ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ನುಡಿನಮನ: ವಿಷ್ಣು ತುಂಬಿದ ಕೊಡ, ಯಾವತ್ತೂ ತುಳುಕಿರಲಿಲ್ಲ! (Vishnuvardhan | Sahasa Simha | Ambarish | Raj Kumar)
ತಾರಾ ಪರಿಚಯ
Bookmark and Share Feedback Print
 
- ಭುವನ್ ಪುದುವೆಟ್ಟು

'ಬಾರೇ.. ಬಾರೇ.. ಚೆಂದದ ಚೆಲುವಿನ ತಾರೆ..' ಎನ್ನುತ್ತಾ ಓಡೋಡಿ ಬರುವ ರಾಮಚಾರಿ ಇನ್ನಿಲ್ಲವೆಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಶಾರೀರಕ್ಕೆ ವಿರಾಮಕೊಟ್ಟು ಮೌನವನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಿದ್ದ ಅವರ ಶರೀರ ಇಂದು ಜೀವ ಕಳೆದುಕೊಂಡು ಅನಾಥವಾಗಿದೆ.

ವಿಷ್ಣುವರ್ಧನ್ ಜೀವ ಮಾತ್ರ ಅನಾಥವಾಗಿದೆ ಎಂದರೆ ಬಹುದೊಡ್ಡ ಪ್ರಮಾದವಾದೀತು. ಕನ್ನಡದ ಕೋಟಿ ಕೋಟಿ ಜನತೆ, ಪ್ರೀತಿಯಿಂದ ಅಣ್ಣಾ, ಅಪ್ಪಾ ಎಂದು ಕರೆಯುತ್ತಿದ್ದ ಅಭಿಮಾನಿಗಳು ಮತ್ತು ಮಕ್ಕಳಿಲ್ಲದಿದ್ದರೂ ಕೊರಗದೆ ಪ್ರೀತಿಯಿಂದ ಬಾಳ ದೋಣಿಗೆ ಹುಟ್ಟು ಹಾಕುತ್ತಿದ್ದ ಪತ್ನಿ ಭಾರತಿಯವರನ್ನು ಅವರು ಅನಾಥರನ್ನಾಗಿಸಿದ್ದಾರೆ.
Vishnu in Bandhana
PR


ವಿಷ್ಣುವರ್ಧನ್ ಇಲ್ಲದ ಕನ್ನಡ ಸಿನಿಮಾ ಜಗತ್ತನ್ನು ಊಹಿಸಲೂ ಕಷ್ಟವಾಗುತ್ತಿದೆ. ಅವರೆಂದರೆ ಗೌರವ, ಅವರೆಂದರೆ ಘನತೆ, ಅವರೆಂದರೆ ಧೈರ್ಯ, ಅವರೆಂದರೆ ಮೌನ, ಅವರೆಂದರೆ ಸಾಂತ್ವನ, ಅವರೆಂದರೆ ಸರಳತೆಯ ಸಾಕಾರಮೂರ್ತಿ-- ಹೀಗೆ ಕನ್ನಡ ನಾಡಿಗೆ, ಚಿತ್ರರಂಗಕ್ಕೆ ಅಗತ್ಯವಿದ್ದ ಎಲ್ಲವೂ ವಿಷ್ಣು ಅವರಲ್ಲಿತ್ತು.

ವಿಷ್ಣುವರ್ಧನ್ ಆಪತ್ಬಾಂಧವ, ಅನಾಥರಕ್ಷಕ, ಆಪ್ತಮಿತ್ರ, ಗುರು, ಮಾರ್ಗದರ್ಶಕ, ಆಧ್ಯಾತ್ಮಿಕ ಚಿಂತಕ, ಸಮಾಜ ಸೇವಕ ಮತ್ತು ಕೆಲವರಿಗೆ ನಿಗೂಢ ವ್ಯಕ್ತಿ. ಹಾಗಾಗಿ ಅವರ ಹೆಸರನ್ನು ಕೇವಲ ಐದಾರು ಪದಗಳಲ್ಲಿ ಹೇಳಿ ಮುಗಿಸಲಾಗದು.

ಯಾವತ್ತೂ ತನ್ನ ನೋವನ್ನು ಮತ್ತೊಬ್ಬರ ಮೇಲೆ ಹೇರಿದವರಲ್ಲ. ಮತ್ತೊಬ್ಬರ ನೋವನ್ನು ಡಂಗೂರ ಬಾರಿಸಿ ಕೇಳಿಸಿಕೊಂಡವರೂ ಅಲ್ಲ. ಯಾರಿಗೂ ತಿಳಿಯದಂತೆ ಸಹಾಯ ಮಾಡುವುದು ಅವರ ದೊಡ್ಡ ಗುಣಗಳಲ್ಲೊಂದು. ರಾಜಕೀಯ-ರಾಜಕಾರಣದಿಂದ ಅಗತ್ಯ ಅಂತರವನ್ನಿಟ್ಟುಕೊಂಡೇ ಸಾಗಿದ ಅವರು ಯಾವತ್ತೂ ಪ್ರಚಾರಕ್ಕಾಗಿ ಹಂಬಲಿಸಿದವರಲ್ಲ. ಟೀಕೆ-ಟಿಪ್ಪಣಿಗಳಿಗೆ ಜಪ್ಪೆನ್ನದೆ, ತನ್ನ ಆತ್ಮಸಾಕ್ಷಿಯನ್ನು ಹೆಚ್ಚಾಗಿ ನಂಬಿಕೊಂಡಿದ್ದವರು.

ವ್ಯಕ್ತಿತ್ವದಲ್ಲಿ ನಿಗೂಢತೆಯನ್ನೇ ಮನೆ ಮಾಡಿಕೊಂಡ ವಿಷ್ಣು ಚಿತ್ರರಂಗದಲ್ಲಿ ಆಪ್ತರಾಗಿ ಉಳಿದುಕೊಂಡದ್ದು ಅಂಬರೀಷ್ ಒಬ್ಬರಿಗೆ ಮಾತ್ರ. ದ್ವಾರಕೀಶ್ ಜತೆ ಹಲವು ಚಿತ್ರಗಳಲ್ಲಿ ನಟಿಸಿ ಒಂದೇ ಜೀವವೆನಿಸಿಕೊಂಡಿದ್ದರೂ, ತಪ್ಪು ಗ್ರಹಿಕೆಗಳಿಂದಾಗಿ ಜೋಡಿ ಬೇರಾದದ್ದು ಅವರ ಜೀವನದಲ್ಲಿನ ಬಹುದೊಡ್ಡ ದುರಂತ. ಆಪ್ತಮಿತ್ರ ಚಿತ್ರದಲ್ಲಿ ಈ ಸ್ನೇಹ ಪುನರುಜ್ಜೀವನಗೊಳ್ಳುವ ಲಕ್ಷಣಗಳು ಕಂಡಿದ್ದವು. ಆದರೆ ಅದು ಕೆಲವೇ ದಿನಗಳಿಗಷ್ಟೇ ಸೀಮಿತವಾಗಿ ಹೋಯಿತು.

ರಾಜ್ ಜೊತೆ ಚಿತ್ರ ಜೀವನದ ಆರಂಭದಲ್ಲಿ ಪೈಪೋಟಿಗೆ ಬಿದ್ದಿದ್ದರಾದರೂ ಅದು ಕೆಲವೇ ವರ್ಷಗಳಲ್ಲಿ ಸ್ನೇಹವಾಗಿ ಮಾರ್ಪಟ್ಟಿತ್ತು. ಈ ಬಗ್ಗೆ ಹುಟ್ಟಿದ್ದ, ಕೆದರಿದ್ದ ವಿವಾದಗಳೇನೆ ಇದ್ದರೂ ಇಂದು ಮಣ್ಣಲ್ಲಿ ಮಣ್ಣಾಗಿ ಹೋಗಿದೆ.
Vishnu in Nagara Havu
PR

ನಟನಾ ಚಕ್ರವರ್ತಿ...
ನಾಗರಹಾವು ಚಿತ್ರದಲ್ಲಿನ ಮುಂಗೋಪಿ ರಾಮಚಾರಿ, ಗಂಧದ ಗುಡಿಯ ಸುಂದರ ಖಳ ಆನಂದ, ಕರ್ಣ ಚಿತ್ರದ ತ್ಯಾಗಮಯಿ, ಮುತ್ತಿನಹಾರದ ಕೆಚ್ಚೆದೆ ಸೈನಿಕ, ಬಂಧನದ ವಿರಹಿ, ಸುಪ್ರಭಾತದ ಮೆಕ್ಯಾನಿಕ್, ಮಲಯ ಮಾರುತದ ಸಂಗೀತಪ್ರೇಮಿ, ನಿಷ್ಕರ್ಷದ ಕಮಾಂಡೋ, ನಿಶ್ಯಬ್ಧದ ಸಾಹಸಿ, ಯಜಮಾನದ ದೌಲತ್ತು... ಒಂದೇ ಎರಡೇ-- ವಿಷ್ಣುವನ್ನು ಮರೆಯಲು ಯಾರಿಗಾದರೂ ಕಾರಣಗಳೇ ಸಿಗದು.

ಪ್ರೇಮಿ, ಪೊಲೀಸ್, ರೌಡಿ, ಅಣ್ಣ, ಅಪ್ಪ ಯಾವುದೇ ಪಾತ್ರವಿರಲಿ, ಜೀವ ತುಂಬಿ ನಟಿಸುವುದು ವಿಷ್ಣು ಸ್ಪೆಶಾಲಿಟಿ. ಅದೆಂತಹಾ ಪಾತ್ರವಿದ್ದರೂ ನ್ಯಾಯ ಸಲ್ಲಿಸದೆ, ಬರೇ ಹರಕೆ ಸಲ್ಲಿಸುವ ಜಾಯಮಾನ ಅವರದ್ದಾಗಿರಲಿಲ್ಲ. ತರಾತುರಿಯಲ್ಲಿ ಚಿತ್ರೀಕರಣ, ನಿರ್ದೇಶಕರಿಗೆ ಕಿರಿಕಿರಿ, ಸಹನಟರಿಗೆ ಅಗೌರವ, ನಟಿಯರೊಂದಿಗೆ ಅಸಭ್ಯ ವರ್ತನೆ, ಸಂಭಾವನೆ ಚೌಕಾಶಿ ಇವೆಲ್ಲ ಅವರ ಜೀವನದ ನಿಘಂಟಿನಲ್ಲಿ ನೆರಳಾಡಿಸದ ಪದಗಳು.

ಅದು ಅವರ ವೃತ್ತಿಜೀವನದ ಕೊನೆಯ ಹಂತದವರೆಗೂ ಮುಂದುವರಿದಿತ್ತು. ಅವರ ಬಿಡುಗಡೆಯಾದ ಕೊನೆಯ ಚಿತ್ರ ಬಳ್ಳಾರಿ ನಾಗ. ಚಿತ್ರೀಕರಣ ಮುಗಿದು ಬಿಡುಗಡೆಗೆ ಕಾಯುತ್ತಿರುವ ಚಿತ್ರ ಆಪ್ತರಕ್ಷಕ. ಚಿತ್ರೀಕರಣವಾಗಬೇಕಿದ್ದ ಚಿತ್ರ ಮಾಸ್ಟರ್. ಕನ್ನಡ ಹೊರತಾಗಿ ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ವಿಷ್ಣು ನಟಿಸಿದ್ದು ಅವರ ಹೆಗ್ಗಳಿಕೆ.

ಮೊನ್ನೆ ಮೊನ್ನೆಯವರೆಗೆ ರೌಡಿ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದ ಜೀವವದು. ಅಪಾಯಕಾರಿ ಕುದುರೆ ಸವಾರಿಯಲ್ಲಿ ಬಿದ್ದರೂ ಎದ್ದು ಸುಧಾರಿಸಿ 'ಏನೂ ಆಗಿಲ್ಲ' ಎಂದು ಉತ್ತರಿಸುವ ಗಟ್ಟಿಗನ ಎದೆಯನ್ನು ಇಷ್ಟು ಬೇಗ ಜವರಾಯ ಕುಟ್ಟುತ್ತಾನೆ ಎಂದು ಅರಿತವರಾರು?
Vishnu
PR


ಅವರೇ ಹಾಡಿದ 'ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ..' ಗೀತೆಯ ಮಾಧುರ್ಯವನ್ನು ಮರೆಯಲುಂಟೆ?, 'ಈ ಭೂಮಿ ಬಣ್ಣದ ಬುಗುರಿ..', 'ನೂರೊಂದು ನೆನಪು ಎದೆಯಾಳದಿಂದ..', 'ಆ ಕರ್ಣನಂತೆ.. ನೀ ದಾನಿಯಾದೆ...' ಪ್ರೇಮದಾ ಕಾದಂಬರಿ, ಬರೆದೆನು ಕಣ್ಣೀರಲಿ.... ಹೀಗೆ ಒಂದೆರಡಲ್ಲ ನೂರಾರು ಗೀತೆಗಳಿಗೆ ಹೆಜ್ಜೆ ಹಾಕಿ ಕಲಾ ರಸಿಕರ ಹೃನ್ಮನಗಳನ್ನು ತಣಿಸಿ, ತೋಯಿಸಿದ ಕೀರ್ತಿ ವಿಷ್ಣುವರ್ಧನ್ ಅವರದ್ದು.

ನಾಯಕತ್ವ ಬೇಕೆಂದವರಲ್ಲ...
ವರನಟ ರಾಜ್ ಕುಮಾರ್ ಅಗಲಿದ ನಂತರ ನಾಯಕತ್ವ ಕೊರತೆ ಎದುರಿಸುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಸಾಹಸಸಿಂಹ ವಿಷ್ಣುವರ್ಧನ್ ಮಾರ್ಗದರ್ಶಕರಾಗಿದ್ದರು. ಅದು ಬುಧವಾರ ಸೂರ್ಯ ಹುಟ್ಟುವ ಮೊದಲೇ ಅವರ ಹೆಗಲಿಂದ ಜಾರಿಕೊಂಡಿದೆ.

ರಾಜ್ ನಿಧನದ ಆಘಾತವನ್ನು ಚಿತ್ರರಂಗ ಇನ್ನೂ ಪೂರ್ತಿಯಾಗಿ ಅರಗಿಸಿಕೊಂಡಿಲ್ಲ, ಚೇತರಿಸಿಕೊಂಡಿಲ್ಲ. ನಿನ್ನೆಯಷ್ಟೇ ಸುಗಮ ಸಂಗೀತ ಲೋಕದ ಗಂಧರ್ವ ಗಾನ ಗಾರುಡಿಗ ಸಿ. ಅಶ್ವತ್ಥ್ ಹೊರಟು ಹೋಗಿದ್ದರು. ಅವರ ಬೆನ್ನಿಗೆ ವಿಷ್ಣು ತಿರುಗಿ ಬಾರದ ಊರಿಗೆ ಹೊರಟು ಹೋದ ಸುದ್ದಿ ಎಲ್ಲರಿಗೂ ಬರಸಿಡಿಲು.

ಯಾವತ್ತೂ ನಾಯಕತ್ವ ಬೇಕೆಂದು ವಿಷ್ಣು ಮುಂದೆ ಬಂದವರಲ್ಲ. ಇತ್ತೀಚಿನ ವರ್ಷಗಳಲ್ಲಿ ಆಧ್ಯಾತ್ಮದತ್ತ ಹೆಚ್ಚಿನ ಒಲವು ತೋರಿಸುತ್ತಿದ್ದ ಅವರು, ಚಿತ್ರರಂಗದಲ್ಲಿ ಅಭಿಮಾನಿಗಳಿಗೋಸ್ಕರ ಮಾತ್ರ ಉಳಿದುಕೊಂಡಿದ್ದೇನೆ ಎಂದು ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದರು. ನಾಯಕನಾಗಲು ನಾನು ಯಾರು, ನಾನೇ ಏಕೆ ನಾಯಕನಾಗಬೇಕು ಎಂಬಂತಹ ವಿಚಿತ್ರ ಪ್ರಶ್ನೆಗಳು ಅವರಿಂದ ಬರುತ್ತಿದ್ದವು. ಪತ್ರಿಕಾಗೋಷ್ಠಿಗಳಲ್ಲಂತೂ ಮಾತಿಗೆ ಕೂತರೆ ವೇದಾಂತವನ್ನೇ ಅವರು ಉಸಿರಾಡುತ್ತಿರುವುದು ತಿಳಿದು ಬರುತ್ತಿತ್ತು.
Vishnu, Raj, Ambi
PR


ಯಾರು ಎಷ್ಟೇ ಟೀಕೆಗಳನ್ನು ಮಾಡಿದರೂ ಅವುಗಳತ್ತ ಶಾಂತಚಿತ್ತರಾಗಿ ಉಳಿದುಕೊಳ್ಳುವುದು ಅವರ ವಿಶೇಷತೆ. ಇವರೇನಾ ಆ ರಾಮಚಾರಿ ಎಂಬಷ್ಟು ಬದಲಾವಣೆ ಅವರಲ್ಲಿ ಕಾಣಬಹುದಾಗಿತ್ತು.

ಪ್ರತಿ ಕಲಾವಿದರನ್ನೂ ಗೌರವದಿಂದಲೇ ಅದರಲ್ಲೂ ಸ್ತ್ರೀಯರಿಗೆ ಹೃದಯದಲ್ಲಿ ಮಾತೆಯ ಸ್ಥಾನ ಕಲ್ಪಿಸಿದ್ದ ಅವರು ಯಾವತ್ತೂ ಮತ್ತೊಬ್ಬರನ್ನು ಉದ್ದೇಶಪೂರ್ವಕವಾಗಿ ನೋಯಿಸಿದವರಲ್ಲ. ತನ್ನಿಂದಾಗಿ ಯಾರಿಗೂ ತೊಂದರೆಯಾಗಬಾರದೆಂಬುದೇ ಅವರ ಆಶಯವಾಗಿತ್ತು.

ಕನ್ನಡದ ಉಸಿರಿಗೆ ಧಕ್ಕೆ ಬರುತ್ತದೆ ಎಂಬಂತಾದಾಗ ಬೀದಿಗಿಳಿದು ಹೋರಾಟ ಮಾಡಿದ ಛಾತಿ ಅವರದ್ದು. ರಾಜ್ ಕುಮಾರ್, ಅಂಬರೀಷ್ ಜತೆ ಸೇರಿ ಹಲವು ಪ್ರತಿಭಟನೆ, ರ‌್ಯಾಲಿಗಳಲ್ಲಿ ಪಾಲ್ಗೊಂಡು ನ್ಯಾಯ ದೊರಕಿಸಿದ್ದ ವಿಷ್ಣು, ಇತ್ತೀಚಿನ ವರ್ಷಗಳಲ್ಲಿ ಎಲ್ಲವೂ ದೈವೇಚ್ಛೆ ಎಂಬಂತೆ ನಡೆದುಕೊಂಡಿದ್ದು ಅಚ್ಚರಿ ಮೂಡಿಸಿತ್ತು.

ಹೃದಯ ವೈಶಾಲ್ಯತೆಯಲ್ಲಿ ಅಂಬರೀಷ್ ಅವರಿಗೆ ಸರಿಗಟ್ಟಿ ನಿಲ್ಲುವ ವ್ಯಕ್ತಿತ್ವ ವಿಷ್ಣುವರ್ಧನ್‌ರದ್ದು. ಮಕ್ಕಳಿಲ್ಲದ ಕಾರಣಕ್ಕೆ ಕೊರಗದೆ ಇಬ್ಬರು ದತ್ತು ಮಕ್ಕಳನ್ನು ಪಡೆದ ವಿಷ್ಣು-ಭಾರತಿ, ಸ್ನೇಹಲೋಕ ಎಂಬ ಸಂಘಟನೆಯೊಂದನ್ನು ಹುಟ್ಟು ಹಾಕಿ ಕೈಲಾದ ಸಹಾಯವನ್ನು ಬಡ-ಬಗ್ಗರಿಗೆ ಮಾಡುತ್ತಿದ್ದರು. ಇತ್ತೀಚೆಗೆ ಉತ್ತರ ಕರ್ನಾಟಕ ನೆರೆಯಲ್ಲಿ ಮುಳುಗಿದಾಗಲೂ ವಿಷ್ಣು ಬೀದಿಗಿಳಿದು ನಿಧಿ ಸಂಗ್ರಹಿಸಿದ್ದನ್ನು ಕೂಡ ಮರೆಯಲಾಗದು.

ಕನ್ನಡ ಚಿತ್ರರಂಗಕ್ಕೆ, ಕರ್ನಾಟಕಕ್ಕೆ, ಅಭಿಮಾನಿಗಳಿಗೆ ಇಷ್ಟೆಲ್ಲಾ ಆಗಿದ್ದ ವಿಷ್ಣುವರ್ಧನ್ ಅಗಲಿಕೆಯ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ಮತ್ತೊಬ್ಬ ರಾಮಚಾರಿಯನ್ನು, ಭಗ್ನಪ್ರೇಮಿ ಡಾ. ಹರೀಶ್, ಯಜಮಾನನನ್ನು ಹುಡುಕಿ ತರುವುದು ಸಾವಿಲ್ಲದ ಮನೆಯ ಸಾಸಿವೆಯನ್ನು ತರುವಷ್ಟೇ ಕಷ್ಟದ ಕೆಲಸ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಷ್ಟೇ ನಮ್ಮಿಂದ ಸಾಧ್ಯವಾಗಬಹುದಾದ ಕೆಲಸ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಸಾಹಸಸಿಂಹ, ಅಂಬರೀಷ್, ರಾಜ್ಕುಮಾರ್, ಕನ್ನಡ ಸಿನಿಮಾ