಾರಾವಾಹಿ ಗುಂಗಿನಿಂದ ಹೊರ ಬಂದಂತಿಲ್ಲ. ಕಿರು ತೆರೆಯ ಅದೇ ಕಾಮಿಡಿಯನ್ನು ಬೆಳ್ಳಿ ತೆರೆಗೂ ನೀಡಿದ್ದಾರೆ. ಟಿವಿ ಧಾರಾವಾಹಿಯ ಪ್ರಭಾವದಿಂದ ಹೊರ ಬಂದು ಇನ್ನಷ್ಟು ಮೊನಚಿನ ಸಂಭಾಷಣೆಗಳೊಂದಿಗೆ ಸಿನೆಮಾ ತಯಾರಿಸಿದ್ದರೆ ಇದು ಒಳ್ಳೆ ಚಿತ್ರವೆನಿಸುವ ಸಾಧ್ಯತೆ ಇತ್ತು.

ಅಲ್ಲಲ್ಲಿ ಸಂಭಾಷಣೆಗಳು ಕಚಗುಳಿ ಇಟ್ಟರೂ ಈಡಿಯಟ್ಸ್‌ಗಳ ಅಧಿಕ ಪ್ರಸಂಗತನಗಳು ಚಿಟ್ಟು ಹಿಡಿಸುತ್ತವೆ. ಪೆಟ್ರೋಲ್ ಪ್ರಸನ್ನ ಕಿರುಚಿ ಆರ್ಭಟಿಸುವುದನ್ನೇ ಅಭಿನಯವೆಂದು ತಿಳಿದುಕೊಂಡಂತಿದೆ. ಮಿಮಿಕ್ರಿ ದಯಾನಂದ್ ಸ್ವಲ್ಪ ಮಟ್ಟಿಗೆ ನಗಿಸುತ್ತಾರೆ. ನವೀನ ಕೃಷ್ಣ ಅಭಿನಯ ಗಮನ ಸೆಳೆದರೂ ಅವರ ಮ್ಯಾನರಿಸಮ್‌ನಲ್ಲಿ ಏನೋ ಕೊರತೆ ಭಾಸವಾಗುತ್ತದೆ.

ನಮ್ರತಾ ಹೆಗ್ಡೆ ಇಲ್ಲಿ ನಟನೆಗಿಂತ ಮೈಮಾಟ ಪ್ರದರ್ಶಿಸಿದ್ದೇ ಹೆಚ್ಚು. ಹರ್ಷಿಕಾ ಪೂಣಚ್ಚ ಅಭಿನಯದಲ್ಲಿ ಲವಲವಿಕೆ ಇದೆ. ಕರಿಬಸವಯ್ಯ, ಬ್ಯಾಂಕ್ ಜನಾರ್ದನ್, ಟೆನ್ನಿಸ್ ಕೃಷ್ಣ, ಚಿದಾನಂದ್ ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ. ಆನಂದ್ ಅಭಿನಯದಲ್ಲಿ ಹೊಸತನ ಕಾಣದಾಗಿದೆ. ರೇಣುಕುಮಾರ್ ಛಾಯಾಗ್ರಹಣ ಡ್ರಮ್ಮರ್ ದೇವಾ ಸಂಗೀತ ಪರವಾಗಿಲ್ಲ.
ಇವನ್ನೂ ಓದಿ