ಲೇಖನ
ಮುಖ್ಯ ಪುಟ » ಮನರಂಜನೆ » ಯಕ್ಷಗಾನ » ಲೇಖನ » ಏಳು ದಶಕಗಳ ಯಕ್ಷ ಸೇವೆ: ಬನಾರಿ ಗೋಪಾಲಕೃಷ್ಣ ಕಲಾಸಂಘ (Yakshagana Article | Banari Gopalakrishna Kala Sangha | Delampadi)
WD

ಒಂದು ಯಕ್ಷಗಾನ ಸಂಘವು ಸುಮಾರು ಎಪ್ಪತ್ತು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತ ನಿರಂತರವಾಗಿ ಕ್ರಿಯಾಶೀಲವಾಗಿದೆ ಎಂದರೆ ಅದು ಗಿನ್ನೆಸ್ ದಾಖಲೆಯೇ ಆಗದೆ? ಅಂಥದ್ದಕ್ಕೆ ಒಂದು ಉದಾಹರಣೆ ಇಲ್ಲಿದೆ.

ಸುಳ್ಯ ತಾಲೂಕಿನ ದೇಲಂಪಾಡಿ ಎಂಬ ಪುಟ್ಟ ಗ್ರಾಮದಲ್ಲಿ ಜೀವನ ನಿರ್ವಹಣೆಯೇ ಉದ್ದೇಶವಾಗಿ ವಲಸೆ ಬಂದದ್ದಾದರೂ ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ಟರು ತಮ್ಮೊಡನೆ ಯಕ್ಷಗಾನ ಕಲೆಯನ್ನೂ ಹೊತ್ತು ತಂದಿದ್ದರು. ಹಾಗಾಗಿ ಮಣ್ಣಿನಲ್ಲಿ ಅಡಿಕೆ ಗಿಡ ನೆಡುವುದರೊಂದಿಗೆ ಸ್ಥಳೀಯ ಜನರ ಬದುಕಿನಲ್ಲಿ ಯಕ್ಷಗಾನ ಕಲೆಯ ಬೀಜಗಳನ್ನೂ ಬಿತ್ತಿದರು. ಈ ಕಲೆಯ ಕೃಷಿಗೆ ನೀರು - ನೆರಳು ನೀಡುವುದಕ್ಕಾಗಿ 1943 ರಲ್ಲಿ ಅವರೇ ಹುಟ್ಟು ಹಾಕಿದ ಬನಾರಿ ಶ್ರೀ ಗೊಪಾಲಕೃಷ್ಣ ಯಕ್ಷಗಾನ ಕಲಾಸಂಘವು ಇಂದಿಗೂ ಒಂದು ಆಧಾರ ಶಕ್ತಿಯಾಗಿ ಯಕ್ಷಗಾನವನ್ನು ಬೆಳೆಸಿಕೊಂಡು ಬಂದಿರುವುದು ಒಂದು ದಾಖಲೆಯೇ ಸರಿ.

ವಿದ್ಯಾಕ್ಷೇತ್ರದಲ್ಲಿ ಮಾಸ್ತರರಾಗಿದ್ದಂತೆಯೇ ಕಲಾಕ್ಷೇತ್ರದಲ್ಲಿಯೂ ಕೀರಿಕ್ಕಾಡು ವಿಷ್ಣು ಭಟ್ಟರು ಮಾಸ್ತರರೇ ಆಗಿದ್ದರು. ಅವರು ಯಕ್ಷಗಾನದ ಸರ್ವಾಂಗಗಳಲ್ಲಿಯೂ ಕಲಾಭಿಜ್ಞತೆ ಹೊಂದಿದವರಾಗಿದ್ದರು. ಸ್ವತಃ ಯಕ್ಷಗಾನ ಪ್ರಸಂಗಕರ್ತರಾಗಿ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಿದವರು. ಪೌರಾಣಿಕ ಪಾತ್ರಗಳ ರೂಪ-ಗುಣ-ಭಾವಗಳನ್ನು ಪ್ರದರ್ಶನದಲ್ಲೂ ಮಾತಿನಲ್ಲೂ ಹೇಗೆ ಪಡಿಮೂಡಿಸಬೇಕೆಂಬ ಬಗ್ಗೆ ಅವರಲ್ಲಿ ನಿಖರವಾದ ಕಲ್ಪನೆ ಇತ್ತು. ಹಾಗಾಗಿಯೇ ತಾಳಮದ್ದಳೆ ಕ್ಷೇತ್ರದ ಉದ್ಧಾಮ ಕಲಾವಿದರಾಗಿ ಮೆರೆದ ದಿ. ಶೇಣಿ ಗೋಪಾಲಕೃಷ್ಣ ಭಟ್ಟರು ಇವರಿಂದ ರೂಪುಗೊಂಡರು. ಅಂತೆಯೇ ಯಕ್ಷಗಾನ ಬಯಲಾಟದ ಅದ್ವಿತೀಯ ಕೋಲುಕಿರೀಟದ ರಾಜವೇಷಧಾರಿಯಾಗಿ ರಕ್ತಬೀಜ, ಕರ್ಣ ಇತ್ಯಾದಿ ಪಾತ್ರಗಳಲ್ಲಿ ಮಿಂಚಿದ ದಿ. ಕೇದಗಡಿ ಗುಡ್ಡಪ್ಪ ಗೌಡರೂ ಇವರ ಶಿಷ್ಯರಾಗಿದ್ದರು. ಹೀಗೆ ಯಕ್ಷಗಾನ ಬಯಲಾಟದ ರಂಗಸ್ಥಳಕ್ಕೂ ತಾಳಮದ್ದಳೆಯ ಅರ್ಥಗಾರಿಕೆಯ ವೇದಿಕೆಗೂ ಕಲಾವಿದರನ್ನು ರೂಪಿಸಿಕೊಟ್ಟ ಹಿರಿಮೆ ಅವರದು.

ಯಕ್ಷಗಾನ ಕಲಾವಿದರಿಗೆ ಎಲ್ಲ ಜಾತಿಗಳಲ್ಲೂ ಅಡ್ಡಪಂಕ್ತಿ ಇದ್ದ ಕಾಲದಲ್ಲಿ ಈ ಕಲೆಗೆ ಮರ್ಯಾದೆಯನ್ನು ತಂದುಕೊಟ್ಟ ಹಿರಿಯರ ಸಾಲಿನಲ್ಲಿ ಕೀರಿಕ್ಕಾಡು ಮಾಸ್ತರರೂ ನಿಲ್ಲುತ್ತಾರೆ. ತಮ್ಮದೇ ಮನೆಯ ಚಾವಡಿಯಲ್ಲಿ ತರಬೇತಿ ಶಾಲೆಯನ್ನು ಆರಂಭಿಸಿದ ಧೈರ್ಯ ಅಂದಿನ ದಿನಗಳಲ್ಲಿ ದೊಡ್ಡದೇ. ಅವರ ಮಾಸ್ತರಿಕೆಯ ಶಿಸ್ತು ಯಕ್ಷಗಾನಕ್ಕೂ ಚಾಚಿದ್ದು ಈ ಕಲೆಯ ಮರ್ಯಾದೆಯನ್ನು ಏರಿಸಲು ಸಹಾಯವಾಯಿತು. ಅವರು ಶಿಷ್ಯರಿಗೆ ಬೀಡಿ, ಸಿಗರೇಟು, ಚುಟ್ಟ, ಮದ್ಯಪಾನ ಇತ್ಯಾದಿಗಳ ಸೇವನೆಗೆ ನಿಷೇಧ ಹೇರಿ ಯಕ್ಷಗಾನ ಕಲಾವಿದರೂ ಸುಸಂಸ್ಕೃತರು ಮತ್ತು ಚಾರಿತ್ರ್ಯಶೀಲರಾಗುವಂತೆ ನೋಡಿಕೊಂಡರು. ಇಂತಹ ಗುಣಾತ್ಮಕ ತಳಹದಿಯೇ ಈ ಯಕ್ಷಗಾನ ಸಂಘವು ಆರಂಭಶೂರತನದ ಬಾಲಗ್ರಹಕ್ಕೆ ಒಳಗಾಗದೆ ಬೆಳಗುತ್ತಾ ಬೆಳೆಯಲು ಸಹಾಯಕವಾಯಿತೆನ್ನಬಹುದು.

ಯಕ್ಷಗಾನದ ಭಾಗವತಿಕೆ, ಮೃದಂಗವಾದನ ಹಾಗೂ ನೃತ್ಯಾಭಿನಯದ ತರಬೇತಿಗೆ ಇಲ್ಲಿ ವ್ಯವಸ್ಥೆ ನಿರಂತರವೂ ನಡೆದಿದೆ. ಇಲ್ಲಿನ ಮೊದಲ ಶಿಕ್ಷಕರು ಮಾನ್ಯ ಜತ್ತಪ್ಪ ರೈಗಳು. ಅವರು ಭಾಗವತಿಕೆ ಮತ್ತು ಮೃದಂಗವಾದನದ ಅಭ್ಯಾಸ ಮಾಡಿಸುತ್ತಿದ್ದರು. ಇದಕ್ಕೆ ಅಗತ್ಯವಾದ ಸಲಕರಣೆಗಳನ್ನು ಸ್ವಯಂ ಮಾಸ್ತರರೇ ಒದಗಿಸಿದ್ದರು. ನಾಟ್ಯ ಕಲಿಸುವವರೊಬ್ಬರು ಸಿಗುವ ತನಕ ಕಾಯದೆ ಮಾಸ್ತರರು ಅಭಿನಯ ಪ್ರಧಾನವಾದ ಯಕ್ಷಗಾನ ನಾಟಕವನ್ನು ತನ್ನದೇ ನಿರ್ದೇಶನದಲ್ಲಿ ತಾನೂ ಅಭಿನಯಿಸಿ ರಂಗಕ್ಕೆ ತಂದರು. ಈ ಬಗೆಯ ಯಕ್ಷಗಾನ ನಾಟಕಗಳನ್ನು ಸ್ಥಳೀಯವಾಗಿಯೂ ದೂರದ ಮಡಿಕೇರಿಯಲ್ಲಿಯೂ ಪ್ರದರ್ಶಿಸಿದರು. ಮುಂದೆ ತಮ್ಮ ಶಿಷ್ಯ ಕಡಾರು ನಾರಾಯಣ ಭಟ್ಟರ ಮೂಲಕ ನಾಟ್ಯಾಭ್ಯಾಸದ ವ್ಯವಸ್ಥೆ ಮಾಡಿದರು.

ಈ ಯಕ್ಷಗಾನ ಸಂಘವು ಅನೂಚಾನವಾಗಿ ಮುಂದುವರಿದುಕೊಂಡು ಬರುವಲ್ಲಿ ಗೋಪಾಲಕೃಷ್ಣ ದೇವರ ಕೃಪೆಯೊಂದಿಗೆ ಕೀರಿಕ್ಕಾಡು ಮಾಸ್ತರರ ಮಕ್ಕಳ ಶ್ರಮವೇ ಪ್ರಧಾನವಾದುದು. ಇವರೊಂದಿಗೆ ಕೈಜೋಡಿಸಿದವರು ಗುರುಭಕ್ತಿ ಪ್ರೇರಿತರಾದ ಊರಿನ ಶಿಷ್ಯವರ್ಗ. ಜಾತಿ-ವರ್ಗ ಭೇದವನ್ನೆಣಿಸದೆ ಶಿಷ್ಯರಲ್ಲಿ ಕಲೆಗಾರಿಕೆಯ ಸಾಮರ್ಥ್ಯವನ್ನು ಬೆಳೆಸುವ ಶುದ್ಧ ದೃಷ್ಟಿಯಿಟ್ಟುಕೊಂಡು ಯಕ್ಷಗಾನದಿಂದ ಯಾವತ್ತೂ ಪ್ರತಿಫಲವನ್ನು ಬಯಸದಿದ್ದ ಮಾಸ್ತರರಿಗೆ ಅವರ ಮಕ್ಕಳು ಹಾಗೂ ಶಿಷ್ಯರು ಈ ಸಂಘವನ್ನು ಚಿರಂತನವಾಗಿ ನಡೆಸಿಕೊಂಡು ಬರುತ್ತಿರುವುದೇ ಗುರುಕಾಣಿಕೆ ಎನ್ನಬಹುದು.

WD
ಯಕ್ಷಗಾನದ್ದೇ ಕುಟುಂಬ ಎಂಬಂತೆ ಇರುವ ಕೀರಿಕ್ಕಾಡು ಮಾಸ್ತರರ ಮನೆತನದಲ್ಲಿ ಅವರ ಮಗ ವೈದ್ಯವೃತ್ತಿಯ ಡಾ. ರಮಾನಂದ ಬನಾರಿಯವರು ಅರ್ಥಗಾರಿಕೆಯಲ್ಲಿ ವಿಜೃಂಭಿಸುವವರು. ಚಾಟೂಕ್ತಿಯ ಮಾತುಗಳನ್ನು ಬಳಸಿ ಪುರಾಣದ ಪಾತ್ರಗಳನ್ನು ಅನಾವರಣಗೊಳಿಸುವಲ್ಲಿ ಅವರು ಸಿದ್ಧಹಸ್ತರು. ಇನ್ನು ಅವರ ಸಹೋದರ ವಿಶ್ವವಿನೋದ ಬನಾರಿಯವರು ಸ್ವತಃ ಭಾಗವತರಾಗಿ ಅನೇಕ ಮಂದಿ ಶಿಷ್ಯಂದಿರನ್ನು ಸಿದ್ಧಗೊಳಿಸುತ್ತಿರುವವರು. ಇನ್ನೊಬ್ಬ ಪುತ್ರ ಮನಮೋಹನ ಬನಾರಿಯವರು ನ್ಯಾಯಾಧೀಶರ ವೃತ್ತಿಯಲ್ಲಿದ್ದರೂ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಪಳಗಿದವರು. ಇವರೆಲ್ಲರ ಹಿರಿಯಣ್ಣ ವನಮಾಲ ಕೇಶವ ಭಟ್ಟರು ಗೋಪಾಲಕೃಷ್ಣ ದೇವರ ಅರ್ಚನೆಯೊಂದಿಗೆ ಸಂಘದ ಅಧ್ಯಕ್ಷರಾಗಿ ಆಧಾರ ನೀಡುತ್ತಿದ್ದಾರೆ. ಮಾಸ್ತರರ ಮೊಮ್ಮಗ ಕುಮಾರಸುಬ್ರಹ್ಮಣ್ಯ ವಳಕುಂಜ ಇವರು ಒಬ್ಬ ಪ್ರಸಿದ್ಧ ಯಕ್ಷಗಾನ ಹಿಮ್ಮೇಳವಾದಕರಾಗಿ ಅನೇಕ ಮಂದಿ ಶಿಷ್ಯಂದಿರನ್ನು ರೂಪಿಸುತ್ತಿದ್ದಾರೆ. ವಿಶ್ವವಿನೋದ ಬನಾರಿಯವರ ಸೊಸೆ ಕಲಾವಿದೆಯಾಗಿದ್ದು ಆಕೆಗೆ ವೇಷಧಾರಿಯಾಗಿ ಮುಂದುವರಿಯಲು ಪ್ರೋತ್ಸಾಹ ನೀಡುತ್ತಿದ್ದಾರಲ್ಲದೆ ಅವರ ಮಗನೂ ಸಂಘಟನೆಯಲ್ಲಿ ನೆರವಾಗುತ್ತಿದ್ದಾನೆ.

ಇದಲ್ಲದೆ ಪರಿಣತ ಕಲಾವಿದರನ್ನು ದೇಲಂಪಾಡಿಯಂತಹ ಹಳ್ಳಿಗೆ ಕರೆಸಿ ಯಕ್ಷಗಾನದ ವಿವಿಧ ಅಂಗಗಳ ತರಬೇತಿಗೆ ವ್ಯವಸ್ಥೆ ಮಾಡುತ್ತಾರೆ. ಪರಂಪರೆಯಂತೆ ಪ್ರತಿತಿಂಗಳೂ ನಿಶ್ಚಿತವಾದ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಅಂತೆಯೇ ಪ್ರತಿ ವರ್ಷ ಅದ್ದೂರಿಯಾದ ವಾರ್ಷಿಕೋತ್ಸವವೂ ಜರಗುತ್ತದೆ. ಕಲಾವಿದರಿಗೆ ಸನ್ಮಾನ, ಪ್ರಶಸ್ತಿ ಪುರಸ್ಕಾರ ಇತ್ಯಾದಿ ಕಾರ್ಯಕ್ರಮಗಳನ್ನು ಕೂಡಾ ಈ ಸಂಘ ಇತ್ತೀಚೆಗೆ ಸೇರಿಸಿಕೊಂಡಿದೆ. ಅರುವತ್ತನೇ ವರ್ಷಾಚರಣೆಯಾಗಿ ಆಚರಿಸಿದ ವಜ್ರ ಮಹೊತ್ಸವದ ಸಂದರ್ಭದಲ್ಲಿ ಸ್ಥಾಪಿಸಿದ "ಕೀರಿಕ್ಕಾಡು ಪ್ರಶಸ್ತಿ"ಯನ್ನು ಅವರ ಶಿಷ್ಯ ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ಪ್ರದಾನ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸುಭದ್ರವಾದ ಸಭಾ ಭವನ ಹಾಗೂ ರಂಗವೇದಿಕೆ ನಿರ್ಮಾಣಗೊಂಡಿದೆ. ವಜ್ರ ಪತ್ರ ಎಂಬ ಸಂಸ್ಮರಣ ಗ್ರಂಥವನ್ನು ಹೊರತಂದಿದ್ದಾರೆ. ಹೀಗೆ ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನವಾಗಿ ಬನಾರಿ ಗೋಪಾಲಕೃಷ್ಣ ಯಕ್ಷಗಾನ ಸಂಘವು ವರ್ಧಿಸುತ್ತಿರುವುದು ಯಕ್ಷಗಾನ ಪ್ರಪಂಚಕ್ಕೆ ಹೆಮ್ಮೆಯ ವಿಷಯವಾಗಿದೆ.

-ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ
[ಲೇಖಕರ ಪರಿಚಯ: ಡಾ. ಚಂದ್ರಶೇಖರ ದಾಮ್ಲೆಯವರು ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದು ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸುಳ್ಯದಲ್ಲಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಇವರು ಕೀರಿಕ್ಕಾಡು ಕುಟುಂಬದೊಂದಿಗೆ ಆತ್ಮೀಯರಾಗಿದ್ದಾರೆ.]
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯಕ್ಷಗಾನ, ಬನಾರಿ ಗೋಪಾಲಕೃಷ್ಣ ಕಲಾ ಸಂಘ, ದೇಲಂಪಾಡಿ, ಕೀರಿಕ್ಕಾಡು ವಿಷ್ಣು ಮಾಸ್ತರ್