'ಕಿರಾತಕ' ಯಶಸ್ವೀ ತಮಿಳು ಚಿತ್ರವೊಂದರ ಮರುಸೃಷ್ಟಿ ಎಂಬುದು ಹಾಗೂ ಇದರ ನಾಯಕಿಯಾದ ಓವಿಯಾ ತಮಿಳು-ಕನ್ನಡ-ತೆಲುಗು ಅವತರಣಿಕೆಗಳಲ್ಲಿ ನಟಿಸಿದ್ದಾಳೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿರುವ ವಿಷಯ. ಈ ಎಲ್ಲಾ ಹಿನ್ನೆಲೆಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರ ವೀಕ್ಷಣೆಗೆ ತೆರಳುವ ಪ್ರೇಕ್ಷಕ ಒಂದಷ್ಟು ನೀರೀಕ್ಷೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾನೆ. ಆದರೆ ಕಿರಾತಕ ಚಿತ್ರ ನೀರೀಕ್ಷೆಗೆ ತಕ್ಕನಾಗಿಲ್ಲ ಎಂಬುದನ್ನು ಇಲ್ಲಿ ಹೇಳಲೇಬೇಕಾಗುತ್ತದೆ.
ಹಳ್ಳಿಯಲ್ಲಿನ ತನ್ನ ಪಟಾಲಂನೊಂದಿಗೆ ಇಸ್ಪೀಟು ಆಡಿಕೊಂಡು, ಧೂಮಪಾನ ಮಾಡುತ್ತಾ, ಕುಡಿಯುತ್ತಾ ಕಾಲ ಕಳೆಯುತ್ತಿರುವ ಕಥಾನಾಯಕ ನಂದೀಶನ (ಯಶ್) ಖರ್ಚುವೆಚ್ಚಗಳಿಗೆ ದುಬೈಯಲ್ಲಿ ದುಡಿಯುತ್ತಿರುವ ಅವನ ಅಪ್ಪ ಹಣ ಕಳಿಸುತ್ತಿರುತ್ತಾನೆ. ಹಟಮಾರಿ ಸ್ವಭಾವದ ನಂದೀಶ ತನ್ನ ಪರಪೀಡಕ ಸ್ವಭಾವದಿಂದ ಹೊರಗೆಬಂದು ಒಂದಲ್ಲಾ ಒಂದು ದಿನ ಒಳ್ಳೆಯ ದಿನಗಳನ್ನು ಕಾಣುತ್ತಾನೆ ಎಂಬ ನಂಬಿಕೆ ಅವನ ತಾಯಿಯಲ್ಲಿರುತ್ತದೆ.
ಈ ನಡುವೆ ನೇತ್ರಾ ಎಂಬ ಹುಡುಗಿಯ (ಓವಿಯಾ) ಪ್ರೇಮದಲ್ಲಿ ನಂದೀಶ ಸಿಲುಕಿಕೊಳ್ಳುತ್ತಾನೆ. ಆದರೆ ಆಕೆಯ ಸೋದರನಿದ್ದ ಊರು ಹಾಗೂ ನಂದೀಶನ ಊರಿನ ನಡುವೆ ಹಗೆತನ ಏರ್ಪಟ್ಟಿರುತ್ತದೆ. ಈ ವೈರತ್ವವನ್ನು ದೂರಮಾಡಿ ತನ್ನ ಗುರಿಯನ್ನು ಸಾಧಿಸಲು ನಂದೀಶ ತನ್ನ ಬುದ್ದಿವಂತಿಕೆಯನ್ನು ಹೇಗೆ ಬಳಸಿಕೊಂಡ ಎಂಬುದು ಚಿತ್ರದ ಹೂರಣ.
ಇಂಥದೊಂದು ಚಿತ್ರವನ್ನು, ಅದರಲ್ಲೂ ಯಶಸ್ವಿ ಎನಿಸಿಕೊಂಡಿದ್ದ ಚಿತ್ರವನ್ನು ರಿಮೇಕ್ ಮಾಡುವಲ್ಲಿ ನಿರ್ದೇಶಕ ಪ್ರದೀಪ್‌ರಾಜ್ ತಮ್ಮ ಪರಿಣತಿಯನ್ನು ಮತ್ತಷ್ಟು ಹರಿತಗೊಳಿಸಿಕೊಳ್ಳಬೇಕಿತ್ತು ಎನಿಸುತ್ತದೆ. ಏಕೆಂದರೆ ಚಿತ್ರವು ತೀರಾ ಎಳೆಯಲ್ಪಟ್ಟಿದೆ ಎಂಬ ಭಾವನೆ ಸಾಮಾನ್ಯ ಪ್ರೇಕ್ಷಕನಿಗೂ ಬರುವುದು ಈ ಚಿತ್ರದ ನಕಾರಾತ್ಮಕ ಅಂಶಗಳಲ್ಲೊಂದು. ಅನಗತ್ಯವಾದ ಮತ್ತು ಅಸಂಗತವಾದ ದೃಶ್ಯಗಳನ್ನು ಕತ್ತರಿಸಿ ಎಸೆಯಬೇಕಿದ್ದ ಸಂಕಲನಕಾರರು ಇಲ್ಲಿ ತಮ್ಮ ಕೈಚಳಕವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎನಿಸುತ್ತದೆ. ಇದು ಚಿತ್ರದ ಓಟಕ್ಕೆ ಅಲ್ಲಲ್ಲಿ ತಡೆಯೊಡ್ಡುತ್ತದೆ.
ಅಷ್ಟೇ ಅಲ್ಲ, ಕನ್ನಡದ 'ನೇಟಿವಿಟಿ'ಯನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ವಿಫಲರಾಗಿದ್ದು, ಸಂಭಾಷಣೆಯು ಮಂಡ್ಯದ ಶೈಲಿಯಲ್ಲಿದ್ದರೂ ಚಿತ್ರದ ಉದ್ದಕ್ಕೂ ತಮಿಳಿನ ಘಾಟು ಹೊಡೆಯುತ್ತದೆ. ಈ ಕುರಿತು ನಿರ್ದೇಶಕರು ಒಂದಷ್ಟು ಹೋಂವರ್ಕ್ ಮಾಡಿದ್ದರೆ ಚೆನ್ನಿತ್ತು.
ಇನ್ನುಳಿದಂತೆ ಪಾತ್ರ ನಿರ್ವಹಣೆಯಲ್ಲಿ ಯಶ್ ಮಿಂಚಿದ್ದಾರೆ. ಚಿತ್ರದಲ್ಲಿ ಬಳಸಲಾಗಿರುವ ಮಂಡ್ಯದ ಭಾಷೆಯಲ್ಲೇ ಹೇಳುವುದಾದರೆ, ನೃತ್ಯದ ದೃಶ್ಯಗಳಲ್ಲಂತೂ ಅವರು 'ಬೊಂಬಾಟ್ ಬಡ್ಡೆತ್ತದು...!!'. ಇದೇ ಮಾತು ಸಂಗೀತ ನಿರ್ದೇಶಕ ವಿ.ಮನೋಹರ್ ಅವರಿಗೂ ಅನ್ವಯಿಸುತ್ತದೆ. ಈ ಚಿತ್ರವು ಪ್ರೇಕ್ಷಕರನ್ನೇನಾದರೂ ಮತ್ತೆ ಮತ್ತೆ ಸೆಳೆದರೆ ಅದಕ್ಕೆ ಯಶ್ ನೃತ್ಯ ಹಾಗೂ ಮನೋಹರ್ ಸಂಗೀತವೇ ಕಾರಣ ಎಂದು ಘಂಟಾಘೋಷವಾಗಿ ಹೇಳಬಹುದು.
ಮಂಡ್ಯದ ಹಳ್ಳಿಗಳ ಹೆಸರುಗಳನ್ನು ಬಳಸಿಕೊಂಡು ರೂಪಿಸಲಾಗಿರುವ ಹಾಡು, 'ಕೆಂದಾವರೆ ಹೂವೆ', 'ಡಮ್ಮ ಡಮ್ಮಾ' ಎಂಬ ಹಾಡುಗಳು ರಂಜಿಸುತ್ತವೆ. ನಾಯಕನ ತಾಯಿಯ ಪಾತ್ರದಲ್ಲಿ ತಾರಾ ಮಿಂಚಿದ್ದಾರೆ. ಆದರೆ ಇದೇ ಮಾತನ್ನು ನಾಗಾಭರಣರಿಗೆ ಹೇಳಲಾಗುವುದಿಲ್ಲ. ಸಂಕೇತ್ ಕಾಶಿಯ ಹಾಸ್ಯಪಾತ್ರ ಮೆಚ್ಚುಗೆಯನ್ನು ಪಡೆಯುತ್ತದೆ. ಹಚ್ಚ ಹಸಿರಿನ ಹಳ್ಳಿಯ ಹೊಲಗದ್ದೆಗಳ ದೃಶ್ಯಗಳು ಕಣ್ಮನಗಳನ್ನು ತಣಿಸುತ್ತವೆ ಹಾಗೂ ಇದಕ್ಕೆ ಛಾಯಾಗ್ರಾಹಕ ಸೆಲ್ವ ಅಭಿನಂದನಾರ್ಹರು.