ಕೋಟು ಯಾರದೋ... ಕ್ಯಾಪು ಯಾರದೋ...
ಮಧುರ ಸ್ಮ್ಕತಿ
ಬೆಂಗಳೂರು, ಮಂಗಳವಾರ, 11 ಡಿಸೆಂಬರ್ 2007( 18:06 IST )
ಯಗಟಿ ರಘು ನಾಡಿಗ್
ಇದು ನೆನಪಿನಾಳದ ಮಧುರಸ್ಮ್ಕತಿ. ಒಂಥರಾ ಕಪ್ಪು-ಬಿಳುಪು ಚಿತ್ರಗಳ ಕುರಿತಾದ ವರ್ಣರಂಜಿತ ನೆನಪುಗಳು ಅಂತ ಬೇಕಿದ್ರೂ ಅಂದ್ಕೊಳ್ಳಿ. ನೆನಪುಗಳು ಅಂತ ಹೇಳೋ ಘಟನೆಗಳು ಅವು ಘಟಿಸುವ ಕಾಲದಲ್ಲಿ ಟೆನ್ಷನ್ ತಂದಿರುತ್ತವೇನೋ ನಿಜ. ಆದರೆ ಕೆಲ ಕಾಲದ ನಂತರ ಒಮ್ಮೆ ಹಿನ್ನೋಟ ಬೀರಿದರೆ ಅದರ ಸ್ವಾದ ಅಮರ-ಮಧುರ. ನೆನಪುಗಳ ಮಾತು ಮಧುರಾ...ಷಿ ಅನ್ನೋದು ಅದಕ್ಕೇ ಅಲ್ವೇ?!
ಇದು ದಶಕಗಳ ಹಿಂದಿನ ಕಥೆ. ಬಿ.ಆರ್.ಪಂತುಲು ಅವರ ಸಹಾಯಕರಾಗಿದ್ದ ಪುಟ್ಟಣ್ಣ ಕಣಗಾಲರಿಗೆ ಕನ್ನಡದಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಅವಕಾಶ ಸಿಕ್ಕಿತು. ಕನ್ನಡದವರೇ ಆದರೂ ಅವರು ಮೊದಲು ಮಲಯಾಳಂನಲ್ಲಿ ಚಿತ್ರಗಳನ್ನು ಮಾಡಿದ್ದರು. ತಮ್ಮ ಮೊದಲ ಕನ್ನಡ ಚಿತ್ರ ಎಲ್ಲ ರೀತಿಯಲ್ಲೂ ಉತ್ತಮವಾಗಿರಬೇಕು, ಸಾಹಿತ್ಯ-ಸಂಗೀತ-ಛಾಯಾಗ್ರಹಣ ಇವೇ ಮೊದಲಾದ ಅಂಶಗಳು ಭಲೇ....ಭಲೇ ಅನ್ನುವಂತಿರಬೇಕು, ಪಾತ್ರಕ್ಕೆ ಸೂಕ್ತವಾದ ಕಲಾವಿದರನ್ನೇ ಹಾಕಿಕೊಳ್ಳಬೇಕು... ಹೀಗೆ ಕನಸುಗಳ ಮೂಟೆಯನ್ನೇ ಹೊತ್ತು ನಿಂತಿದ್ದರು ಪುಟ್ಟಣ್ಣ ಎಂಬ ಕನ್ನಡ ಚಿತ್ರರಂಗದ ದೊಡ್ಡಣ್ಣ.
ಇದು ಬೆಳ್ಳಿಮೋಡ ಚಿತ್ರದ ಕಥೆ. ಅಂದುಕೊಂಡಂತೆಯೇ ಈ ಚಿತ್ರಕ್ಕೆ ಉತ್ತಮ ಗೀತೆಗಳನ್ನು ಬರೆಸಿದರು ಪುಟ್ಟಣ್ಣ. ಬೇಂದ್ರೆಯವರ ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದಾ... ಗೀತೆಯನ್ನೂ ಚಿತ್ರಕ್ಕೆಂದೇ ಆರಿಸಲಾಯಿತು, ವಿಜಯಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಮಾಧುರ್ಯಪೂರ್ಣ ಗೀತೆಗಳೂ ಧ್ವನಿಮುದ್ರಣಗೊಂಡವು. ಅವರ ಮೆಚ್ಚಿನ ಕಲ್ಪನಾ ನಾಯಕಿಯಾದರೆ, ಕಲ್ಯಾಣ್ ಕುಮಾರ್ ನಾಯಕ ಪಾತ್ರಕ್ಕೆ ಆಯ್ಕೆಯಾದರು.
ಆದರೆ ಚಿತ್ರೀಕರಣ ಪ್ರಾರಂಭವಾಗುವಾಗ ಸವಾಲುಗಳು ಎದುರಾದವು. ಚಿಕ್ಕಮಗಳೂರಿನ ಬೆಟ್ಟದ ಮೇಲಿನ ಷೂಟಿಂಗ್ ಸ್ಪಾಟ್‌ನಲ್ಲಿ ಒಂದು ನಿರ್ದಿಷ್ಟ ಮರ ಇದ್ದರೆ ಚೆನ್ನ ಎನಿಸಿತು ಪುಟ್ಟಣ್ಣನವರಿಗೆ. ಅದರೆ ಅದು ಅಲ್ಲಿರಲಿಲ್ಲ. ಹಟವಾದಿ ಪುಟ್ಟಣ್ಣ ಎಲ್ಲಿಂದಲೋ ಅಂಥ ಮರವನ್ನು ಕಡಿಸಿ, ಚಿತ್ರತಂಡದವರಿಂದ ಹೊರಿಸಿ ತಂದು ಆ ಜಾಗದಲ್ಲಿ ನೆಟ್ಟು ಚಿತ್ರೀಕರಿಸಿದರು. ಚಿತ್ರದ ಇತರ ಪಾತ್ರಗಳಂತೆ ಆ ಮರವೂ ಒಂದು ಪಾತ್ರವೇ ಆಗಿದ್ದು ಪುಟ್ಟಣ್ಣನವರ ಮೈದಾಸ್ ಸ್ಪರ್ಶಕ್ಕೆ ಸಾಕ್ಷಿಯಾಗಿತ್ತು.
ಇದರ ನಂತರ ಮತ್ತೊಂದು ಸವಾಲು ಎದುರಾಯಿತು. ಕಥಾನಾಯಕಿಯನ್ನು ನೋಡಲು ನಾಯಕ ವಿದೇಶದಿಂದ ಬರುವ ಸನ್ನಿವೇಶ ತ್ರಿವೇಣಿಯವರ ಬೆಳ್ಳಿಮೋಡ ಕಾದಂಬರಿಯಲ್ಲಿ ಒಡಮೂಡಿದ್ದು ಅದನ್ನು ಹಾಗೆಯೇ ಚಿತ್ರೀಕರಿಸಲು ಪುಟ್ಟಣ್ಣ ಬಯಸಿದ್ದರು. ಅದರೆ ಪ್ರಮಾದವಶಾತ್ ನಾಯಕ ಕಲ್ಯಾಣ್ ಕುಮಾರ್ ಸಾದಾ ಪ್ಯಾಂಟು-ಷರ್ಟಿನಲ್ಲಿ ನಿಂತಿದ್ದರು. ವಿದೇಶದಿಂದ ಬರುವವರು ಹೀಗೆ ಬರುತ್ತಾರೆಯೇ ಎಂದು ಪುಟ್ಟಣ್ಣ ದೂರ್ವಾಸ ಮುನಿಯ ಅಪರಾವತಾರವೇ ಆಗಿಹೋದರು.
ಆದರೆ ಚಿತ್ರಕ್ಕೆ ಲಗತ್ತಾದ ಕಾಸ್ಟ್ಯೂಮ್‌ಗಳನ್ನು ನಿರ್ಮಾಪಕರು ವ್ಯವಸ್ಥೆ ಮಾಡಿರಲಿಲ್ಲ. ಹಾಗಂತ ಪುಟ್ಟಣ್ಣನವರೂ ಕೈಚೆಲ್ಲಿ ಕೂರಲು ಸಿದ್ಧರಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿನ ತಮ್ಮ ಮೊದಲ ಕೂಸೇ ಸೊರಗುವುದಕ್ಕೆ ಬಿಡಲು ಅವರ ಮನಸ್ಸು ಒಪ್ಪಲಿಲ್ಲ.
ಛಲವಾದಿ ಪುಟ್ಟಣ್ಣ ಕ್ಯಾಮರಾಮನ್ ಕಡೆಗೆ ಒಮ್ಮೆ ನೋಡಿದರು. ಚಿತ್ರೀಕರಿಸುವಾಗ ತಂತ್ರಜ್ಞರ ಕಡೆ ನೋಡುವುದು ವಿಶೇಷವೇನೂ ಅಲ್ಲದಿದ್ದರೂ ಅವರು ನೋಡಿದ ಧಾಟಿ ಕ್ಯಾಮರಾಮನ್ ಕೃಷ್ಣಪ್ರಸಾದರಿಗೆ ವಿಶೇಷ-ವಿಚಿತ್ರ ಎನಿಸಿತು. ತಾವು ತೊಟ್ಟಿದ್ದ ಕೋಟನ್ನು ಬಿಚ್ಚಿದ ಪುಟ್ಟಣ್ಣ ಕೃಷ್ಣಪ್ರಸಾದರಿದ್ದಲ್ಲಿಗೆ ಬಂದು ಅವರ ಕ್ಯಾಪ್ಷಿಗೆ ಕೈಹಾಕಿದರು. ಎರಡನ್ನೂ ತೆಗೆದುಕೊಂಡು ಹೋಗಿ ಕಲ್ಯಾಣ್‌ಕುಮಾರ್‌ಗೆ ತೊಡಿಸಿದರು. ನಾಯಕಿಯನ್ನು ನೋಡಲು ವಿದೇಶದಿಂದ ಬರುವ ನಾಯಕ ರೂಪುಗೊಂಡಿದ್ದು ಹೀಗೆ!! ಮುಂದೆ ಬೆಳ್ಳಿಮೋಡ ಬೆಳ್ಳಿತೆರೆಯಲ್ಲಿ ಎಂಥ ಅಮರ ಕಾವ್ಯವಾಯಿತು ಎಂಬುದನ್ನು ಹೇಳಬೇಕಿಲ್ಲ.
ಉಪಸಂಹಾರ: ಕೋಟಿಗಟ್ಟಲೆ ಹಣ ಸುರಿಯುವ, ಕೇಳಿದ ಬಟ್ಟೆ-ಬರೆ, ಹೊಟೇಲ್ ರೂಮು, ಸಂಭಾವನೆ, ವಿದೇಶದಲ್ಲಿ ಚಿತ್ರಣ ಇವೆಲ್ಲಕ್ಕೂ ನಿರ್ಮಾಪಕ ವ್ಯವಸ್ಥೆ ಮಾಡಿದರೂ ತಕ್ಕ ಕೆಲಸವನ್ನು ಮಾಡದ ನಿರ್ದೇಶಕ-ನಟರನ್ನು ನೋಡಿದಾಗ ಪುಟ್ಟಣ್ಣ ಹೀಗೆ ಪದೇ ಪದೇ ನೆನಪಾಗುತ್ತಾರೆ.