ಲೇಖನ
ಮುಖ್ಯ ಪುಟ » ಮನರಂಜನೆ » ಯಕ್ಷಗಾನ » ಲೇಖನ » 1955ರಲ್ಲೇ ಬೆಂಗಳೂರಲ್ಲಿ ವಿಜೃಂಭಿಸಿತ್ತು ದಕ್ಷಯಜ್ಞ (Yakshagana in Bangalore | Pa Go | Padyana Gopalakrishna | Peruvodi Narayana Bhat)
ಹಿಂದಿನದು|ಮುಂದಿನದು
ಪದ್ಯಾಣ ಗೋಪಾಲಕೃಷ್ಣ (ಪ.ಗೋ.) (1928-1997)
WD
ಪದ್ಯಾಣ ಗೋಪಾಲಕೃಷ್ಣ ಅವರ ಹುಟ್ಟೂರು ದಕ್ಷಿಣ ಕನ್ನಡ ಮತ್ತು ಈಗಿನ ಕಾಸರಗೋಡು ಜಿಲ್ಲೆಗಳ ಗಡಿಯಂಚಿನಲ್ಲಿರುವ ಅಡ್ಯನಡ್ಕ. 1928ರಲ್ಲಿ ಜನಿಸಿದ ಅವರು 1956ರಲ್ಲಿ ಕನ್ನಡ ದಿನ ಪತ್ರಿಕೆ 'ವಿಶ್ವ ಕರ್ನಾಟಕ' ಮುಖಾಂತರ ಬೆಂಗಳೂರಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಮುಂದೆ ತಾಯಿನಾಡು, ಕಾಂಗ್ರೆಸ್ ಸಂದೇಶ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ 'ಶಕ್ತಿ' ಪತ್ರಿಕೆಯ ಬೆಂಗಳೂರಿನ ವರದಿಗಾರರಾಗಿದ್ದವರು ಪ.ಗೋ.

1959ರ ಸುಮಾರಿಗೆ ಮಂಗಳೂರಿಗೆ ಬಂದು ನೆಲಸಿ ನವಭಾರತ, ಕನ್ನಡವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ವರದಿಗಾರರಾಗಿ ಮುಂದುವರಿದರು. 1963-1964 ರಲ್ಲಿ ಮಂಗಳೂರಿನಲ್ಲಿ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗುವ ಮೂಲಕ, ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. 1994 ರಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತ್ತಿ ಹೊಂದುವ ಮೊದಲು ತಮ್ಮ ಒಂಬತ್ತು ವರ್ಷಗಳನ್ನು ಇಂಗ್ಲಿಷ್ ಪತ್ರಿಕಾರಂಗದ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ಸಲ್ಲಿಸಿ ಪತ್ರಿಕಾರಂಗಕ್ಕೆ ವಿದಾಯ ಹೇಳಿದರೂ ಅಂಕಣ ಬರವಣಿಗೆಯನ್ನು ಕೊನೆ ತನಕ ಮುಂದುವರಿಸಿ ದಿನಾಂಕ 10-8-1997ರಂದು ಈ ಪ್ರಪಂಚಕ್ಕೆ ವಿದಾಯ ಹೇಳಿದರು.

1956 ರಿಂದ 1997ನೇ ಇಸವಿವರೆಗೆ ನಾಲ್ಕು ದಶಕಗಳಷ್ಟು ದೀರ್ಘ ಕಾಲವಧಿಯಲ್ಲಿ ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಪ.ಗೋ. ಬರೆದ ಅಂಕಣ ಸಾಹಿತ್ಯವು ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದೆ. ಬೆಳ್ಳಿಯ ಸೆರಗು ಎಂಬ ಸಾಮಾಜಿಕ ಕಾದಂಬರಿ, ಗನ್ ಬೋ ಸ್ಟ್ರೀಟ್ ಎಂಬ ಮತ್ತು ಓ.ಸಿ.67 ಎಂಬ ಪತ್ತೇದಾರಿ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ಹೆಗ್ಗಳಿಕೆ ಅವರದ್ದು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾನ್ಯತೆ ಪಡೆದು ಕರ್ನಾಟಕ ರಾಜ್ಯ ವಾರ್ತಾ ಮತ್ತು ವಿದ್ಯುತ್ ಸಚಿವರಿಂದ ವಿಧ್ಯುಕ್ತವಾಗಿ ಉದ್ಘಾಟಿಸಿ 6 ಅಕ್ಟೋಬರ್ 1976ರಂದು ಪ್ರಾರಂಭಗೊಂಡ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯ ಹಾಗೂ ಸಂಘದ ಪ್ರಥಮ ಕಾರ್ಯದರ್ಶಿಯಾಗಿದ್ದವರು ಪ.ಗೋಪಾಲಕೃಷ್ಣ. ಪ್ರತಿ ವರ್ಷ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗಾಗಿ ಪ.ಗೋ. ಪ್ರಶಸ್ತಿ ನೀಡಲಾಗುತ್ತಿರುವುದೂ ಇಲ್ಲಿ ಸ್ಮರಣಾರ್ಹ.
ಹಿಂದಿನದು|ಮುಂದಿನದು