ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಕೆ.ಎಸ್‌.ಎಲ್‌. ಸ್ವಾಮಿ ಎಂಬ ಬಹುಮುಖ ಪ್ರತಿಭೆ (K.S.L. Swamy | Maha Edabidangi | SPB | Kannada Movies)
PR


ವಿಶೇಷ ವರದಿ: ಯಗಟಿ ರಘು ನಾಡಿಗ್‌

ಕೆ.ಎಸ್‌.ಎಲ್‌. ಸ್ವಾಮಿಯವರನ್ನು 'ರವೀ' ಎಂದೂ ಕರೆಯುತ್ತಾರೆ. ಚಿತ್ರರಂಗದ ಹಲವು ಹನ್ನೊಂದು ವಲಯಗಳಿಗೆ ಸಂಬಂಧಿಸಿ ಹೇಳುವುದಾದರೆ ಇವರು ಬೆಳಗದ ವಲಯವಿಲ್ಲ. ಕಥೆ-ಚಿತ್ರಕಥೆ-ಸಾಹಿತ್ಯ-ಸಂಗೀತ-ಅಭಿನಯ-ನಿರ್ದೇಶನ-ಗಾಯನ-ಸಂಭಾಷಣೆ ಹೀಗೆ ನಿಮಗೆ ಯಾವ ವಿಭಾಗ ಬೇಕು ಸ್ವಾಮೀ? ಇಲ್ಲಿ ಉಲ್ಲೇಖಿಸಿದ ಎಲ್ಲಾ ವಿಭಾಗಗಳಲ್ಲೂ ರವಿಯವರಿಗೆ ಪರಿಣತಿಯಿದೆ ಎಂಬುದು ಹೆಮ್ಮೆಯ ಸಂಗತಿ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪುಟ್ಟಣ್ಣ ಕಣಗಾಲ್‌ ಕೂಡಾ ನಿರ್ದೇಶನ ವಿಭಾಗ ಮಾತ್ರವೇ ಅಲ್ಲದೇ ಹಲವು ಹನ್ನೊಂದು ವಿಭಾಗಗಳಲ್ಲಿ ಪರಿಣತಿಯನ್ನು ಸಾಧಿಸಿದ್ದರು. ಈ ಕಾರಣದಿಂದಲೇ ಇರಬೇಕು ರವಿಯವರನ್ನು 'ಅಭಿನವ ಪುಟ್ಟಣ್ಣ' ಎಂದು ಚಿತ್ರೋದ್ಯಮಿಗಳು ಕರೆಯುತ್ತಾರೆ.

ಇದ್ದಕ್ಕಿದ್ದಂತೆ ರವಿಯವರ ಕುರಿತು ಇಲ್ಲಿ ಪ್ರಸ್ತಾವಿಸುತ್ತಿರುವುದಕ್ಕೆ ಕಾರಣವಿದೆ. ಎರಡು ಚಿತ್ರಕ್ಕೆ ಕ್ಲಾಪ್‌ಬಾಯ್‌ ಆಗಿದ್ದುಕೊಂಡು ಮೂರನೇ ಚಿತ್ರದ ಹೊತ್ತಿಗೆ ಸಹಾಯಕ ನಿರ್ದೇಶಕನಾಗಿ ನಾಲ್ಕನೇ ಚಿತ್ರದ ಹೊತ್ತಿಗೆ ಸ್ವತಃ 'ಕ್ಯಾಪ್ಟನ್‌ ಆಫ್‌ ದಿ ಷಿಪ್‌' ಎಂಬ ಕಿರೀಟದ ಅಡಿಯಲ್ಲಿ ನಿರ್ದೇಶಕರಾಗಿಬಿಡುವ ಅಥವಾ ಹಾಗಾಗಲು ಹವಣಿಸುವ ಉತ್ಸಾಹಿಗಳು ರವಿಯವರಿಂದ ಕಲಿಯುವುದು ಬಹಳಷ್ಟಿದೆ. ನಿರ್ದೇಶನ ವೃತ್ತಿಗೆ ಇಳಿಯ ಬಯಸುವವರು ತಮ್ಮ ಕಸುಬಿನ ಜೊತೆಜೊತೆಗೆ ಈ ಮಣ್ಣಿನ ಸಾಹಿತ್ಯ-ಸಂಗೀತ-ಭಾಷಾಶುದ್ಧಿಯ ಕಡೆಗೂ ಕೊಂಚ ಗಮನ ಹರಿಸಬೇಕಾಗುತ್ತದೆ ಎಂಬುದನ್ನು ರವಿಯವರಿಂದ ನೋಡಿ ಕಲಿಯುವುದಿದೆ.

ಇಂದಿನ ಚಿತ್ರರಸಿಕರಿಗೆ ರವಿಯವರ ಹಳೆಯ ಚಿತ್ರಗಳು ನೆನಪಿಲ್ಲದಿರಬಹುದು. ಆದರೆ 'ಮಿಥಿಲೆಯ ಸೀತೆಯರು', 'ಹರಕೆಯ ಕುರಿ', 'ಮಲಯ ಮಾರುತ' ಚಿತ್ರಗಳಂತೂ ಗೊತ್ತಿರುತ್ತವೆ. ಬಡಾಯಿ ಕೊಚ್ಚಿಕೊಳ್ಳುವ ಒಬ್ಬ ಬೇಜವಾಬ್ದಾರಿಯ ಅಪ್ಪ ತನ್ನ ಹೆಣ್ಣುಮಕ್ಕಳ ಮದುವೆಯನ್ನು ಮಾಡಲಾಗದೆ ಕುಟುಂಬವನ್ನು ಹೈರಾಣಾಗಿಸುವ ಪರಿಯನ್ನು 'ಮಿಥಿಲೆಯ ಸೀತೆಯರು' ಚಿತ್ರದಲ್ಲಿ ಕಾಣಬಹುದು.

ರಾಜಕೀಯದ ಆಟದ ಸುಳಿಗೆ ಸಿಕ್ಕ ಮಧ್ಯಮವರ್ಗದ ಕುಟುಂಬವೊಂದನ್ನು ಪುಢಾರಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು 'ಹರಕೆಯ ಕುರಿ' ಚಿತ್ರದಲ್ಲಿ ಕಾಣಬಹುದಾಗಿತ್ತು. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಕಾಶ್‌ ರೈ ಮಿಂಚಿದರೆ, 'ಸಿದ್ಲಿಂಗು' ಪಾತ್ರದಲ್ಲಿ ಸಾಹಸಿಂಹ ವಿಷ್ಣುವರ್ಧನ್‌ ಕಾಣಿಸಿಕೊಂಡಿದ್ದರು. ಇನ್ನು 'ಮಲಯ ಮಾರುತ' ಚಿತ್ರವಂತೂ ದೃಶ್ಯವೈಭವ ಮತ್ತು ಸಂಗೀತ ವೈಭವಗಳ ಸಮ್ಮಿಲವಾಗಿತ್ತು. ಈ ಚಿತ್ರದ ಸಂಗೀತ ನಿರ್ದೇಶನಕ್ಕೆ ವಿಜಯ ಭಾಸ್ಕರ್‌ರವರಿಗೆ 'ಸುರ್‌ ಸಿಂಗಾರ್‌ ಸಂಸದ್‌' ಪ್ರಶಸ್ತಿಯು ಲಭಿಸಿತು ಎಂಬುದು ಹೆಮ್ಮೆಯ ಸಂಗತಿ.

ನಿಷ್ಕಲ್ಮಶ ಹೃದಯದ ರವಿಯವರು ಕಡಕ್‌ ಮಾತಿನ ಮನುಷ್ಯ.

'ಜೀ ಹುಜೂರ್‌' ಎಂಬ ಜಾಯಮಾನದವರೇ ಹೆಚ್ಚಿರುವ ಚಿತ್ರರಂಗದಲ್ಲಿ ರವಿಯವರು ತಮ್ಮ ಈ ಗುಣದಿಂದ ವಿರೋಧಗಳನ್ನು ಕಟ್ಟಿಕೊಂಡದ್ದೂ ಇದೆ. ಆದರೆ ಅವರು ತಮ್ಮತನವನ್ನು ಬಿಟ್ಟುಕೊಟ್ಟಿಲ್ಲ. ಒಂದು ವರ್ಷದ ಹಿಂದೆ ಜೀ ವಾಹಿನಿಯಲ್ಲಿ 'ಗುಣಗಾನ' ಎಂಬ ರಿಯಾಲಿಟಿ ಷೋ ಬಿತ್ತರವಾಗುತ್ತಿದ್ದಾಗ, ತೀರ್ಪುಗಾರರ ಸ್ಥಾನದಲ್ಲಿದ್ದ ರವಿ ಕೆಲವೊಂದು ಬೇಜವಾಬ್ದಾರಿಯ ಸ್ಪರ್ಧಿಗಳಿಗೆ ಮುಖದ ನೀರಿಳಿಸುವ ಜೊತೆಜೊತೆಗೇ ಸರಿಯಾದ ಹಾದಿಯನ್ನು ತೋರಿಸುತ್ತಿದ್ದುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ಸ್ವಭಾವಕ್ಕೆ ಇದು ನಿದರ್ಶನ.

ಹಲವಾರು ಚಲನಚಿತ್ರಗಳನ್ನು ನಿರ್ದೇಶಿಸಿದ ಸ್ವತಃ ಅನುಭವ ಮೂಟೆಯೇ ಆಗಿದ್ದರೂ, ಜಿ.ವಿ.ಅಯ್ಯರ್‌ರವರು 'ಆಚಾರ್ಯ' ಸರಣಿಯ ಚಿತ್ರಗಳನ್ನು ರೂಪಿಸಹೊರಟಾಗ ಅವರಿಗೆ ಸಹಾಯಕರಾಗಿ ನಿಂತಿದ್ದು ಇದೇ ರವಿಯವರು. ಕಲಿಕೆಗೆ ಕೊನೆಯಿಲ್ಲ ಎಂಬುದಕ್ಕೆ ಈ ನಿದರ್ಶನ ಸಾಕಲ್ಲವೇ.

ಇಷ್ಟಾಗಿಯೂ ರಾಜ್‌ಕುಮಾರ್‌ರವರನ್ನು ಹಾಕಿಕೊಂಡು 'ಭಕ್ತ ಕುಚೇಲ' ಚಿತ್ರವನ್ನು ನಿರ್ದೇಶಿಸಲಾಗಲಿಲ್ಲವಲ್ಲ ಎಂಬ ಕೊರಗು ಅವರಲ್ಲಿ ಉಳಿದುಕೊಂಡಿದೆ. ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಖುಷ್ಬೂರನ್ನು ಪ್ರಧಾನ ಪಾತ್ರದಲ್ಲಿರಿಸಿ 'ಮಹಾ ಎಡಬಿಡಂಗಿ' ಎಂಬ ಚಿತ್ರವನ್ನು ರವಿಯವರು ನಿರ್ದೇಶಿಸಿದ್ದರು.

ಆದರೆ ಕಾರಣಾಂತರಗಳಿಂದ ಅದು ಜನಮನವನ್ನು ಸೂರೆಗೊಳ್ಳಲಿಲ್ಲ. 'ಶುಭಮಂಗಳ' ಚಿತ್ರದ 'ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸೂ', 'ಸಂಘರ್ಷ' ಚಿತ್ರದ 'ಯೌವನದಾ ಹೊಳೆಯಲ್ಲೀ ಈಜಾಟವಾಡಿದರೇ', ಪ್ರಭಾಕರ್‌ ಅಭಿನಯದ 'ಮುತ್ತೈದೆ ಭಾಗ್ಯ' ಚಿತ್ರದ 'ಉರಿವ ಕಣ್ಣೀರಿಗೇ ಬೆಲೆಯು ಇನ್ನೆಲ್ಲಿದೇ' ಎಂಬ ಹಾಡುಗಳು ಅವರ ಕಡಕ್‌ ಕಂಠಕ್ಕೆ ಸಾಕ್ಷಿ. 'ಜಂಬೂ ಸವಾರಿ', 'ಎಲ್ಲಾ ಅವನ ಹೆಸರಿನಲ್ಲಿ' (ಈ ಚಿತ್ರವಿನ್ನೂ ಸಾರ್ವಜನಿಕವಾಗಿ ಬಿಡುಗಡೆಯಾಗಿಲ್ಲ) ಚಿತ್ರಗಳು ಹಾಗೂ 'ಮ‌ೂಡಲ ಮನೆ' ಎಂಬ ಧಾರಾವಾಹಿ ಅವರ ಅಭಿನಯ ಪ್ರತಿಭೆಗೆ ಸಾಕ್ಷಿಯಾಗಿ ನಿಂತಿವೆ.

ಎಪ್ಪತ್ತರ ಆಸುಪಾಸಿನಲ್ಲಿರುವ ರವಿ ಈಗಲೂ ತಮ್ಮ ಉತ್ಸಾಹ-ಚೈತನ್ಯವನ್ನು ಕಳೆದುಕೊಂಡಿಲ್ಲ. ಸಿನಿಮಾ ಸಂಬಂಧಿ ಸಭೆ-ಸಮಾರಂಭಗಳಲ್ಲಿ ಈಗಲೂ ಕಾಣಿಸಿಕೊಳ್ಳುತ್ತಾರೆ. ತೀರಾ ಹಳೆಯ ಮಿತ್ರರು-ಸಹೋದ್ಯೋಗಿಗಳು ಎದುರಾಗಿ ನಾಲ್ಕು ಒಳ್ಳೆಯ ಮಾತಾಡಿದರೆ ಕಣ್ತುಂಬಿಕೊಳ್ಳುತ್ತಾರೆ. ಅದು ಅವರ ಮಗುವಿನಂಥ ಮನಸ್ಸಿಗೆ ನಿದರ್ಶನ.

ಕೆ.ಎಸ್‌.ಎಲ್‌.ಸ್ವಾಮಿ ಉರುಫ್‌ ರವಿಯವರು ಬಹಳ ದಿನಗಳ ಕಾಲ ಚಿತ್ರರಂಗಕ್ಕೆ ಮಾರ್ಗದರ್ಶಿಗಳಾಗಿರಲಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ