ಚಿತ್ರಕತೆಯನ್ನು ಕ್ಯಾಮರಾ ಡಾಮಿನೇಟ್ ಮಾಡಬಾರದು: ರತ್ನವೇಲು
ಬೆಂಗಳೂರು, ಶುಕ್ರವಾರ, 7 ಡಿಸೆಂಬರ್ 2007( 16:14 IST )
ಒಂದು ಚಿತ್ರ ದೃಶ್ಯಕಾವ್ಯವಾಗಬೇಕಾದರೆ ಛಾಯಾಗ್ರಾಹಕ ಪಡುವ ಶ್ರಮ ಅಷ್ಟಿಷ್ಟಲ್ಲ. ಸೈನೈಡ್‌ಚಿತ್ರ ನೋಡಿದವರಿಗೆ ಅದರಲ್ಲಿ ಕ್ಯಾಮರಾ ಕೈಚಳಕ ಬೆರಗು ಹುಟ್ಟಿಸದೆ ಇರದು. ಅದರ ಕ್ಯಾಮರಾಮನ್ ರತ್ನವೇಲು ಎಂದೇ ಖ್ಯಾತರು. ಅವರು ಛಾಯಾಗ್ರಹಣ ನಿರ್ವಹಿಸಿದ ಅದ್ದೂರಿ ಚಿತ್ರ ಗಾಳಿಪಟ ಸದ್ಯದಲ್ಲೇ ಬಿಡುಗಡೆ ಯಾಗಲಿದೆ. ರತ್ನವೇಲು ಜೊತೆ ಪುಟ್ಟ ಸಂದರ್ಶನವಿದು.
ಗಾಳಿಪಟ ಚಿತ್ರದ ಬಗ್ಗೆ ಹೇಳಿ ?
ಯೋಗರಾಜಭಟ್ ಅವರ ಚಿತ್ರಕತೆ ನನಗೆ ಸ್ಪೂರ್ತಿ ತಂದಿದೆ. ಲವಲವಿಕೆಯ ಗಾಳಿಪಟ ಕತೆ ಕೇಳಿದ ತಕ್ಷಣ ನನಗೆ ಚಿತ್ರೀಕರಿಸಬಹುದಾದ ಸನ್ನಿವೇಶಗಳು ಕಣ್ಣು ಮುಂದೆ ಹಾದುಹೋದವು.
ಈ ಚಿತ್ರದಲ್ಲಿ ತಮ್ಮ ಛಾಯಾಗ್ರಹಣದ ವಿಶೇಷವೇನು ?
ಇದರಲ್ಲಿ ಪ್ರೇಕ್ಷಕರು ವಿಭಿನ್ನ ಕರ್ನಾಟಕವನ್ನು ನೋಡಲಿದ್ದಾರೆ. ಇಲ್ಲಿ ಬಳಸಿಕೊಂಡಿರುವ ಪ್ರತಿಯೊಂದು ಸ್ಥಳದ ರೋಮಾಂಚನವನ್ನು ತೆರೆಗೆ ತರುವಲ್ಲಿ ನಮಗೆ ತೃಪ್ತಿ ಇದೆ. ತಾವೇ ಆ ಸ್ಥಳದಲ್ಲಿ ಇದ್ದೇವೆ ಎನ್ನುವ ಭಾವನೆ ಪ್ರೇಕ್ಷಕರಿಗೆ ಬರುವಂತೆ ಮಾಡಿದ್ದೇನೆ.
ಚಿತ್ರಗಳಲ್ಲಿ ಛಾಯಾಗ್ರಾಹಕನ ಪಾತ್ರವೇನು ?
ಚಿತ್ರಕತೆಗೆ ಪೂರಕವಾಗಿ ಛಾಯಾಗ್ರಾಹಕ ಕೆಲಸ ನಿರ್ವಹಿಸಬೇಕಾಗುತ್ತದೆ. ಛಾಯಾಗ್ರಾಹಕ ಚಿತ್ರಕತೆಯನ್ನು ಡಾಮಿನೇಟ್ ಮಾಡಬಾರದು. ಯಾವ ದೃಶ್ಯವೂ ಚಿತ್ರಕತೆಗೆ ಹೊರಗೆ ನಿಂತಿದೆ ಎನ್ನುವಂತೆ ರೂಪುಗೊಳ್ಳಬಾರದು. ಅದಕ್ಕೆ ಸೂಕ್ತ ಹೋಮ್‌ವರ್ಕ್ ಮಾಡಲೇಬೇಕು.
ನೀವು ದೃಶ್ಯಾವಳಿಯಲ್ಲಿ ಜೀವಂತಿಕೆ ತುಂಬಲು ಯಾವ ರೀತಿ ಪ್ಲ್ಯಾನ್ ಮಾಡಿಕೊಳ್ಳುತ್ತೀರಿ ?
ನಾನು ಚಿತ್ರಕತೆಯನ್ನು ಎರಡು ಮೂರು ಬಾರಿ ಓದಿಕೊಳ್ಳುತ್ತೇನೆ. ಆಗ ನನಗೆ ಯಾವ ಸನ್ನಿವೇಶ ಹೇಗೆ ಮೂಡಿಬರಬೇಕು ಎಂದು ಮನಸ್ಸಿನಲ್ಲಿ ಒಂದು ಚಿತ್ರ ಮೂಡುತ್ತದೆ. ಅದನ್ನು ನಿರ್ದೇಶಕರ ಬಳಿ ಚರ್ಚೆಮಾಡಿ ಲೊಕೇಷನ್ ನಿಗದಿ ಮಾಡಲಾಗುತ್ತದೆ.
ನಿಮ್ಮ ಅನುಭವದ ಸವಿನೆನಪುಗಳು ಯಾವುವು ?
ಸೈನೈಡ್ ಚಿತ್ರ ನೋಡಿದ ರವಿಬೆಳಗೆರೆ, ಮಾರ್ಟಿನ್ ಸ್ಕಾರ್ಸೆಸೆಯ ಚಿತ್ರ ನೋಡಿದಂತಾಯ್ತು ಎಂದು ಬೆರಗಾದದ್ದು, ಜಗಡಂ ಚಿತ್ರ ನೋಡಿದ ಗಣ್ಯರು ಹಾಲಿವುಡ್ ಇಲ್ಲೇ ಇದೆ ಎಂದು ಹೇಳಿದ್ದು, ಸೇತು ಚಿತ್ರವನ್ನು ನೋಡಿದ ಇಳಯರಾಜ ಇದೊಂದು ಹೊಸಜಗತ್ತು ಎಂದದ್ದು ನನ್ನ ಸವಿನೆನಪುಗಳಾಗಿ ಉಳಿಯುತ್ತವೆ.
ಗಾಳಿಪಟ ಚಿತ್ರದಿಂದ ರತ್ನವೇಲು ಅಂತಾರಾಷ್ಟ್ತ್ರೀಯ ಮಟ್ಟದ ಕ್ಯಾಮರಾಮನ್‌ಗಳಲ್ಲಿ ಒಬ್ಬರಾಗಲಿ ಎಂದು ಹಾರೈಸೋಣ.