`ಹಾಸ್ಯ ಪಾತ್ರದಲ್ಲೇ ತೃಪ್ತ-ಮೈಸೂರು ರಮಾನಂದ್
ಬೆಂಗಳೂರ, ಬುಧವಾರ, 14 ನವೆಂಬರ್ 2007( 19:42 IST )
ರಂಗಭೂಮಿ ನನ್ನ ಮೂಲ ನೆಲೆ. ಅದನ್ನು ಹೊರತುಪಡಿಸಿದ ಬದುಕನ್ನು ನೀರೀಕ್ಷಿಸಲೂ ನನ್ನಿಂದ ಸಾಧ್ಯವಿಲ್ಲ. ಅದರೊಟ್ಟಿಗೆ ಚಿತ್ರರಂಗದಲ್ಲಿನ ಹಾಸ್ಯ ಪಾತ್ರಗಳು ನನಗೆ ತೃಪ್ತಿ ತಂದಿವೆ.
ಹೀಗಂತ ಹೇಳುತ್ತಾರೆ ಹಾಸ್ಯ ಕಲಾವಿದ ಮೈಸೂರು ರಮಾನಂದ್.
ರಂಗಭೂಮಿ ಸೇರಿದಂತೆ ಚಿತ್ರರಂಗದಲ್ಲಿ ತಮ್ಮ ಸಹಜ ಅಭಿನಯ ಹಾಗೂ ವಿಚಿತ್ರ ಮ್ಯಾನರಿಸಂನಿಂದ ಸಾಕಷ್ಟು ಗುರುತಿಸಿಕೊಂಡಿರುವ ಮೈಸೂರು ರಮಾನಂದ್ ಅವರದ್ದು ಸೃಜನಶೀಲ ಮನಸ್ಸು.
ಸರಿಸುಮಾರು ಮೂರು ದಶಕಗಳಿಂದಲೂ ರಂಗಭೂಮಿಯನ್ನೇ ತಮ್ಮ ಉಸಿರಾಗಿಸಿಕೊಂಡ ಮೈಸೂರು ರಮಾನಂದ್ ಈವರೆಗೆ ನೂರಕ್ಕೂ ಮೀರಿದ ಚಿತ್ರಗಳಲ್ಲಿ ಹಾಸ್ಯ ನಟರಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಹಿರಿತೆರೆ ಮಾತ್ರವಲ್ಲದೆ ಇತ್ತೀಚೆಗೆ ಕಿರುತೆಯಲ್ಲೂ ಮೈಸೂರು ರಮಾನಂದ್ ಬ್ಯುಸಿ. ವಿಶೇಷವೆಂದರೆ ಇಲ್ಲೂ ಕೂಡ ಅವರದ್ದು ಹಾಸ್ಯ ಪಾತ್ರಗಳೇ.
`ನಗಿಸೋದು ಅಂದ್ರೆ ಸಾಮಾನ್ಯ ಸಂಗತಿಯಲ್ಲ, ಅದಕ್ಕೆ ಸಾಕಷ್ಟು ಪರಿಶ್ರಮ ಬೇಕು, ನಮ್ಮ ಮಾತಿನ ಶೈಲಿ, ಆಂಗಿಕ ಅಭಿನಯ ಇವೆಲ್ಲವೂ ಮುಖ್ಯ..ಇವುಗಳಲ್ಲಿ ಯಾವುದೇ ಒಂದು ಎಡವಟ್ಟಾದ್ರೂ ಹಾಸ್ಯ ಅಪಹಾಸ್ಯವಾಗಿಬಿಡುವ ಆತಂಕವಿರುತ್ತೆ.. ಎನ್ನುತ್ತಾರೆ ರಮಾನಂದ್.
ಟಿ.ವಿ, ಸಿನಿಮಾ ಮಾತ್ರವಲ್ಲದೆ ರಂಗಭೂಮಿಯಲ್ಲೂ ರಮಾನಂದ್ ಅವರದ್ದು ಮಾಗಿದ ಮನಸ್ಸು, ಹುಡುಕಾಟದ ಜೀವ. ಈಗ್ಗೆ ಕೆಲ ವರ್ಷಗಳ ಹಿಂದೆ ರಾಜ್ಯದ ವಿವಿದೆಡೆ ಬೀದಿ ನಾಟಕಗಳನ್ನು ಆಡುವ ಮೂಲಕ ಜನಮನ ಗೆದ್ದವರು ಮತ್ತು ಆ ಮೂಲಕ ನಾಟಕ ಕಲೆಗೆ ಒಂದು ವ್ಯಾಪಕತೆಯನ್ನು ತಂದುಕೊಟ್ಟವರು ರಮಾನಂದ್.
ಮೈಸೂರು ರಮಾನಂದ್ ಅವರ ಹುಟ್ಟೂರು. ಆ ಕಾರಣಕ್ಕೇ ಅವರ ಹೆಸರಿನೊಂದಿಗೆ ಅಂಟಿಕೊಂಡದ್ದು ಸಾಂಸ್ಕ್ಕತಿಕ ನಗರಿ ಮೈಸೂರು. ಸದಾ ಸೃಜನಶೀಲತೆಗೆ ತುಡಿಯುವ ರಮಾನಂದ್ ತಮ್ಮ ಕಾರ್ಯಕ್ಷೇತ್ರವನ್ನು ಕೇವಲ ಸಿನಿಮಾಕ್ಕೆ ಸೀಮಿತಗೊಳಿಸದೆ ಹಲವು ನಾಟಕಗಳನ್ನು ನಿರ್ದೇಶಿಸುವತ್ತಲೂ ಕ್ರಿಯಾಶೀಲರಾಗಿದ್ದಾರೆ.
`ಗೆಜ್ಜೆ ಹೆಜ್ಜೆ ರಂಗತಂಡದ ಮೂಲಕ ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ರಮಾನಂದ್ ಈವರೆಗೆ ಎರಡು ಸಾವಿರಕ್ಕೂ ಹೆಚ್ಚು ಪ್ರಯೋಗಗಳನ್ನು ಯಶಸ್ವಿಯಾಗಿ ನೀಡಿ ಸಾಧನೆ ಮೆರೆದಿದ್ದಾರೆ.
ಇಂತಹ ಅಪರೂಪದ ಕಲಾವಿದ, ಸಾಹಸಿಗ ಮತ್ತಷ್ಟು ಪ್ರಯೋಗಗಳಿಗೆ ಮುಂದಾಗಲಿ, ಆ ಮೂಲಕ ರಂಗಭೂಮಿಗೆ ಕೊಂಚ ರಂಗು ಮೂಡಲಿ ಎಂಬುದು ನಮ್ಮ ಹಾರೈಕೆ.