ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ಈ ಚಿತ್ರದಲ್ಲಿ ಖಳನಾಯಕನೇ ಹೀರೋ ! (Dandam Dashagunam | K.Madesh | Chiranjeevi Sarja | Ramya)
ದುಷ್ಟ ಕೂಟಗಳನ್ನು ಸದೆ ಬಡಿಯುವ ಪೊಲೀಸ್ ಅಧಿಕಾರಿಯ ಕಥೆಗೆ ಒಂದಿಷ್ಟು ಆಕ್ಷನ್ ಹಾಗೂ ಒಂದಿಷ್ಟು ಪ್ರೀತಿಯ ಲೇಪನ ಹಚ್ಚಿರುವ ಚಿತ್ರ 'ದಂಡಂ ದಶಗುಣಂ'. ದಶಕದ ಹಿಂದೆ ತೆರೆಗೆ ಬಂದಿದ್ದ 'ಕಾಕಾ ಕಾಕಾ' ತಮಿಳು ಚಿತ್ರವನ್ನು ನಿರ್ದೇಶಕ ಕೆ.ಮಾದೇಶ್ ಕನ್ನಡಕ್ಕೆ ಭಟ್ಟಿ ಇಳಿಸಿದ್ದಾರೆ. ಹಾಗಾಗಿ ಅವರು ಅಷ್ಟೊಂದು ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ ಎಂಬುದು ಇಲ್ಲಿ ಎದ್ದು ಕಾಣುತ್ತದೆ.

ನಾಯಕ ನಟ ಚಿರಂಜೀವಿ ಸರ್ಜಾ, ನಾಯಕಿ ರಮ್ಯಾ ಚಿತ್ರದಲ್ಲಿದ್ದರೂ ಪ್ರೇಕ್ಷಕನ ಗಮನ ಸೆಳೆಯುವುದು, ಪಾತ್ರವನ್ನು ಅರೆದು ಕುಡಿದಂತಿರುವ ಖಳನಟ ರವಿಶಂಕರ್ ಆರ್ಭಟ. ಅವರೇ ಈ ಚಿತ್ರದ ಹೈಲೈಟ್. ಇವರ ಮುಂದೆ ಚಿರಂಜೀವಿ ಸರ್ಜಾ ಮಂಕಾಗಿದ್ದಾರೆ. ಚಿತ್ರಕ್ಕೆ ಚುರುಕುತನ, ವೇಗ ದೊರಕುವುದು ರವಿಶಂಕರ್ ತೆರೆಯ ಮೇಲೆ ಬಂದಾಗಲೇ. ಖಳನಟ ಕೂಡಾ ಚಿತ್ರವನ್ನು ಹೇಗೆ ಮುಂದುವರಿಸಬಲ್ಲ ಎಂಬುದಕ್ಕೆ 'ದಂಡಂ ದಶಗುಣಂ' ಉದಾಹರಣೆಯಾಗಿದೆ. ಅವರ ಸಂಭಾಷಣೆ ಶೈಲಿ, ಸಮಯ ಪ್ರಜ್ಞೆ ಹಾಗೂ ಅಭಿನಯ ತೆರೆಯನ್ನು ಸಂಪೂರ್ಣ ಆವರಿಸಿಬಿಟ್ಟಿದೆ.
PR

ಕ್ರೈಂ ಬ್ರ್ಯಾಂಚ್‌ನ ಎಸಿಪಿ ಸೂರ್ಯ (ಚಿರಂಜೀವಿ ಸರ್ಜಾ) ಎಂದರೆ ದುಷ್ಟರಿಗೆ ಸಿಂಹ ಸ್ವಪ್ನ. ಹಾಗಾಗಿ ಆತ ಬೇರೆ ಬೇರೆ ವಿಭಾಗಗಳಿಗೆ ಎತ್ತಂಗಡಿ ಆಗುತ್ತಲೇ ಇರುತ್ತಾನೆ. ಏತನ್ಮಧ್ಯೆ ಶಿಕ್ಷಕಿ ಮಾಯಾಳ (ರಮ್ಯಾ) ಪ್ರೀತಿಯ ಮಾಯೆಗೆ ಸಿಲುಕಿ ಆಕೆಯನ್ನು ಮದುವೆ ಆಗುತ್ತಾನೆ. ಆದರೆ ಮೊದಲ ರಾತ್ರಿಯೇ ಅವಘಡ. ಮಗ್ಗುಲ ಮುಳ್ಳಾದ ಸೂರ್ಯನನ್ನು ಸದೆಬಡಿಯಲು ತಮಟೆ ಶಿವ (ರವಿಶಂಕರ್) ಮಾಯಾಳನ್ನು ಅಪಹರಿಸಿ ಆ ಮೂಲಕ ಬೇಳೆ ಬೇಯಿಸಿಕೊಳ್ಳುತ್ತಾನೆ. ಇಂಥ ಸನ್ನಿವೇಶದಲ್ಲಿ ತನ್ನ ಹೆಂಡತಿಯನ್ನು ಸೂರ್ಯ ಹೇಗೆ ಪಾರು ಮಾಡುತ್ತಾನೆ ಎಂಬುದೇ ಚಿತ್ರದ ಸಸ್ಪೆನ್ಸ್.

ಚಿರಂಜೀವಿ ಸರ್ಜಾ ನಟನೆಯಲ್ಲಿ ಪೊಲೀಸ್ ಪಾತ್ರದ ಗತ್ತು ಕಾಣ ಸಿಗದು. ನಾಯಕಿ ರಮ್ಯಾ ಹಿಂದೆಂದಿನ ಲವಲವಿಕೆಯಲ್ಲೇ ನಟಿಸಿದ್ದಾರೆ. ಆದರೆ ಆಕ್ಷನ್ ಚಿತ್ರಗಳಲ್ಲಿ ನಾಯಕಿಯರದ್ದು ಸಪೋರ್ಟಿಂಗ್ ರೋಲ್ ಅಷ್ಟೇ. ಈ ಚಿತ್ರದ ನಾಯಕಿಯ ಪಾತ್ರವೂ ಅದಕ್ಕೆ ಹೊರತಲ್ಲ. ಸೋತ ಪಂದ್ಯದಲ್ಲಿ ಸೆಂಚುರಿ ಭಾರಿಸಿದ ತೆಂಡೂಲ್ಕರ್ ಪರಿಸ್ಥಿತಿ ರಮ್ಯಾ ಅವರದ್ದಾಗಿದೆ. ತಮ್ಮ ಪಾತ್ರವನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರಾದರೂ ಅವರ ಪಾತ್ರಕ್ಕಾಗಿಯೇ ಪ್ರೇಕ್ಷಕ ಚಿತ್ರಮಂದಿರಕ್ಕೆ ನುಗ್ಗಿಯಾನೇ ಎಂಬುದು ಯಕ್ಷಪ್ರಶ್ನೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿಶಂಕರ್ ಇಲ್ಲಿ ಸ್ಟಾರ್ ಆಗಿ ಮೆರೆದಿದ್ದಾರೆ. ಅವರು ಎಂದಿನಂತೆ ಖಡಕ್ ನಡೆ-ನುಡಿ ಪ್ರದರ್ಶಿಸಿದ್ದಾರೆ. ಹಾಗಾಗಿ ತೆರೆಯ ಮೇಲೆ ನಾಯಕ ಬಂದಾಗ ಹೆಚ್ಚೇನೂ ಪ್ರತಿಕ್ರಿಯಿಸದ ಪ್ರೇಕ್ಷಕ ರವಿಶಂಕರ್ ಕಾಣಿಸಿಕೊಂಡಾಗ ಸಿಳ್ಳೆ, ಚಪ್ಪಾಳೆಗೆ ಮುಂದಾಗುತ್ತಾನೆ.

ಹರಿಕೃಷ್ಣ ಸಂಗೀತದಲ್ಲಿ ಇಬ್ಬಂದಿ ನಿಲುವಿದೆ. ಮೂಲ ಚಿತ್ರದ ಹಾಡುಗಳನ್ನು ಇಲ್ಲಿ ಯಥಾವತ್ತಾಗಿ ಉಳಿಸಿಕೊಂಡೂ ಇಲ್ಲ. ಅಥವಾ ಪೂರ್ತಿ ಹೊಸ ರಾಗಗಳನ್ನು ನೀಡಿಯೂ ಇಲ್ಲ. ನಕಲು ಮಾಡಲು ಹೋಗಿ ಸೋತಂತೆ ಭಾಸವಾಗುತ್ತದೆ. ನಾಯಕನ ಪಾತ್ರಕ್ಕೆ ಡಬ್ ಮಾಡಿರುವ ನವೀನ್‌ ಕೃಷ್ಣ ಸ್ವರ ಹಾಗೂ ಕೆ.ವಿ. ರಾಜು ಅವರ ಸಂಭಾಷಣೆ ಚಿತ್ರದ ಪ್ಲಸ್ ಪಾಯಿಂಟ್ಸ್. ಮಂತ್ರರಹಿತ ದಂಡವೆನಿಸಿರುವ ಈ ಚಿತ್ರ, ಕನ್ನಡ ಚಿತ್ರವನ್ನು ಮಾತ್ರ ನೋಡಿದವರಿಗೆ ಸಹನೀಯವೆನಿಸಬಹುದೇನೋ. ಚಿತ್ರದ ಶೀರ್ಷಿಕೆಗೂ ಚಿತ್ರಕ್ಕೂ ಸಂಬಂಧವೇ ಇಲ್ಲ ಎಂಬುದು ಬೇರೆ ಮಾತು.
ಇವನ್ನೂ ಓದಿ